ಕಾಸರಗೋಡು, ಅ.24: ಎಂಡೋಸಲ್ಫಾನ್ ಭೀಕರತೆಗೆ ಸಾಕ್ಷಿ ಎಂಬಂತೆ ವಿಚಿತ್ರ ರೋಗಕ್ಕೆ ತುತ್ತಾಗಿದ್ದ ಶಿಶುವೊಂದು ಕೊನೆಗೂ ಜೀವ ಕಳೆದುಕೊಂಡಿದೆ. ಪೆರ್ಲ ಪೆಲ್ತಾಜೆಯ ಸುಂದರ ನಾಯ್ಕಾ ಎಂಬವರ ಪುತ್ರ ಲೋಹಿತ್ ಇಂದು ಮುಂಜಾನೆ ಕೊನೆಯುಸಿರೆಳೆದಿದೆ.
ವೈಕಲ್ಯಕ್ಕೆ ತುತ್ತಾಗಿದ್ದ ಮಗುವಿನ ತಲೆ ದಿನೇ ದಿನೇ ದೊಡ್ಡದಾಗುವ ವಿಚಿತ್ರ ರೋಗಕ್ಕೆ ತುತ್ತಾಗಿತ್ತು. ಸೆ.13ರಂದು ಮಂಗಳೂರು ಸರಕಾರಿ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಮಗುವಿನ ಎಡಕಿವಿ, ಕಣ್ಣಿನ ಭಾಗ ಮತ್ತು ಕೈಕಾಲುಗಳು ವೈಕಲ್ಯವನ್ನು ಹೊಂದಿತ್ತು. ಹೈಡ್ರೋಸೆಫಾಲಸ್ ಎಂಬ ವಿಚಿತ್ರ ರೋಗಕ್ಕೆ ತುತ್ತಾಗಿದ್ದ ಶಿಶುವಿನ ಚಿಕಿತ್ಸೆಗೆ ಭಾರೀ ವೆಚ್ಚ ಅಗತ್ಯ ಇತ್ತು. ಆದರೆ ಬಡ ಕುಂಟುಂಬವಾದುದರಿಂದ ಆರಂಭದಲ್ಲಿ ಚಿಕಿತ್ಸೆ ಪಡೆಯಲು ಪೋಷಕರಿಗೆ ಸಾಧ್ಯವಾಗಲಿಲ್ಲ. ಇದರಿಂದ ಮನೆಗೆ ತಂದು ಆರೈಕೆ ಮಾಡಲಾಗಿತ್ತು.
ಆದರೆ ದಿನ ಕಳೆದಂತೆ ಮಗುವಿನ ತಲೆ ಬೆಳೆಯ ತೊಡಗಿತು. ಭೀಕರ ಅಂಗವೈಕಲ್ಯಕ್ಕೆ ತುತ್ತಾಗಿದ್ದ ಮಗು ಇಂದು ಮುಂಜಾನೆ ಕೊನೆಯುಸಿರೆಳೆದಿದೆ. ಕಾಸರಗೋಡಿನ 11 ಗ್ರಾ.ಪಂ. ವ್ಯಾಪ್ತಿಯಲ್ಲಿ ನೆಲ, ಜಲದಲ್ಲಿ ಎಂಡೋಸಲ್ಫಾನ್ ಅಂಶ ಇಲ್ಲ ಎಂದು ಆರೋಗ್ಯ ಇಲಾಖೆ ಅಭಿಪ್ರಾಯಪಡುತ್ತಿದ್ದರೂ ಈಗಲೂ ಈ ಅಂಶ ಇದೆ ಎಂಬುದನ್ನು ಇದು ಸಾಬೀತು ಪಡಿಸುತ್ತಿದೆ. ತೋಟಗಾರಿಕಾ ನಿಗಮದ ಗೇರುಮರಗಳಿಗೆ ದಶಕಗಳ ಕಾಲ ಸಿಂಪಡಿಸಿದ ಎಂಡೋಸಲ್ಫಾನ್ನ ಅಂಶವು ಇಂದಿಗೂ ನೆಲ, ಜಲದಲ್ಲಿ ಉಳಿದುಕೊಂಡಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.