ಕರಾವಳಿ

ಮದನಿ ಮತ್ತು ಮಲ್ಬಾರಿ ಉಗ್ರರ ಜತೆ ಸಂಪರ್ಕ ಆರೋಪ : ಮದನಿ ಜಾಮೀನು ರದ್ಧುಗೊಳಿಸುವಂತೆ ಪ್ರಣವಾನಂದ ಸ್ವಾಮೀಜಿ ಆಗ್ರಹ

Pinterest LinkedIn Tumblr

Pranavananda-Swamiji-press

ಮಂಗಳೂರು : ಅಬ್ದುಲ್‌ ನಾಸಿರ್‌ ಮದನಿಗೆ ಸುಪ್ರೀಂ ಕೋರ್ಟು ನೀಡಿರುವ ಜಾಮೀನನ್ನು ಕೂಡಲೇ ರದ್ದುಪಡಿಸಬೇಕು ಎಂದು ಅಖೀಲ ಭಾರತ ಹಿಂದೂ ಮಹಾ ಸಭಾದ ದಕ್ಷಿಣ ಭಾರತದ ಉಸ್ತುವಾರಿ ಶ್ರೀ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ನಾಸಿರ್‌ ಮದನಿ ಮತ್ತು ರಶೀದ್‌ ಮಲ್ಬಾರಿ ಉಗ್ರರ ಜತೆ ಸಂಪರ್ಕ ಹೊಂದಿರುವ ಆರೋಪ ಇರುವುದರಿಂದ ಅಬ್ದುಲ್‌ ನಾಸಿರ್‌ ಮದನಿಗೆ ಸುಪ್ರೀಂ ಕೋರ್ಟು ಜಾಮೀನು ನೀಡಿರುವುದು ಸರಿಯಾದ ಕ್ರಮವಲ್ಲ, ಅದನ್ನು ಪುನರ್‌ ಪರಿಶೀಲಿಸಿ ಜಾಮೀನನ್ನು ರದ್ದುಪಡಿಸಬೇಕು, ಸುಪ್ರೀಂ ಕೋರ್ಟಿನಲ್ಲಿ ಜಾಮೀನು ಅರ್ಜಿ ವಿಚಾರಣೆಯ ವೇಳೆ ಕರ್ನಾಟಕದ ಪಬ್ಲಿಕ್‌ ಪ್ರಾಸಿಕ್ಯೂಟರ್‌ 8 ನಿಮಿಷಗಳ ಕಾಲ ಮೌನ ವಹಿಸಿದ್ದು, ಇದರಿಂದಾಗಿ ಮದನಿಗೆ ಜಾಮೀನು ದೊರೆಯುವಂತಾಯಿತು. ಆದ್ದರಿಂದ ಈ ಜಾಮೀನು ಸಿಗಲು ಕರ್ನಾಟಕವೇ ಕಾರಣ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.

ಮದನಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದ್ದು, ಕೇರಳ ಸರಕಾರ ಇದಕ್ಕಾಗಿ 36 ಲಕ್ಷ ರೂ. ವ್ಯಯಿಸಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸುವ ಕ್ರಮ ಸರಿಯಲ್ಲ; ಈ ಬಗ್ಗೆ ಈ ಖಾಸಗಿ ಆಸ್ಪತ್ರೆಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಹಿಂದೂ ವಿರೋಧಿ ನೀತಿ :

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಸಮಾಜದ ಮುಲ್ಲಾಗಳಿಗೆ 3,400 ರೂ. ವೇತನ ನಿಗದಿ ಪಡಿಸಿರುವುದು ಹಾಗೂ ಹಿಂದೂ ದೇವಳಗಳ ಅರ್ಚಕರಿಗೆ 850 – 900 ರೂ. ಮಾಸಿಕ ವೇತನ ಮಾತ್ರ ನೀಡುವ ಮೂಲಕ ತಾರತಮ್ಯ ಎಸಗಿರುವುದು ಹಿಂದೂ ವಿರೋಧಿ ನೀತಿಯಾಗಿದೆ. ಜಾತ್ಯತೀತ ವ್ಯವಸ್ಥೆಗೂ ಇದು ವಿರುದ್ಧವಾಗಿದೆ ಎಂದು ಆರೋಪಿಸಿದ ಶ್ರೀ ಪ್ರಣವಾನಂದ ಸ್ವಾಮೀಜಿ, ಮುಸ್ಲಿಂ ಮತ್ತು ಕ್ರೈಸ್ತರಿಗೆ ವಿವಿಧ ಸೌಲಭ್ಯಗಳನ್ನು ವಿಸ್ತರಿಸಿ ಹಿಂದೂಗಳನ್ನು ಬಲಿಪಶು ಮಾಡುವ ಕ್ರಮ ನಿಲ್ಲಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದರು.

