ಕರಾವಳಿ

ಬಸ್‌ಗಳ ಲಾಭಿಗೆ ಸಿಕ್ಕು ಅವ್ಯವಸ್ಥೆ ಆಗರವಾಗುತ್ತಿದೆ ಮತ್ಸ್ಯಗಂಧ ಸೂಪರ್ ಫಾಸ್ಟ್ ರೈಲು…?

Pinterest LinkedIn Tumblr

 

 

Train

ಕುಂದಾಪುರ: ಕಳೆದ ಅನೇಕ ವರ್ಷಗಳಿಂದ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುತ್ತಿರುವ ಕೊಂಕಣ ರೈಲ್ವೇಯ ಮತ್ಸ್ಯಗಂಧ ಸೂಪರ್ ಫಾಸ್ಟ್ ರೈಲು ಇತ್ತೀಚಿನ ದಿನಗಳಲ್ಲಿ ಅವ್ಯವಸ್ಥೆಯ ಆಗರವಾಗಿ ಪರಿಣಮಿಸುತ್ತಿದೆ ಎಂಬ ಆರೋಪ ಪ್ರಯಾಣಿಕರಿಂದ ಕೇಳಿ ಬರುತ್ತಿದೆ.

ಕೊಂಕಣ ರೈಲು ಆರಂಭಕ್ಕೆ ಮುನ್ನ ಕರ್ನಾಟಕದಿಂದ ಮುಂಬೈ ಕಡೆಗಳ ಬಸ್ ಲಾಭಿ ಬಹಳಷ್ಟು ತೊಂದರೆ ನೀಡಿತ್ತು. ಆದರೆ ಇದೀಗ ಮತ್ತೆ ಪುನ: ಇದೇ ರೀತಿಯ ಲಾಬಿ ಆರಂಭಗೊಂಡಿದೆಯೇ ಎಂಬ ಶಂಕೆ ರೈಲು ಪ್ರಯಾಣಿಕರನ್ನು ಕಾಡ ತೊಡಗಿದೆ. ಇತ್ತೀಚಿನ ಕೆಲವು ದಿನಗಳಿಂದ ಮುಂಬೈ-ಮಂಗಳೂರು ಮತ್ತು ಮಂಗಳೂರಿನಿಂದ ಸಿ‌ಎಸ್‌ಟಿ ಕಡೆಗೆ ಸಂಚರಿಸುತ್ತಿರುವ ಮತ್ಸ್ಯಗಂಧ ಸೂಪರ್ ಫಾಸ್ಟ್ ರೈಲು ಸರಿಯಾದ ಸಮಯಕ್ಕೆ ಮುಂಬೈ ಹಾಗೂ ಮಂಗಳೂರಿನಿಂದ ಹೊರಟರೂ, ಮುಂಬೈ, ಮಂಗಳೂರು ಸೇರಿದಂತೆ ಅನೇಕ ನಿಲ್ದಾಣಗಳನ್ನು ನಿಗದಿತ ಸಮಯಕ್ಕೆ ತಲುಪುತ್ತಿಲ್ಲ. ಸುಮಾರು 2-3 ಗಂಟೆ ತಡವಾಗಿ ಆಯಾ ನಿಲ್ದಾಣಗಳನ್ನು ತಲುಪುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು, ಕೆಲಸಕ್ಕೆ ಹೋಗುವ ನೌಕರರು ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಬೆಳಗಿನ ಜಾವ ಮುಂಬೈ ತಲುಪಿ ಕೆಲಸಕ್ಕೆ ಹೋಗುವ ನಿರೀಕ್ಷೆಯಲ್ಲಿದ್ದ ನೌಕರರು ರೈಲಿನ ವಿಳಂಬ ಪ್ರಯಾಣದಿಂದ ತುಂಬಾ ಕಷ್ಟಪಡುವಂತಾಗುತ್ತಿದೆ. ಪ್ರತಿನಿತ್ಯ ಈ ರೈಲು ವಿಳಂಬವಾಗಿ ಸಂಚರಿಸುತ್ತಿರುವುದರಿಂದ ಭಾರಿ ಪ್ರಮಾಣದ ಮಾನವ ಸಂಪನ್ಮೂಲ ವ್ಯರ್ಥವಾಗುತ್ತಿದೆ. ಈ ರೈಲಿನ ವಿಳಂಬ ಸಂಚಾರದ ಹಿಂದೆ ಲಾಬಿಯೊಂದು ಕಾರ್ಯಾಚರಿಸುತ್ತಿದೆ. ಹಿಂದಿನ ಕೇಂದ್ರ ಸರಕಾರ ಈ ಲಾಬಿಗೆ ಮಣಿದಿರಲಿಲ್ಲ. ಇದೀಗ ರೈಲ್ವೇ ಸಚಿವರು ಹಾಗೂ ಕೊಂಕಣ ರೈಲ್ವೆ ಇಲಾಖೆ ಇಂತಹ ಲಾಬಿಗಳಿಗೆ ಮಣಿದು ರೈಲು ಸಂಚಾರದಲ್ಲಿ ವಿಳಂಬ ಮಾಡಿ ಪ್ರಯಾಣಿಕರನ್ನು ಬಸ್‌ನಲ್ಲಿ ಸಂಚರಿಸುವಂತೆ ಮಾಡುತ್ತಿದ್ದಾರೆಯೇ ಎಂಬ ಗುಮಾನಿ ಹಬ್ಬಿದೆ. ಸೂಪರ್ ಫಾಸ್ಟ್ ರೈಲಿನ ಹೆಸರಿನಲ್ಲಿ ಸುಮಾರು ೨ ಗಂಟೆಗೆ ಮಿಕ್ಕಿ ವಿಳಂಬವಾಗಿ ಸಂಚರಿಸುತ್ತಿರುವ ಮತ್ಸ್ಯಗಂಧ ರೈಲಿನ ಸಮಯವನ್ನು ಬದಲಾಯಿಸಿ ಅಥೌ‌ಆ ನಿಗದಿತ ಸಮಯಕ್ಕೆ ರೈಲು ಸಂಚರಿಸುವಂತೆ ಮಾಡಬೇಕು ಎಂದು ಪ್ರಯಾಣಿಕರು ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಟಿಸಿ ಇಲ್ಲ : ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಟಿಕೇಟ್ ಪಡೆದು ಪ್ರಯಾಣಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ರೈಲಿನಲ್ಲಿ ಟಿಸಿಗಳನ್ನು ನೇಮಕ ಮಾಡಲಾಗುತ್ತದೆ. ಆದರೆ ಅ.31 ರಂದು ಮುಂಬೈನಿಂದ ಮಂಗಳೂರಿಗೆ ಸಂಚರಿಸಿದ ಮತ್ಸ್ಯಗಂಧ ರೈಲಿನ ಪ್ರಯಾಣದ ಸಂದರ್ಭ ಯಾವುದೇ ಟಿಸಿ ಬಂದಿಲ್ಲ ಎಂದು ಪ್ರಯಾಣಿಕರೋರ್ವರು ದೂರು ಸಲ್ಲಿಸಿದ್ದಾರೆ.

