* 2.5 ಕೋಟಿ ವೆಚ್ಚದಲ್ಲಿ ಶಿರೂರು ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ
* ಆಸ್ಪತ್ರೆಗೆ ಸರಕಾರ ಸಹಕಾರ ನೀಡುವುದಾಗಿ ಸಚಿವ ಖಾದರ್ ಭರವಸೆ
* ಸರಕಾರಿ ವೇತನದ ಜೊತೆ ಗ್ರೀನ್ ವ್ಯಾಲಿ ಟ್ರಸ್ಟ್ ನಿಂದ ಹೆಚ್ಚುವರಿ ವೇತನ-ಮಕ್ಕಳಿಗೆ ಉಚಿತ ಶಿಕ್ಷಣ
* ಜಿಲ್ಲಗೆ ಹೆಚ್ಚುವರಿ ಮೂರ್ನಾಲ್ಕು 108 ಆಂಬುಲೆನ್ಸ್- ಖಾದರ್ ಭರವಸೆ
ಕುಂದಾಪುರ: ಶಿರೂರಿನ ಹಿರಿಯರು ಹಾಗೂ ಸಮಸ್ತ ನಾಗರೀಕರಿಗೆ ಸ್ವ ಕ್ಷೇತ್ರದಲ್ಲಿಯೇ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಹಾಗೂ ಪಿಯು ಕಾಲೇಜಿನ ಅಧ್ಯಕ್ಷ ಹಾಗೂ ಆಡಳಿತ ಟ್ರಸ್ಟಿ ಸಯ್ಯದ್ ಅಬ್ದುಲ್ ಖಾದರ್ (ಬಾಶು) ಹಾಗೂ ಕಾರ್ಯದರ್ಶಿ ಮಹಮ್ಮದ್ ಮೀರಾನ್ ಸಾಹೆಬ್ ಅವರು ಶಿರೂರಿನ ಪೇಟೆಯಲ್ಲಿ ಸರಕಾರದ ಜಾಗದಲ್ಲಿ ಮಂಜೂರಾದ ಪ್ರದೇಶದಲ್ಲಿ 2.5 ಕೋಟಿ ವೆಚ್ಚದಲಿ ನೂತನ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಿದ್ದು ಈ ಪ್ರಕ್ರಿಯೆಗೆ ಸರಕಾರದ ಸಹಕಾರ ಹಾಗೂ ನೆರವು ನೀಡುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಭರವಸೆ ನೀಡಿದ್ದಾರೆ.
ಅವರು ಶುಕ್ರವಾರ ಬೆಳಿಗ್ಗೆ ಶಿರೂರಿನ ಪ್ರಾಥಮಿಕ ಸರಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಶಿರೂರು ಗ್ರೀನ್ ವ್ಯಾಲಿ ಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಟಿಯನ್ನು ಉದ್ಡೇಶಿಸಿ ಈ ಬಗ್ಗೆ ಪ್ರಶಂಶಿಸಿದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ಹಾಗೂ ಆರೋಈಗ್ಯ ಸಿಗಬೇಕು. ಈ ನಿಟ್ಟಿನಲ್ಲಿ ಶಿರೂರಿನಲಿ ಅಬ್ದುಲ್ ಖಾದರ್ ಬಾಶು ಹಾಗೂ ಮುಹಮ್ಮದ್ ಮೀರಾನ್ ಸಾಹೆಬ್ ದಾನಿಗಳ ಸಹಕಾರದಲ್ಲಿ ನೂತನ ೨ ಬ್ಲಾಕ್ ಆಸ್ಪತ್ರೆ ಕಟ್ಟುವ ಪ್ರಸ್ತಾವನೆ ಸಲ್ಲಿಸಿದ್ದು ಇದೊಂದು ಶ್ಲಾಘನೀಯ ಕಾರ್ಯವಾಗಿದೆ. ಈ ಕಾರ್ಯವು ಎಲರಿಗೂ ಮಾದರಿಯಾಗಬೇಕಿದ್ದು ಇದನ್ನು ಮಾದರಿಯನ್ನಾಗಿಸಿಕೊಂಡು ಇತರರು ಪ್ರೇರಣೆಗೊಳ್ಳುತ್ತಾರೆ. ಈ ಆಸ್ಪತ್ರೆ ನಿರ್ಮಾಣ ಹಾಗೂ ವೈದ್ಯರು ಮತ್ತು ಸಿಬ್ಬಂದಿಗಳ ನೇಮಿಸುವ ಕುರಿತು ಇಲಾಖೆಯಿಂದ ಮಾಡುತ್ತೇನೆಂದು ಭಾರವಸೆ ನೀಡಿದ ಅವರು ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರವು ಮಾದರಿ ಆರೋಗ್ಯಕೇಂದ್ರವಾಗಬೇಕು.
