ಮಂಗಳೂರು, ಅ.26 : ನಗರದ ಸೆಂಟ್ರಲ್ ರೈಲ್ವೆ ನಿಲ್ದಾ ಣದ ಬಳಿಯಿಂದ ಕೇರಳ ರಾಜ್ಯದ ವ್ಯಕ್ತಿಯೊಬ್ಬರನ್ನು ಅಪಹರಿಸಿ ನಗದು, ಲ್ಯಾಪ್‌ಟಾಪ್ ಹಾಗೂ ಇತರ ಸೊತ್ತುಗಳನ್ನು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಆರೋಪಿಯೋರ್ವನನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.ನಂದಿಗುಡ್ಡ ಸೈಂಟ್ ಜೋಸೆಫ್ ನಗರ ಕಂಪೌಂಡ್ ನಿವಾಸಿ ಸಂತೋಷ್ ಕುಮಾರ್ ಡಿ’ಸಿಲ್ವ (19) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆತನಿಂದ ಓಮ್ನಿ ವಾಹನ ವಶಪಡಿಸಿಕೊಳ್ಳಲಾಗಿದೆ. ಬಂಧಿತನಿಂದ ದೊರೆತ ಮಾಹಿತಿಯ ಆಧಾರದಲ್ಲಿ ಪ್ರಕರಣ ಇನ್ನೂ ಮೂವರಿಗಾಗಿ ಹುಡುಕಾಟ ಆರಂಭವಾಗಿದೆ. ಶನಿವಾರ ಕೇಂದ್ರ ರೈಲ್ವೆ ನಿಲ್ದಾಣದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆರೋಪಿ ಓಮ್ನಿ ಚಲಾಯಿಸಿಕೊಂಡು ಬಂದಿದ್ದ. ನಿಲ್ಲಿಸಲು ಸೂಚಿಸಿದಾಗ ಆರೋಪಿ ಪರಾರಿಯಾಗಲು ಯತ್ನಿಸಿದ್ದ. ಸಂಶಯಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ದರೋಡೆ ಪ್ರಕರಣ ಬೆಳಕಿಗೆ ಬಂದಿತ್ತು.
ಸಂತೋಷ್ ಕುಮಾರ್ ಮತ್ತು ಅತನ ಜೊತೆಗಾರ ಮೂವರು ಹೊರ ರಾಜ್ಯದಿಂದ ನಗರಕ್ಕೆ ಬಂದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಹಲವು ದರೋಡೆ ಕೃತ್ಯಗಳನ್ನು ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ.27ರಂದು ರಾತ್ರಿ ಕೇರಳದ ಕೊಟ್ಟಾಯಂನ ಕಾರುಕಚಲ್ ನಿವಾಸಿ ಸಾಜನ್ ಅವರು ಮಂಗಳೂರು ರೈಲ್ವೆ ನಿಲ್ದಾಣದ ಕಡೆಗೆ ಹೋಗುತ್ತಿದ್ದಾಗ ಬಿಳಿ ಬಣ್ಣದ ಮಾರುತಿ ಓಮ್ನಿ ಕಾರ್‌ನಲ್ಲಿ ಐವರು ಬಂದಿದ್ದು ಅವರಲ್ಲಿ ನಾಲ್ವರು ಸಾಜನ್‌ರನ್ನು ವಾಹನದೊಳಗೆ ತಳ್ಳಿ ಅಪಹರಿಸಿಕೊಂಡು ಹೋಗಿದ್ದರು. ಕಾರಿನಲ್ಲಿ ಹೋಗುತ್ತಿದ್ದಾಗಲೇ ಹಲ್ಲೆ ನಡೆಸಿದ್ದರು.
ಬಳಿಕ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ಸಾಜನ್‌ರ ಕುತ್ತಿಗೆಗೆ ಚೈನ್‌ನಿಂದ ಬಿಗಿದು ಚೂರಿ ತೋರಿಸಿ, ಲ್ಯಾಪ್‌ಟಾಪ್, ಚಾರ್ಜರ್, ಕೈಯಲ್ಲಿದ್ದ ಉಂಗುರ, ಕಿತ್ತುಕೊಂಡಿದ್ದರು. ಪರ್ಸ್‌ನಲ್ಲಿಟ್ಟಿದ್ದ ಐಸಿಐಸಿಐ ಬ್ಯಾಂಕಿನ ಎಟಿಎಂ ಕಾರ್ಡ್ ತೆಗೆದು ಬೆದರಿಸಿ ಪಾಸ್‌ವರ್ಡ್ ಕೇಳಿ ರಾತ್ರಿ 2 ಗಂಟೆ ವೇಳೆಗೆ ಎಟಿಎಂನಿಂದ 27 ಸಾವಿರ ರೂ. ಡ್ರಾ ಮಾಡಿದ್ದರು ಎಂದು ಸಾಜನ್ ಕೊಟ್ಟಾಯಂನ ಪೊಲೀಸರಿಗೆ ದೂರು ನೀಡಿದ್ದರು.
ಕೊಟ್ಟಾಯಂ ಪೊಲೀಸ್‌ರು ಮಂಗಳೂರು ನಗರ ಪೊಲೀಸ್ ಆಯುಕ್ತರ ಮೂಲಕ ಪಾಂಡೇಶ್ವರ ಠಾಣೆಗೆ ಪ್ರಕರಣ ಹಸ್ತಾಂತರಿಸಿದ್ದರು. ಪ್ರಕರಣ ತನಿಖೆ ಹಂತದಲ್ಲಿತ್ತು.
ಪಾಂಡೇಶ್ವರ ಇನ್‌ಸ್ಪೆಕ್ಟರ್ ದಿನಕರ ಶೆಟ್ಟಿ, ಅಪರಾಧ ಪತ್ತೆ ದಳದ ಎಸ್ಸೈ ಅನಂತ ಮುರ್ಡೇಶ್ವರ, ಸಿಬ್ಬಂದಿ ಕೇಶವ, ವಿಶ್ವನಾಥ, ಗಂಗಾಧರ, ದಾಮೋದರ, ಶಾಜು ಕೆ.ನಾಯರ್, ಜಯಪ್ರಕಾಶ್, ಮಣಿಕಂಠ, ವಿಶ್ವನಾಥ ಬುಡೋಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.