ಅನಧಿಕೃತ ಪ್ರಯಾಣಿಕರ ಪ್ರಯಾಣ : ಮುಂಗಡ ಟಿಕೇಟ್ ಕಾಯ್ದಿರಿಸಿ ಪ್ರಯಾಣಿಸುವ ರೈಲಿನ ಸ್ಪೀಪರ್ ಕ್ಲಾಸ್ ಬೋಗಿಗಳಲ್ಲಿ ಅನಧಿಕೃತ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ರಾತ್ರಿ ಹೊತ್ತು ರೈಲಿನ ಬೋಗಿಗಳ ಪ್ಯಾಸೇಜ್‌ಗಳಲ್ಲಿ ಅದೆಷ್ಟೋ ಪ್ರಯಾಣಿಕರು ಮಲಗಿರುವುದು ಅಲ್ಲದೆ ಇಬ್ಬರು ಮಹಿಳೆಯರು ಮಲಗಿಸುವ ಕೆಳಗಿನ ಸ್ಲೀಪರ್ ಸೀಟುಗಳ ಮಧ್ಯದಲ್ಲಿ ಅನಧಿಕೃತ ಗಂಡಸರು ಮಲಗಿ ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ಇದು ಪ್ರಯಾಣಿಕರ ಹಿತದೃಷ್ಟಿಯಿಂದ ವಿಶೇಷವಾಗಿ ಮಹಿಳಾ ಪ್ರಯಾಣಿಕರ ರಕ್ಷಣೆಯ ಹಿತದೃಷ್ಟಿಯಿಂದ ಸರಿಯಲ್ಲ. ಅನಧಿಕೃತ ಪ್ರಯಾಣಿಕರು ಈ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ದುರದೃಷ್ಟ. ಈ ವಿಚಾರದಲ್ಲಿ ರೈಲಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಕೊಂಕಣ ರೈಲ್ವೇ ಇಲಾಖೆ, ಕೇಂದ್ರ ರೈಲ್ವೇ ಸಚಿವರು ಹಾಗೂ ಪ್ರಧಾನ ಮಂತ್ರಿಯವರ ಕಾರ್ಯಾಲಯಕ್ಕೆ ಲಿಖಿತ ದೂರು ಸಲ್ಲಿಸಿದ್ದಾರೆ.

ರೈಲಿನ ಪ್ರಯಾಣಿಕರ ಸುರಕ್ಷತೆಯ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ಘೋಷಣೆ ಮಾಡಿರುವ ಕೇಂದ್ರ ರೈಲ್ವೇ ಸಚಿವರ ತವರು ಜಿಲ್ಲೆಗಳಲ್ಲಿ ಸಂಚರಿಸುವ ಮತ್ಸ್ಯಗಂಧ ರೈಲಿನಲ್ಲಿ ಈ ರೀತಿಯ ಅವ್ಯವಸ್ಥೆಯಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಇದರ ಹಿಂದೆ ಯಾವುದಾದರೊಂದು ಲಾಬಿ ಕಾರ್ಯಾಚರಿಸುತ್ತಿದಯೇ ಅಥವಾ ಕೆಲವೊಂದು ತಾಂತ್ರಿಕ ಕಾರಣಗಳಿಂದ ಈ ರೀತಿಯಾಗಿದೆ ಎಂಬುದನ್ನು ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ. ಸ್ಲೀಪರ್ ಕ್ಲಾಸ್ ಬೋಗಿಗಳಲ್ಲಿ ಪ್ರಯಾಣಿಸುವ ಅನಧಿಕೃತ ಪ್ರಯಾಣಿಕರ ಬಗ್ಗೆ ಇಲಾಖೆ ಯಾವ ರೀತಿಯ ಕ್ರಮಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

1 Comment

Write A Comment