ಉಡುಪಿ: ಸಮುದ್ರಕ್ಕೆ ವಿಹಾರಕ್ಕೆಂದು ಬಂದಿದ್ದ ಕಾರ್ಕಳದ ಒಂದೇ ಕುಟುಂಬದ ಐವರು ಸಮುದ್ರ ಪಾಲಾದ ಘಟನೆ ಶನಿವಾರ ಸಂಜೆ ಕಾಪು ಬೀಚ್ನಲ್ಲಿ ನಡೆದಿದೆ.
ನೀರುಪಾಲಾದ ಐವರಲ್ಲಿ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದು, ಓರ್ವನ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕಾರ್ಕಳ ಕಾಳಿಕಾಂಬಾ ದೇವಸ್ಥಾನ ಬಳಿಯ ನಿವಾಸಿ ಪ್ರಕಾಶ್ ರಾವ್ ಅವರ ಸಹೋದರ ಜಗದೀಶ್ ರಾವ್ (40), ಚಿಕ್ಕಮ್ಮನ ಮಗ ಸಾಣೂರು ನಿವಾಸಿ ಸುನೀಲ್ (33) ಮತ್ತು ಸಹೋದರನ ಮಗ ಹರ್ಷ ಬೆಂಗಳೂರು (14) ಸಮುದ್ರದಲ್ಲಿ ಮುಳುಗಿ ಕಾಣೆಯಾಗಿದ್ದು, ಜತೆಗಿದ್ದ ಹರೀಶ್ಚಂದ್ರ (45) ಮತ್ತು ಪ್ರಜ್ವಲ್ (1೫)ಎನ್ನುವವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಘಟನೆ ವಿವರ: ಕಾರ್ಕಳದ ಪ್ರಕಾಶ್ ರಾವ್ ಮತ್ತು ಅವರ ಪತ್ನಿ ರಾಜೇಶ್ವರಿ ಸೇರಿದಂತೆ ಒಂದೇ ಕುಟುಂಬದ ಸುಮಾರು ಹತ್ತು ಮಂದಿಯೊಂದಿಗೆ ಶನಿವಾರ ಸಂಜೆ ವೇಳೆಗೆ ಕಾಪು ಬೀಚ್ಗೆ ಬಂದಿದ್ದು, ಸಮುದ್ರದಲ್ಲಿ ಆಟ ಆಡುವ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ನೀರು ಪಾಲಾದವರಲ್ಲಿ ಜಗದೀಶ್ ರಾವ್ ಅವರ ಮೃತದೇಹ 6.20ರ ವೇಳೆಗೆ ಕಾಪು ಬೀಚ್ನ ಬಂಡೆಯ ಬಳಿ ಸಿಕ್ಕಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸಮುದ್ರದಲ್ಲಿ ತೇಲಿ ಬರುತ್ತಿದ್ದ ಜಗದೀಶ್ ಅವರ ಮೃತದೇಹವನ್ನು ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರ ತಂಡದ ಚಂದನ್ ಅವರು ಮೇಲಕ್ಕೆತ್ತಿ ಹಾಕಿದ್ದಾರೆ.
ಮೃತ ಜಗದೀಶ್ ವಿವಾಹಿತರಾಗಿದ್ದು ಕಾರ್ಕಳದಲ್ಲಿ ಫೋಟೋ ಲ್ಯಾಮಿನೇಶನ್ ವೃತ್ತಿ ಮಾಡುತ್ತಿದ್ದರು. ಇವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ನೀರು ಪಾಲಾಗಿರುವ ಮತ್ತೋರ್ವ ವ್ಯಕ್ತಿ ಸಾಣೂರಿನ ಸುನೀಲ್ ರಾವ್ ಅವಿವಾಹಿತನಾಗಿದ್ದು, ಆದಿವುಡುಪಿಯ ಬಸ್ ಗ್ಯಾರೇಜ್ನಲ್ಲಿ ವೃತ್ತಿ ಮಾಡುತ್ತಿದ್ದರು. ಬಾಲಕ ಹರ್ಷ ಅವರು ಹರಿಶ್ಚಂದ್ರ ಮತ್ತು ಭಾಗೀರಥಿ ದಂಪತಿಯ ಪುತ್ರನಾಗಿದ್ದು, ಬೆಂಗಳೂರಿನ ಶಾಲೆಯೊಂದರಲ್ಲಿ ಶಿಕ್ಷಣ ಪಡೆಯುತ್ತಿದ್ದರು. ನೀರು ಪಾಲಾಗಿರುವ ಎಲ್ಲರೂ ಪರಸ್ಪರ ರಕ್ತ ಸಂಬಂಧಿಗಳೇ ಆಗಿದ್ದಾರೆ.
ರಕ್ಷಣೆಗೊಳಗಾದ ಹರಿಶ್ಚಂದ್ರ ಮತ್ತು ಮಗ ಪ್ರಜ್ವಲ್ ಅವರು ಕಾಪು ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಬ್ಬದ ರಜೆಗೆ ಬಂದಿದ್ದರು: ಪ್ರಕಾಶ್ ರಾವ್ ಅವರ ಸಹೋದರ ಹರಿಶ್ಚಂದ್ರ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ದೀಪಾವಳಿ ರಜೆಯಲ್ಲಿ ಕಾರ್ಕಳದ ತಮ್ಮ ಕುಟುಂಬದ ಮೂಲ ಮನೆಗೆ ಬಂದಿದ್ದರು. ಮಕ್ಕಳ ಒತ್ತಾಯಕ್ಕೆ ಮಣಿದು ಸಂಜೆ ಅಲ್ಲಿಂದ ಹೊರಟು ಕಾಪು ಬೀಚ್ಗೆ ಬಂದಿದ್ದು ಬೀಚ್ಗೆ ಬಂದ ಕೆಲವೇ ಹೊತ್ತಲ್ಲಿ ಈ ದುರ್ಘಟನೆ ಸಂಭವಿಸಿದೆ.
ಕಾಪು ಪೊಲೀಸ್ ಠಾಣಾಧಿಕಾರಿ ಮಂಜಪ್ಪ, ಎಎಸ್ಐಗಳಾದ ಗಣೇಶ್, ಜಯಶೀಲ ಮತ್ತು ಸಿಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಆಪದ್ಭಾಂಧವ ಖ್ಯಾತಿಯ ಸೂರಿ ಶೆಟ್ಟಿ ಸ್ಥಳದಲ್ಲಿದ್ದು, ನೀರಿನಲ್ಲಿ ಮುಳುಗಿರುವ ಇಬ್ಬರಿಗಾಗಿ ಶೋಧ ಮುಂದುವರಿದಿದೆ.