ಕರಾವಳಿ

ಸಹೋದರ-ಸಹೋದರಿ ಬಾಲಪ್ರತಿಭೆಗಳಿಗೆ ‘ಕರಾಟೆ’ಯಲ್ಲಿ ಪ್ರತಿಷ್ಠಿತ ‘ಬ್ಲ್ಯಾಕ್ ಬೆಲ್ಟ್’ ಗೌರವ

Pinterest LinkedIn Tumblr

Karate_Mokshit_sahana

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಗ್ರಾಮೀಣ ಪ್ರದೇಶ ಮೂಡುಪಡುಕೋಡಿ ಗ್ರಾಮ ನರ್ವಲ್ದಡ್ಡ ಎಂಬಲ್ಲಿನ ಇಬ್ಬರು ಸಹೋದರ-ಸಹೋದರಿ ಬಾಲಪ್ರತಿಭೆಗಳಿಗೆ ‘ಕರಾಟೆ’ ಒಲಿದು ಬಂದಿದೆ.

ಇಲ್ಲಿನ ನಿವಾಸಿ ಸಿವಿಲ್ ಗುತ್ತಿಗೆದಾರ ಎನ್.ಮೋಹನ ಶೆಟ್ಟಿ ಮತ್ತು ಹರಿಣಾಕ್ಷಿ ದಂಪತಿ ಪುತ್ರ ಮೋಕ್ಷಿತ್ ಎಂ.ಶೆಟ್ಟಿ ಮತ್ತು ಪುತ್ರಿ ಸಹನಾ ಎಂ.ಶೆಟ್ಟಿ ಇವರು ‘ಕರಾಟೆ’ಯಲ್ಲಿ ಪ್ರತಿಷ್ಠಿತ ‘ಬ್ಲ್ಯಾಕ್ ಬೆಲ್ಟ್’ ಗೌರವಕ್ಕೆ ಪಾತ್ರರಾಗಿದ್ದಾರೆ.

ಮೂಡುಬಿದ್ರೆ ಶೋರಿನ್ ರಿಯೋ ಕರಾಟೆ ಎಸೋಸಿಯೇಶನ್ ವತಿಯಿಂದ ನಡೆದ ಕರಾಟೆ ಪರೀಕ್ಷೆಯಲ್ಲಿ ಮೋಕ್ಷಿತ್ ಎಂ.ಶೆಟ್ಟಿ ಮತ್ತು ಈತನ ಸಹೋದರಿ ಸಹನಾ ಎಂ.ಶೆಟ್ಟಿ ಉತ್ತೀರ್ಣರಾಗಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ.

ಕಳೆದ 9 ವರ್ಷಗಳಿಂದ ಕರಾಟೆ ಶಿಕ್ಷಣ ಪಡೆಯುತ್ತಿರುವ ಇವರಲ್ಲಿ ಸಹನಾ ಎಂ.ಶೆಟ್ಟಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಎರಡು ಬಾರಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ‘ಚಿನ್ನದ ಪದಕ’ ಗಳಿಸಿದ್ದು, ಇತ್ತೀಚೆಗೆ ಕಿನ್ನಿಗೋಳಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಮತ್ತೆ ಮೂರನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇದೀಗ ಮೋಕ್ಷಿತ್ ಎಂ.ಶೆಟ್ಟಿ ಮೂಡುಬಿದ್ರೆ ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿದ್ದರೆ, ಸಹನಾ ಎಂ.ಶೆಟ್ಟಿ ಬಂಟ್ವಾಳ ಎಸ್‌ವಿ‌ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿನಿ. ಇವರಿಬ್ಬರೂ ಸ್ಥಳೀಯ ಕಲಾಬಾಗಿಲು ಬುರೂಜ್ ಆಂಗ್ಲ ಮಾಧ್ಯಮ ಶಾಲೆ ಹಳೆ ವಿದ್ಯಾರ್ಥಿಗಳಾಗಿದ್ದಾರೆ.

