ಕರಾವಳಿ

ಸಿಂಡಿಕೇಟ್ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆ :ರೊ| ಇ. ಶ್ರೀನಿವಾಸ ಕುಡ್ವರಿಗೆ ಸನ್ಮಾನ

Pinterest LinkedIn Tumblr

Syndicat_founders_day_1

ಮಂಗಳೂರು : ಸಿಂಡಿಕೇಟ್ ಬ್ಯಾಂಕಿನ ’89ನೇ ಸಂಸ್ಥಾಪನಾ ದಿನಾಚರಣೆ’ಯು ಬ್ಯಾಂಕಿನ ಮಣಿಪಾಲದ ಪ್ರಧಾನ ಆಡಳಿತ ಕಛೇರಿಯ ಸ್ವರ್ಣ ಮಹೋತ್ಸವ ಸಭಾಂಗಣದಲ್ಲಿ  ವಿಜೃಂಭಣೆಯಿಂದ ಜರಗಿತು.

ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಯವರು ಸಮಾರಂಭವನ್ನು ಉದ್ಘಾಟಿಸಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಸಿಂಡಿಕೇಟ್ ಬ್ಯಾಂಕಿನ ಪಾತ್ರ ಮಹತ್ವವಾದುದು. ಅವಿಭಜಿತ ದ.ಕ. ಜಿಲ್ಲೆಯು ಬ್ಯಾಂಕಿಂಗ್ ಕ್ಷೇತ್ರದ ತವರೂರಾಗಿದ್ದು, ಇಲ್ಲಿ ಸ್ಥಾಪನೆಗೊಂಡ ಸಿಂಡಿಕೇಟ್ ಬ್ಯಾಂಕ್ ದೇಶದ ಬೃಹತ್ ಮತ್ತು ದೀರ್ಘಕಾಲದ ಅಸ್ತಿತ್ವ ಹೊಂದಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದು, ಸಾಮಾಜಿಕ, ವಾಣಿಜ್ಯ, ಶೈಕ್ಷಣಿಕ ಕ್ಷೇತ್ರಗಳಿಗೆ ಸ್ಪಂದಿಸಿ, ಸಹಕರಿಸುವುದರ ಜೊತೆಗೆ ಲಕ್ಷಾಂತರ ವಿದ್ಯಾವಂತರಿಗೆ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Syndicat_founders_day_4

 ಬ್ಯಾಂಕಿನ ಸ್ಥಾಪಕ ನಿರ್ದೇಶಕರಾದ ಮಣಿಪಾಲ ಮೂಲದ ದಿ| ಟಿ. ಉಪೇಂದ್ರ ಪೈ, ದಿ| ಡಾ. ಟಿ.ಎಂ.ಎ. ಪೈ ಮತ್ತು ಮಂಗಳೂರು ಮೂಲದ ದಿ| ವಿ.ಎಸ್. ಕುಡ್ವರು ತಮಗೆ ಆತ್ಮೀಯರಾಗಿದ್ದು, ಅವರ ದೂರದೃಷ್ಟಿಯ ಫಲವಾಗಿ ಬ್ಯಾಂಕ್ ಇಂದು ದೇಶದಲ್ಲಿ ಉನ್ನತ ಶ್ರೇಣಿಗೆ ತಲುಪಿದೆ ಎಂದು ನುಡಿದರು.

ಮಣಿಪಾಲ ವಿಶ್ವವಿದ್ಯಾನಿಲಯದ ಸಹ-ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧ್ಯಕ್ಷರಾದ ಡಾ. ಎನ್. ಕೆ. ತಿಂಗಳಾಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಬ್ಯಾಂಕಿನ ಕ್ಷೇತ್ರೀಯ ಮಹಾಪ್ರಬಂಧಕ ಶ್ರೀ ಕೆ.ಟಿ. ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ಯಾಂಕ್ ಸಂಸ್ಥಾಪಕರ ಪರಿಚಯ ಮತ್ತು ಅವರ ಅಮೂಲ್ಯ ಕೊಡುಗೆಯ ವಿವರ ನೀಡಿದರು.

Syndicat_founders_day_2 Syndicat_founders_day_3

ಈ ಸಂದರ್ಭದಲ್ಲಿ ಸ್ಥಾಪಕ ನಿರ್ದೇಶಕ ದಿ| ವಿ.ಎಸ್. ಕುಡ್ವರ ಸ್ಮರಣಾರ್ಥ ಅವರ ದ್ವಿತೀಯ ಪುತ್ರ ಹಾಗೂ ಕೆನರಾ ವರ್ಕ್‌ಶಾಪ್ಸ್ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾದ ರೊ| ಇ. ಶ್ರೀನಿವಾಸ ಕುಡ್ವರನ್ನು ಗೌರವಿಸಿ, ಸನ್ಮಾನಿಸಲಾಯಿತು ಹಾಗೂ ಸ್ಥಾಪಕರ ಕುಟುಂಬಸ್ಥರಾದ ಮಣಿಪಾಲ ಮೂಲದ ಟಿ. ನಾರಾಯಣ ಪೈ ಹಾಗೂ ಟಿ. ಸತೀಶ್ ಪೈ ಯವರನ್ನು ಸನ್ಮಾನಿಸಲಾಯಿತು.

ಬ್ಯಾಂಕಿನ ಮಹಾಪ್ರಬಂಧಕರಾದ ಶ್ರೀ ಪಿ.ಕೆ. ಸಕ್ಸೇನಾ ತಮ್ಮ ಸ್ವಾಗತ ಭಾಷಣದಲ್ಲಿ, ಸಿಂಡಿಕೇಟ್ ಬ್ಯಾಂಕ್ 4.40 ಕೋಟಿ ಸಂತೃಪ್ತ ಗ್ರಾಹಕರನ್ನು ಹೊಂದಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಆರಂಭಿಸಿದ ಕೀರ್ತಿ ಸಿಂಡಿಕೇಟ್ ಬ್ಯಾಂಕ್‌ಗೆ ಸಲ್ಲುತ್ತದೆ. 4 ಲಕ್ಷ ಕೋಟಿ ರೂ. ಗೂ ಅಧಿಕ ವ್ಯವಹಾರವನ್ನು ಹೊಂದಿರುವ ಸಿಂಡಿಕೇಟ್ ಬ್ಯಾಂಕ್ ದೇಶದಾದ್ಯಂತ 3,362 ಶಾಖೆಗಳನ್ನು ತೆರೆದು, ಗ್ರಾಹಕ ಸ್ನೇಹಿ ಎನಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

ಮಹಾ ಪ್ರಬಂಧಕ ಶ್ರೀ ಎಂ.ಪಿ. ನಾಗಪಾಲ ವಂದನಾರ್ಪಣೆಗೈದರು. ಸಿಂಡಿಕೇಟ್ ಬ್ಯಾಂಕಿನ ಉದ್ಯಮ ಆಡಳಿತ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಬಂಧಕ ಶ್ರೀ ಫ್ರಾನ್ಸಿಸ್ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದ್ದರು.

Write A Comment