ಸುರತ್ಕಲ್,ಅ.31 : ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಯುವತಿ ಮೇಲೆ ಫೆಶಿಯಲ್ ಮಾಡಲು ಬಂದಿದ್ದ ಗ್ರಾಹಕ ದಂಪತಿಗಳು ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ, ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಶುಕ್ರವಾರ ಸುರತ್ಕಲ್‌ನಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವತಿಯನ್ನು ಕಾಂತೇರಿ ಧೂಮಾವತಿ ದೈವಸ್ಥಾನದ ಕಟ್ಟಡದಲ್ಲಿ ಸುರಭಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಅಕ್ಷತಾ (19) ಎಂದು ಹೆಸರಿಸಲಾಗಿದೆ.
ಸುಮನ ಎಂಬವರು ತನ್ನ ಪತಿಯೊಂದಿಗೆ ಫೆಶಿಯಲ್ ಮಾಡಿಕೊಳ್ಳಲೆಂದು ಅಕ್ಷತಾ ಅವರ ಬ್ಯೂಟಿಪಾರ್ಲರ್‌ಗೆ ಬಂದಿದ್ದು, ಫೆಶಿಯಲ್ ಮಾಡಿಕೊಂಡ ಬಳಿಕ ಅಕ್ಷತಾ ಹಣ ಕೇಳಿದಾಗ ಸುಮನ ಅವರ ಪತಿ ಸಂದೀಪ್ ಎಂಬಾತ ಅಕ್ಷತಾಳ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿ ಕತ್ತಿನಲ್ಲಿದ್ದ ಆಭರಣವನ್ನು ಕಸಿಯಲು ಯತ್ನಿಸಿದ್ದಾನೆ. ಜೊತೆಗೆ ಸುಮನ ಕೂಡ ಅಕ್ಷತಾ ಅವರಿಗೆ ಕೈಯಿಂದ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಕ್ಷತಾ ಅವರು ನೋವಿನಿಂದ ಬೊಬ್ಬೆ ಹಾಕಿದಾಗ ಹಲ್ಲೆ ಮಾಡಿದ ದಂಪತಿಗಳು ಹೆದರಿ ಪರಾರಿಯಾಗಲು ಯತ್ನಿಸಿದ್ದು, ತಕ್ಷಣ ಸಾರ್ವಜನಿಕರು ಈ ದಂಪತಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಹಲ್ಲೆ ಮಾಡಿದ ಸುಮನ ಹಾಗೂ ಸಂದೀಪ್ ದಂಪತಿಗಳು ಗೋವಾ ಮೂಲದವರಾಗಿದ್ದು, ಕಳೆದೊಂದು ವಾರದಿಂದ ಮಂಗಳೂರಿನ ಲಾಡ್ಜ್ ಒಂದರಲ್ಲಿ ತಂಗಿದ್ದರು ಎಂದು ತಿಳಿದು ಬಂದಿದೆ.
ಸುರತ್ಕಲ್ ಪೋಲಿಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆ ನಡೆಸುತ್ತಿದ್ದಾರೆ.