ಸಹನಾ ಎಂ.ಶೆಟ್ಟಿ:

ಈಕೆ ನೇಪಾಳ ಒಲಿಂಪಿಕ್ ಕಮಿಟಿ ನ್ಯಾಷನಲ್ ಸ್ಪೋರ್ಟ್ಸ ಕೌನ್ಸಿಲ್ ಮತ್ತು ನೇಪಾಳ ಕರಾಟೆ ಫೌಂಡೇಶನ್‌ನ ಶೋ ಟೋಕನ್ ಕರಾಟೆ ಎಸೋಸಿಯೇಶನ್ ವತಿಯಿಂದ ಅಲ್ಲಿನ ಕಠ್ಮಂಡು ಎಂಬಲ್ಲಿ ಏರ್ಪಡಿಸಿದ್ದ ಅಂತರ್ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಗಲೇ ಭಾಗವಹಿಸಿ ‘ಬೆಳ್ಳಿ ಪದಕ’ ಗಳಿಸಿದ್ದರು.

ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ, ಮೂಡುಬಿದ್ರೆಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿಯೂ ಎರಡು ಬಾರಿ ‘ಚಿನ್ನದ ಪದಕ’ ಗೌರವಕ್ಕೆ ಪಾತ್ರರಾಗಿದ್ದಾರೆ.

ಶಿಕ್ಷಣ ಮತ್ತು ಕ್ರೀಡೆ ಮಾತ್ರವಲ್ಲದೆ ಸಾಂಸ್ಕೃತಿಕ ರಂಗದಲ್ಲಿಯೂ ಮಿಂಚಿರುವ ಈಕೆ ಸ್ವಾತಿಕಿರಣ್ ಎಂ.ಡಿ. ಮತ್ತು ಪೃಥ್ವಿಕಿರಣ್ ಎಂ.ಡಿ. ಇವರಿಂದ ಭರತನಾಟ್ಯ ಕರಗತ ಮಾಡಿಕೊಂಡಿದ್ದಾರೆ. ಈಗಾಗಲೆ ಸ್ಥಳೀಯ ಮಡಂತ್ಯಾರು ಜೇಸಿ‌ಐ ಸಂಸ್ಥೆ ವತಿಯಿಂದ ನಡೆದ ಭರತನಾಟ್ಯ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಮೋಕ್ಷಿತ್ ಎಂ.ಶೆಟ್ಟಿ:

ನೇಪಾಳದಲ್ಲಿ ನಡೆದ ಅಂತರ್ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಲ್ಲದೆ, ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿಯೂ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಸ್ಕೌಟ್ಸ್ ಗೈಡ್ಸ್ ಮತ್ತಿತರ ಚಟುವಟಿಕೆಯಲ್ಲಿಯೂ ಈತನು ಸಕ್ರಿಯವಾಗಿ ತೊಡಗಿಸಿಕೊಂಡು ಕ್ರಿಯಾಶೀಲ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದಾರೆ.

ಇವರಿಬ್ಬರಿಗೂ ಮೂಡುಬಿದ್ರೆ ಶೋರಿನ್ ರಿಯೋ ಕರಾಟೆ ಎಸೋಸಿಯೇಶನ್‌ನ ಶಿಕ್ಷಕರಾದ ನದೀಂ ಮತ್ತು ಸರ್ಫ್‌ರಾಜ್ ಕರಾಟೆ ತರಬೇತಿ ನೀಡುತ್ತಿದ್ದು, ಇವರಿಂದ ಮತ್ತಷ್ಟು ಚಿನ್ನದ ಬೇಟೆ ನಡೆದು ತಾಲ್ಲೂಕು ಮಾತ್ರವಲ್ಲದೆ ಜಿಲ್ಲೆಗೆ ಕೀರ್ತಿ ತರಲಿ ಎಂಬ ಹಾರೈಕೆ ವ್ಯಕ್ತವಾಗುತ್ತಿದೆ.

Write A Comment