ಕುಂದಾಪುರ: ಕಳೆದ ಎರಡು ತಿಂಗಳಿನಿಂದ ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ನಿತ್ಯ ನಿರಂತರವೆಂಬಂತೆ ದೋಣಿ, ಬೋಟ್ ದುರಂತ ಸಂಭವಿಸುತ್ತಿದ್ದು, ಸೋಮವಾರ ಸಂಜೆ ಹಾಗೂ ಮಂಗಳವಾರ ಸಂಜೆ ಎರಡು ಪ್ರತ್ಯೇಕ ದೋಣಿ ದುರಂತ ನಡೆದಿದೆ. ಇಂತಹ ದುರಂತಗಳಿಗೆ ಕಾರಣವಾಗುತ್ತಿರುವ ಅಳಿವೆ ಹೂಳೆತ್ತುವ ಬಗ್ಗೆ ಭರವಸೆ ನೀಡಿದ ರಾಜ್ಯದ ಸಚಿವರು, ಶಾಸಕರು ಇದೀಗ ಎಲ್ಲಿದ್ದಾರೆ, ಇವರು ಭರವಸೆಗಳು ಏನಾಗಿದೆ ಎಂಬ ಪ್ರಶ್ನೆ ಮೀನುಗಾರರಲ್ಲಿ ಕಾಡತೊಡಗಿದೆ.
ಮೀನುಗಾರರ ಬೇಡಿಕೆಯ ಹಿನ್ನಲೆಯಲ್ಲಿ ತುರ್ತಾಗಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಡ್ರಜ್ಜಿಂಗ್ ಕಾಮಗಾರಿಯನ್ನು ಇನ್ನೊಂದು ವಾರದಲ್ಲಿ ಪ್ರಾರಂಭಿಸಲಾಗುವುದು. ಮುಂದಿನ ನಾಲ್ಕೈದು ದಿನಗಳಲ್ಲಿ ಶಾಸಕರೊಂದಿಗೆ ಸೇರಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ರಾಜ್ಯದ ಬಂದರು, ಜವಳಿ ಹಾಗೂ ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ಕಳೆದ ಸೆ.19 ರಂದು ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಮೀನುಗಾರರಿಗೆ ನೀಡಿದ್ದ ಭರವಸೆಗೆ ಇಂದಿಗೆ ಸುಮಾರು ಒಂದುವರೆ ತಿಂಗಳು ಕಳೆದಿದೆ. ಅಲ್ಲದೆ ಸ್ಥಳೀಯ ಶಾಸಕರು ಈ ವಿಚಾರದಲ್ಲಿ ನೀಡಿದ ಆಶ್ವಾಸನೆ ಕೂಡ ಈಡೇರುವ ಸಾಧ್ಯತೆ ಬಗ್ಗೆ ಮೀನುಗಾರರಲ್ಲಿನ ಆಶಾವಾದ ಕ್ಷೀಣಿಸುತ್ತಿದ್ದು, ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಹೂಳೆತ್ತುವ ಬಗ್ಗೆ ಇನ್ನೂ ಯಾವುದೇ ಪ್ರಕ್ರಿಯೆ ಆರಂಭಗೊಂಡಿಲ್ಲ.
ಕಳೆದ ವರ್ಷ ಗಂಗೊಳ್ಳಿಗೆ ಭೇಟಿ ನೀಡಿದಾಗ ಇದೇ ರೀತಿಯ ಹೇಳಿಕೆ ನೀಡಿ ವಾಪಾಸಾಗಿ ಪುನ: ಈ ವರ್ಷ ಕೂಡ ಮೀನುಗಾರರಿಗೆ ಕೇವಲ ಭರವಸೆ ಮಾತ್ರ ನೀಡುತ್ತಿರಿ, ಆದರೆ ಈವರೆಗೆ ಯಾವುದೇ ಕೆಲಸ ಆಗಿಲ್ಲ ಎಂದು ಮೀನುಗಾರರು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದು, ಇದೀಗ ಪುನ: ಸಚಿವರು ನೀಡಿದ ಭರವಸೆ ಭರವಸೆಯಾಗಿಯೇ ಉಳಿಯಲಿದೆಯೇ ಎಂಬ ಯಕ್ಷಪ್ರಶ್ನೆ ಮೀನುಗಾರರನ್ನು ಕಾಡುತ್ತಿದೆ. ಇನ್ನೊಂದು ವಾರದೊಳಗೆ ಡ್ರಜ್ಜಿಂಗ್ ಆರಂಭಗೊಳ್ಳಬಹುದೆಂಬ ಆಶಾಭಾವನೆ ಹೊಂದಿದ್ದ ಮೀನುಗಾರರಲ್ಲಿ ಮತ್ತೆ ನಿರಾಸೆಯ ಕಾರ್ಮೋಡ ಕವಿದಿದೆ. ಸಚಿವರು ಹಾಗೂ ಶಾಸಕರು ತಮ್ಮ ಕೈಲಾಗದ ಭರವಸೆ ನೀಡಿ ಮೀನುಗಾರರನ್ನು ವಂಚಿಸುವ ಬದಲು ತಮ್ಮಿಂದಾಗುವ ಕೆಲಸವನ್ನು ಮಾಡಿ ತೋರಿಸಿ ಮೀನುಗಾರರಲ್ಲಿ ಧೈರ್ಯ ತುಂಬುವ ಕೆಲಸ ಮಾಡಲಿ ಎಂದು ಮೀನುಗಾರರು ತಮ್ಮ ಆಕ್ರೋಶವನ್ನು ಹೊರಗೆಡವಿದ್ದಾರೆ.
