ಮಂಗಳೂರು, ಅ.26: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ನಿರ್ಮಿಸಿದ ಸಾಹಿತಿ ಮುಹಮ್ಮದ್ ಬಡ್ಡೂರ್ ರಚಿಸಿದ `ತಲೆಸಿಂಗಾರ’ ಬ್ಯಾರಿ ಹಾಡುಗಳ ಸಿ.ಡಿ. ಬಿಡುಗಡೆ ಸಮಾರಂಭವು ನಗರದ ಸಂತ ಅಲೋಶಿಯಸ್ ಕಾಲೇಜಿನ ಆಡಿಟೋರಿಯಂನಲ್ಲಿ ರವಿವಾರ ನಡೆಯಿತು.
ಸಿ.ಡಿ.ಬಿಡುಗಡೆಗೊಳಿಸಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ `ಇತರ ಅಕಾಡಮಿಗಳಿಗಿಂತ ಬ್ಯಾರಿ ಸಾಹಿತ್ಯ ಅಕಾಡಮಿ ಅತ್ಯುತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಸರಕಾರಿ ಮಟ್ಟದಲ್ಲೂ ಈ ಬಗ್ಗೆ ಚರ್ಚೆಯಾಗುತ್ತಿದೆ. ವಿಭಿನ್ನ ಕಾರ್ಯಕ್ರಮಗಳ ಮೂಲಕ ಬ್ಯಾರಿ ಅಕಾಡಮಿ ಜನಸಾಮಾನ್ಯರ ನಡುವೆ ಬೆಸೆಯುತ್ತಿದೆ. ಇದು ಆಶಾದಾಯಕ ಬೆಳೆವಣಿಗೆಯಾಗಿದೆ’ ಎಂದರು.
ಅಕಾಡಮಿ ಅಧ್ಯಕ್ಷ ಬಿ.ಎ. ಮೊಹಮ್ಮದ್ ಹನೀಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಶಾಸಕ ಬಿ.ಎ.ಮೊಯ್ದಿನ್ ಬಾವಾ ಭಾಗವಹಿಸಿದ್ದರು. ನಾಟಕಕಾರ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ `ಸಿ.ಡಿ.’ಯ ಬಗ್ಗೆ ವಿಮರ್ಶೆ ಮಾಡಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್ ಶಿಬಿರಾರ್ಥಿಗಳಿಗೆ ಬಹುಮಾನ ವಿತರಿಸಿದರು.
ವೇದಿಕೆಯಲ್ಲಿ ಕಾರ್ಪೊರೇಟರ್ ಲತೀಫ್ ಕಂದುಕ, ಅಕಾಡಮಿಯ ಸದಸ್ಯರಾದ ಆಯಿಶಾ ಪೆರ್ಲ, ಯೂಸುಫ್ ವಕ್ತಾರ್, ಟಿ.ಎ.ಆಲಿಯಬ್ಬ ಜೋಕಟ್ಟೆ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಿ.ಡಿ.ರಚಿಸಿದ ಸಾಹಿತಿ ಮುಹಮ್ಮದ್ ಬಡ್ಡೂರು, ಹಾಡುಗಾರರಾದ ಅಶ್ರಫ್ ಅಪೋಲೋ, ಸುಹೈಲ್ ಬಡ್ಡೂರ್, ಮುಹಮ್ಮದ್ ಇಕ್ಬಾಲ್ ಕಾಟಿಪಳ್ಳ, ಸಂಗೀತ ನಿರ್ದೇಶಕ ವಿಜಯ್ (ಕೋಕಿಲ)ರನ್ನು ಅಭಿನಂದಿಸಲಾಯಿತು.
ಅಕಾಡಮಿ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಅಬ್ದುಲ್ ಹಮೀದ್ ಪಡುಬಿದ್ರಿ ವಂದಿಸಿದರು.
ಸಾಹಿತ್ಯ ಅಧ್ಯಯನ ಶಿಬಿರ :
ಸಾಹಿತ್ಯ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಲೇಖಕಿ ಚಂದ್ರಕಲಾ ನಂದಾವರ `ಬ್ಯಾರಿ’ಯ ಅಸ್ತಿತ್ವವನ್ನು ಗುರುತಿಸುವ ಮತ್ತು ಅಸ್ಮಿತೆಯನ್ನು ಸಾಬೀತುಪಡಿಸುವ ಮೂಲಕ ಬ್ಯಾರಿಗಳು ಶ್ರಮ ಮತ್ತು ಅಕ್ಷರ ಸಂಸ್ಕೃತಿಯನ್ನು ಬೆಸೆದುಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ವಿಮರ್ಶಕ ಮುರಳೀಧರ ಉಪಾಧ್ಯಾಯ ಹಿರಿಯಡ್ಕ `ಸಾಹಿತ್ಯ ಏನು? ಹೇಗೆ?ಏಕೆ?’ ಮತ್ತು ಶಾದ್ ಬಾಗಲಕೋಟೆ `ಘಝಲ್‌ನ ಇತಿಹಾಸ’ ಹಾಗೂ ಸಾಹಿತಿ ಮುಹಮ್ಮದ್ ಬಡ್ಡೂರು `ಸಾಹಿತ್ಯ ಮತ್ತು ಸಮಾಜ’ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು.
ಬಳಿಕ ಶಿಬಿರಾರ್ಥಿಗಳಿಗೆ ಸಾಹಿತ್ಯ ಪರೀಕ್ಷೆ ಮತ್ತು ಸಾಹಿತಿಗಳೊಂದಿಗೆ ಶಿಬಿರಾರ್ಥಿಗಳ ಸಂವಾದ ಕಾರ್ಯಕ್ರಮ ಜರಗಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್‍ಯದರ್ಶಿ ಬಿ.ಎ. ಶಂಶುದ್ದೀನ್ ಮಡಿಕೇರಿ ಅತಿಥಿಗಳಾಗಿ ಭಾಗವಹಿಸಿದ್ದರು. ಮುಹಮ್ಮದ್ ಶರೀಫ್ ನಿರ್ಮುಂಜೆ ಧ್ಯೇಯಗೀತೆ ಹಾಡಿದರು.