ಮದ್ರಸಗಳಿಗೆ ಅನುದಾನ ಅಗತ್ಯವಿಲ್ಲ : ಪುನರ್‌ ಪರಿಶೀಲಿಸಲು ಮನವಿ

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮದ್ರಸಗಳಿಗೆ 100 ಕೋಟಿ ರೂ. ಅನುದಾನ ಒದಗಿಸುವ ಪ್ರಸ್ತಾವ ಮಾಡಿರುವುದು ಖಂಡನೀಯ. ಮದ್ರಸಗಳಿಂದ ಒಟ್ಟು ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ನರೇಂದ್ರ ಮೋದಿ ಅವರು ಈ ಅನುದಾನ ನೀಡಿಕೆಯನ್ನು ಪುನರ್‌ ಪರಿಶೀಲಿಸ ಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಮುಂದಿನ ತಿಂಗಳು ಮೋದಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ವಿಧವೆಯರಿಗೆ ಅರ್ಚಕ ಹುದ್ದೆ ಸರಿಯಲ್ಲ : ವೈದಿಕ ವಿಧಿ ವಿಧಾನಗಳ ಬಗ್ಗೆ ಅನುಮಾನ

ಮಹಿಳೆಯರಿಗೆ ಅರ್ಚಕ ಸ್ಥಾನ ಕೊಡುವ ಬಗ್ಗೆ ನನ್ನ ವಿರೋಧವಿಲ್ಲ. ಆದರೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಿಧವೆಯರಿಗೆ/ ಮಹಿಳೆಯರಿಗೆ ಅರ್ಚಕ ಸ್ಥಾನ ನೀಡಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವ ಕ್ರಮ ವೈದಿಕ ವಿಧಿ ವಿಧಾನಗಳ ಪ್ರಕಾರ ಸರಿಯಲ್ಲ. ಕೇರಳದ ಚೆಂಬಯಂತಿ, ವರ್ಕಲಗಳಲ್ಲಿಯೂ ಮಹಿಳೆಯರನ್ನು ಅರ್ಚಕರಾಗಿ ನೇಮಕ ಮಾಡಲಾಗಿಲ್ಲ. ಶಾಸ್ತ್ರಗಳ ಪ್ರಕಾರ ಪೂಜೆ ಮಾಡುವವರಲ್ಲಿ ಪಂಚ ಶುದ್ಧಿ ಇರಬೇಕು. ಕುದ್ರೋಳಿ ದೇವಳದಲ್ಲಿ ಶಿವನ ಪ್ರತಿಷ್ಠೆ ತಾಂತ್ರಿಕ ರೀತಿಯಲ್ಲಿ ವೈದಿಕ ವಿಧಿ ವಿಧಾನಗಳ ಪ್ರಕಾರ ನಡೆದಿದೆಯೇ ಇಲ್ಲವೇ ಎನ್ನುವುದನ್ನು ಜನಾರ್ದನ ಪೂಜಾರಿ ಸ್ಪಷ್ಟಪಡಿಸ ಬೇಕೆಂದು ಶ್ರೀ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದರು.

ದೀರ್ಘಾವದಿ ಕೈದಿಗಳ ಜೈಲು ವಿಮೋಚನೆಗೆ ಮುಂದಾಗಬೇಕು..