ಅಳಿವೆ ಹೂಳೆತ್ತುವ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿರುವ ಸೀಈಗಲ್ ಕಂಪೆನಿ ಸರಕಾರ ನಿಗದಿಪಡಿಸಿರುವ ಅನುದಾನದಲ್ಲಿ ಹೂಳೆತ್ತಲು ಸಾಧ್ಯವಿಲ್ಲ ಎಂದು ಕೈತೊಳೆದುಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಇನ್ನೊಂದೆಡೆ ಅಳಿವೆ ಹೂಳೆತ್ತುವ ಬಗ್ಗೆ ಕಳೆದ ವಾರ ಕೇರಳದ ಶಂಕರ ಎಂಡ್ ಕಂಪೆನಿಯ ತಜ್ಞರು ಸರ್ವೇ ನಡೆಸಿದ್ದು, ಇದರ ವರದಿ ಇನ್ನಷ್ಟೇ ಇಲಾಖೆಯ ಕೈಸೇರಬೇಕಿದೆ. ಸರ್ವೇ ವರದಿ ಇಲಾಖೆಯ ಅಧಿಕಾರಿಗಳ ಕೈಸೇರಿದ ಬಳಿಕ ಈ ಬಗ್ಗೆ ಇಲಾಖಾಧಿಕಾರಿಗಳು ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸಲಿದ್ದು, ಸರಕಾರ ಗ್ರೀನ್ ಸಿಗ್ನಲ್ ನೀಡಿದರೆ ಮಾತ್ರ ಅಳಿವೆ ಹೂಳೆತ್ತುವ ಕಾರ್ಯ ಪ್ರಾರಂಭವಾಗುವ ನಿರೀಕ್ಷೆ ಇದೆ. ಹೀಗಾಗಿ ಗಂಗೊಳ್ಳಿ ಅಳಿವೆ ಹೂಳೆತ್ತುವ ಕಾಮಗಾರಿ ಸದ್ಯದಲ್ಲಿ ಪ್ರಾರಂಭವಾಗುವುದು ಅನುಮಾನ.
