ಮಂಗಳೂರು : ಕರ್ತವ್ಯ ನಿರ್ವಹಣೆಯ ಸಂದರ್ಭ ತಮ್ಮ ಪ್ರಾಣವನ್ನು ಕಳೆದುಕೊಂಡು ಹುತಾತ್ಮರಾದ ಪೊಲೀಸರ ತ್ಯಾಗ, ಬಲಿದಾನವನ್ನು ನಾವು ನಿತ್ಯ ಸ್ಮರಣೆ ಮಾಡಬೇಕು’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ ಅವರು ಹೇಳಿದರು.
ಅವರು ನಗರದ ಸಿಆರ್ ಪಿ ಮೈದಾನದಲ್ಲಿ ಮಂಗಳವಾರ ಏರ್ಪಡಿಸಲಾದ ಪೊಲೀಸ್ ಹುತಾತ್ಮರ ದಿನ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. `1959ರಿಂದ ಹಲವಾರು ಪೊಲೀಸರು ಕರ್ತವ್ಯ ನಿರ್ವಹಣೆಯ ಸಂದರ್ಭ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಒಟ್ಟು 65೦ ಮಂದಿ ಭಾರತೀಯ ಪೊಲೀಸರು ಹುತಾತ್ಮರಾಗಿದ್ದಾರೆ. ಅವರ ಸ್ಮರಣೆ ಮಾಡಬೇಕಾದದ್ದು ನಮ್ಮ ಕರ್ತವ್ಯ ಎಂದರು.
2013ರಿಂದ 2014ರವರೆಗೆ ಪ್ರಾಣಬಲಿದಾನ ಮಾಡಿದ ಪೊಲೀಸರ ಹೆಸರುಗಳನ್ನು ಜಿಲ್ಲಾ ಪೊಲೀಸ್ ಕಮಿಷನರ್ ಹಿತೇಂದ್ರ ಹಾಗೂ ಶರಣಪ್ಪ ಅವರು ವಾಚಿಸಿದರು. ಬಳಿಕ ಹುತಾತ್ಮ ಪೊಲೀಸರ ಗೌರವಾರ್ಥ ಪೊಲೀಸ್ ಧ್ವಜವನ್ನು ಕೆಳಗಿಸಿ ಎರಡು ನಿಮಿಷಗಳ ಕಾಲ ಮೌನ ಪ್ರಾರ್ಥನೆ ಮೂಲಕ ಗೌರವ ಅರ್ಪಿಸಲಾಯಿತು.
ಈ ಸಂದರ್ಭ ಪಶ್ಚಿಮ ವಲಯ ಐಜಿ ಅಮೃತ್, ಜಿಲ್ಲಾ ನ್ಯಾಯಾಧೀಶೆ ಎಂ.ಜಿ.ಉಮಾ ಪಾಲ್, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ವಿವಿಧ ವಿಭಾಗದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡು ಕರ್ತವ್ಯದ ಸಂದರ್ಭ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗಳಿಗೆ ಗೌರವ ಅರ್ಪಿಸಿದರು.