ಪ್ರತಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಜನಔಷಧಿ ಕೇಂದ್ರ 24*7 ಇದನ್ನು ಡಿಸೆಂಬರ್ ತಿಂಗಳಿನಲ್ಲಿ ತೆರೆಯಲಾಗುತ್ತಿದ್ದು, ಪ್ರತಿ ಸರಕಾರಿ ಆಸ್ಪತ್ರೆಯ ವಠಾರದಲ್ಲಿ ಈ ಕೇಂದ್ರವಿದ್ದು ಎಂ.ಆರ್.ಪಿ. ದರಕ್ಕಿಂತಲೂ 20% ಹಣ ಕಡಿಮೆಯಲ್ಲಿ ಔಷಧಗಳನ್ನು ಮಾರುವ ಮೂಲಕ ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಔಷಧಿ ಸಿಗಲಿದೆ, ಅಲ್ಲದೇ ವೈದ್ಯರುಗಳು ಹೊರ ಔಷಧ ಮಳಿಗೆಗಳಿಗೆ ಚೀಟಿ ಬರೆದು ಕೊಡುವ ಪ್ರಕ್ರಿಯೆಗೂ ಬ್ರೇಕ್ ಬೀಳಲಿದೆ ಎಂದರು. ಇನ್ನು ಆಯ್ದ ಸ್ಥಳಗಳಲ್ಲಿ ಅತ್ಯಾಧುನಿಕ ತಂತ್ರಜ್ನಾಗಳುಳ್ಳ ಲ್ಯಾಬ್ ನಿರ್ಮಾಣ ಮಾಡುವ ಮೂಲಕ ಸರಕಾರಿ ಆಸ್ಪತ್ರೆಗಳಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇನ್ನೊಂದು ತಿಂಗಳಿನಲ್ಲಿ 198 ಹೆಚ್ಚುವರಿ 108 ಆಂಬುಲೆನ್ಸ್ ವಾಹನಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು ಉಡುಪಿ ಜಿಲ್ಲೆಗೆ 3-4 ಹೆಚ್ಚುವರಿ 108 ಆಂಬುಲೆನ್ಸ್ ಸಿಗುವ ಬಗ್ಗೆಯೂ ಸಚಿವರು ಈ ಸಂದರ್ಭ ಹೇಳಿದರು.
ವೈದ್ಯರ ಮುಷ್ಕರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವೈದ್ಯರ ಸಮಸ್ಯೆ ಕುರಿತು ಅ.೨೮ಕ್ಕೆ ಮುಖ್ಯಮಂತ್ರಿಗಳೊಇಂದಿಗೆ ಸಭೆ ಮಾಡಿಸಲಾಗುವುದು ಎಂದರೂ ಕೂಡ ಯಾವ ಉದ್ದೇಶಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆಯೋ ಅವರೇ ಅದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರ ಮುಷ್ಕರದ ಬಗ್ಗೆ ಮುಖ್ಯಮಂತ್ರಿಗಳು ಕಳೆದ ೨೯ರಂದು ನಡೆದ ಸಭೆಯಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ನಡೆದರೇ ಸರಕಾರ ಸುಮನಿರದು, ಸಮಸ್ಯೆಗಳನ್ನು ಗಮನಕ್ಕೆ ತಂದರೇ ಅದನ್ನು ನೀಗಿಸುವಲ್ಲಿ ಸರಕಾರ ಬದ್ಧವಿದೆ ಎಂದು ಎಲ್ಲರಿಗೂ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ ಎಂದರು.
ಗೃಹ ಇಲಾಖೆಯ ಬಗ್ಗೆ ಪ್ರತಿಪಕ್ಷಗಳು ಅನಗತ್ಯ ಠೀಕೆ ಮಾಡುವ ಮೂಲಕ ಇಲಾಖೆಯ ಆತ್ಮಸ್ಥೈರ್ಯವನ್ನು ಕುಗಿಸುವ ಕಾರ್ಯ ಮಾಡುವುದು ಸರಿಯಲ್ಲ ಎಂದು ಇದೇ ಸಂದರ್ಭ ಖಾದರ್ ಹೇಳಿದರು.
ಈ ಸಂದರ್ಭ ಮಾತನಾಡಿದ ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಇದರ ಆಡಳಿತ ಟ್ರಸ್ಟಿ ಅಬ್ದುಲ್ ಖಾದರ್ ಬಾಶು ಶಿರೂರಿನ ನೂತನ ಆಸ್ಪತ್ರೆಗೆ ಬರುವ ವೈದ್ಯರುಗಳಿಗೆ ಸರಕಾರದ ವೇತನದೊಂದಿಗೆ ಹೆಚ್ಚುವರಿ 15 ಸಾವಿರ ಹಣವನ್ನು ನೀಡುವ ಜೊತೆಗೆ ಇಬ್ಬರು ಮಕ್ಕಳಿಗೆ ಉಚಿತ ಶಿಕ್ಷಣ, ನರ್ಸುಗಳಿಗೆ ಹೆಚ್ಚುವರಿ ವೇತನದೊಂದಿಗೆ ಇಬ್ಬರು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಹೇಳಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಜಾನ್ ಮ್ಯಾಥ್ಯೂ, ಶಿರೂರು ಗ್ರಾ.ಪಂ. ಅಧ್ಯಕ್ಷ ರಾಮ ಮೆಸ್ತ ಮೊದಲಾದವರು ಉಪಸ್ಥಿತರಿದ್ದರು.