ಇವೆಲ್ಲದರ ನಡುವೆಯೂ ಪ್ರತಿನಿತ್ಯವೆಂಬಂತೆ ಗಂಗೊಳ್ಳಿ ಅಳಿವೆಯಲ್ಲಿ ದೋಣಿ, ಬೋಟ್ ದುರಂತ ನಡೆಯುತ್ತಲೇ ಇದೆ. ಅನೇಕ ದಶಕಗಳಿಂದ ಗಂಗೊಳ್ಳಿ ಅಳಿವೆ ಮೀನುಗಾರರಿಗೆ ದು:ಸ್ವಪ್ನವಾಗಿ ಕಾಡುತ್ತಿದೆ. ಬಂದರಿನ ಅಳಿವೆಯಲ್ಲಿ ಪದೇ ಪದೇ ಅವಘಡಗಳು ಸಂಭವಿಸುತ್ತಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ನಾಲ್ಕು ದಿನಗಳ ಅಂತರದಲ್ಲಿ ಮೂರು ದೋಣಿ, ಬೋಟ್ ದುರಂತಗಳು ಸಂಭವಿಸಿದೆ. ಗಂಗೊಳ್ಳಿ ಮೀನುಗಾರಿಕಾ ಬಂದರಿನಿಂದ ಹೊರ ಹೋಗುವುದು ಮತ್ತು ಮರಳಿ ಬಂದರು ತಲುಪುವುದು ದುಸ್ತರವೆನಿಸಿದೆ. ಅಳಿವೆ ಬಾಗಿಲು ಕಿರಿದಾಗಿದ್ದು ವ್ಯಾಪಕ ಹೂಳು ತುಂಬಿಕೊಂಡಿದೆ. ಪ್ರಾಣ ಕೈಯಲ್ಲಿ ಹಿಡಿದುಕೊಂಡು ಅಳಿವೆ ದಾಟಬೇಕಾದ ಅನಿವಾರ್ಯ ಪರಿಸ್ಥಿತಿ ಮೀನುಗಾರರಿಗೆ ಬಂದೊದಗಿದೆ. ಅಲೆಗಳ ಹೊಡೆತಕ್ಕೆ ದೋಣಿ ದಿಕ್ಕು ತಪ್ಪಿ ಅಳಿವೆಯಲ್ಲಿನ ಮರಳು ದಿಣ್ಣೆಗಳಿಗೆ ಡಿಕ್ಕಿ ಹೊಡೆದು ಇಂತಹ ಅನಾಹುತ ಸಂಭವಿಸುತ್ತಿದೆ.
1972ರಲ್ಲಿ ಮ್ಯಾಂಗನೀಸ್ ಸಾಗಾಟದ ದೃಷ್ಟಿಯಿಂದ ಅಳಿವೆ ಭಾಗದಲ್ಲಿ ಹೂಳೆತ್ತಿರುವುದು ಬಿಟ್ಟರೆ ಇಲ್ಲಿಯ ತನಕ ಹೂಳೆತ್ತಿದ ದಾಖಲೆಗಳಿಲ್ಲ. ಹಲವು ವರ್ಷಗಳಿಂದ ಹೂಳು ಇಲ್ಲಿ ಸೇರಿಕೊಂಡು ಸಮುದ್ರದ ಅಲೆಗಳಲ್ಲಿ ಏರುಪೇರನ್ನು ಕಂಡುಕೊಂಡಿದೆ. ಪ್ರತಿವರ್ಷವೆಂಬಂತೆ ಅವಘಡಗಳು ಇಲ್ಲಿ ನಡೆಯುತ್ತಲೇ ಇದೆ. 1985ರಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಐದು ಮಂದಿ, 1990ರಲ್ಲಿ ಒಂದೇ ಸಲ 11 ಮಂದಿ ಹೀಗೆ ಈ ಅಳಿವೆಯಲ್ಲಿ ಸಂಭವಿಸಿದ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಗಂಗೊಳ್ಳಿ ಅಳಿವೆ ಸಮಸ್ಯೆಯಿಂದ ಅನೇಕರು ಸಾವನ್ನಪ್ಪಿದ ಹಾಗೂ ಪ್ರತಿವರ್ಷವೆಂಬಂತೆ ಅಳಿವೆಯಲ್ಲಿ ಬೋಟುಗಳು, ದೋಣಿಗಳು ದುರಂತಕ್ಕಿಡಾಗುತ್ತಿದ್ದರೂ ಸರಕಾರ ಮಾತ್ರ ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಸರಕಾರದ ಸಚಿವರು, ಶಾಸಕರು, ಸಂಸದರು ಗಂಗೊಳ್ಳಿಗೆ ಪ್ರವಾಸ ಮಾಡುತ್ತಿದ್ದು, ಇದರಿಂದ ಈ ಭಾಗದ ಮೀನುಗಾರರಿಗೆ ಯಾವುದೇ ಪ್ರಯೋಜನವಾಗಿಲ್ಲ. ಬಂದರಿಗೆ ಬಂದಾಗ ಭರವಸೆ ನೀಡಿ ಹೋಗುವ ಜನಪ್ರತಿನಿಧಿಗಳು ಬಳಿಕ ತಾವು ನೀಡಿದ ಭರವಸೆಗಳ ಈಡೇರಿಕೆಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇನ್ನಾದರೂ ಸಚಿವರು, ಜನಪ್ರತಿನಿಧಿಗಳು ಭರವಸೆ ನೀಡುವುದನ್ನು ಬಿಟ್ಟು ಮೀನುಗಾರರ ಜೀವನಕ್ಕೆ ಭದ್ರತೆ ಕಲ್ಪಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.