15ರಿಂದ 18 ವರ್ಷಗಳ ಕಾಲ ಜೈಲಿನಲ್ಲಿದ್ದ ಕೈದಿಗಳು ಮಾನಸಿಕವಾಗಿ ಪರಿವರ್ತನೆ ಹೊಂದಿ ಈಗ ಸರಿ ದಾರಿಗೆ ಬಂದಿರುತ್ತಾರೆ. ಆದ್ದರಿಂದ ಅಂಥವರ ಜೈಲು ವಿಮೋಚನೆಗೆ ಸರಕಾರ ಮುಂದಾಗ ಬೇಕು. ಈ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಈ ಬಗ್ಗೆ ದೃಢ ನಿರ್ಧಾರ ಕೈಗೊಂಡಿದ್ದರು. ಅಂತಹುದೇ ದಿಟ್ಟತನವನ್ನು ಈಗಿನ ಮುಖ್ಯಮಂತಿ ಸಿದ್ದರಾಮಯ್ಯ ಅವರೂ ತೋರಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.

ಭ್ರಷ್ಟಾಚಾರದ ಬಗ್ಗೆ ಪ್ರಸ್ತಾವಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ಎಸಗದಿರ ಬಹುದು; ಆದರೆ ಅವರ ಸಂಪುಟದಲ್ಲಿ ಭ್ರಷ್ಟರು ಮತ್ತು ಕಳಂಕಿತರನ್ನು ಸೇರಿಸಿಕೊಂಡು ರಕ್ಷಣೆ ನೀಡುತ್ತಿದ್ದಾರೆ. ಇದು ಕಾಂಗ್ರೆಸ್‌ ಪಕ್ಷಕ್ಕೂ ಕೆಟ್ಟ ಹೆಸರು ತರುತ್ತದೆ ಎಂಬುದನ್ನು ಅವರು ಮರೆಯಬಾರದು ಎಂದರು.

ಹಿಂದುತ್ವಕ್ಕಾಗಿ ಮತ್ತು ಗೋ ಹತ್ಯೆ ವಿರೋಧಿಸಿದ ಯುವಕರನ್ನು ಬಂಧಿಸುವ ಕ್ರಮ ಸರಿಯಲ್ಲ. ಆದರೆ ತಪ್ಪು ಯಾರೇ ಎಸಗಿದರೂ ಕಾನೂನು ಪ್ರಕಾರ ಶಿಕ್ಷೆ ಒದಗಿಸಲಿ. ಮಲ್ಲಿಕಾರ್ಜುನ ಬಂಡೆ ಅವರಿಗೆ ಘೋಷಿಸಿದ 10 ಲಕ್ಷ ರೂ. ಪರಿಹಾರ ಇನ್ನೂ ಪಾವತಿಯಾಗದಿರುವುದು ಖೇದಕರ ಎಂದರು.

ಚರ್ಚ್‌ ದಾಳಿ ಸಂಬಂಧಿತ ನ್ಯಾ| ಬಿ.ಕೆ. ಸೋಮಶೇಖರ ಆಯೋಗದ ವರದಿ ತಿರಸ್ಕರಿಸಿರುವುದು ಸರಕಾರದ ರಾಜಕೀಯ ಷಡ್ಯಂತ್ರ. ಈ ವರದಿಯನ್ನು ವಾಪಸ್‌ ಪಡೆದರೆ ಇಂತಹ ಆಯೋಗಳ ಎಲ್ಲ ವರದಿಗಳನ್ನು ಹಿಂಪಡೆಯ ಬೇಕಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದರು.

ಅ. ಭಾ. ಹಿಂದೂ ಮಹಾ ಸಭಾದ ರಾಜ್ಯ ಉಪಾಧ್ಯಕ್ಷ ರಾಜೇಶ್‌ ಪೂಜಾರಿ, ಸಂಘಟನಾ ಕಾರ್ಯದರ್ಶಿ ಧರ್ಮೇಂದ್ರ, ಜಿಲ್ಲಾಧ್ಯಕ್ಷ ಶ್ರವಣ್‌ ಕುಮಾರ್‌, ಕಾರ್ಯಾಧ್ಯಕ್ಷ ಚೇತನ್‌ ಮಲ್ಯ, ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ರೋಹಿದಾಸ್‌, ಉಪಾಧ್ಯಕ್ಷ ಮಂಜುನಾಥ್‌ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment