ಕರಾವಳಿ

ಡಿ.29: ಪಿಲಿಕುಳದಲ್ಲಿ ‘ನೇತ್ರಾವತಿ-ಫಲ್ಗುಣಿ’ ಕಂಬಳ : ಸಿದ್ದತೆ ಆರಂಭ : ಸಚಿವ ರೈ

Pinterest LinkedIn Tumblr

Pilikul_kambla_Meet_1

ಮಂಗಳೂರು, ನ.5: ಪಿಲಿಕುಳದಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿರುವ ‘ನೇತ್ರಾವತಿ-ಫಲ್ಗುಣಿ’ ಕಂಬಳ ವನ್ನು ವಿಶೇಷವಾಗಿ ಕರಾವಳಿ ಉತ್ಸವದ ಜೊತೆ ಜೊತೆಯಲ್ಲೇ ನಡೆಸಲು ತೀರ್ಮಾನಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಸರ್ಕ್ಯೂಟ್‌ಹೌಸ್‌ನಲ್ಲಿ  ಕಂಬಳ ಸಮಿತಿ ಹಾಗೂ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಚಿವ ರೈ, ಡಿ.29ರಂದು ಪಿಲಿಕುಳದಲ್ಲಿ ಈ ಬಾರಿಯ ಕಂಬಳ ನಡೆಸಲು ದಿನ ನಿಗದಿ ಪಡಿಸಲಾಗಿದೆ ಎಂದರು.

ಇದೇ ಪ್ರಥಮ ಬಾರಿಗೆ ರಾಜ್ಯ ಸರಕಾರದಿಂದ ಕರಾವಳಿ ಉತ್ಸವಕ್ಕೆ 50 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕರಾವಳಿ ಉತ್ಸವದ ಜತೆಯಲ್ಲೇ ಕಂಬಳವನ್ನೂ ನಡೆಸಲು ತೀರ್ಮಾನಿಸಲಾಗಿದೆ ಎಂದರು. ಜಿಲ್ಲೆಯ ಜನಪದ ಕ್ರೀಡೆಯಾದ ಕಂಬಳವನ್ನು ಉಳಿಸುವ ನಿಟ್ಟಿನಲ್ಲಿ ಕಂಬಳಪ್ರಿಯರಿಗೆ ಹಾಗೂ ಯುವ ಪೀಳಿಗೆಗೆ ಕಂಬಳವನ್ನು ಆಕರ್ಷಣೆ ಯನ್ನಾಗಿಸಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.

Pilikul_kambla_Meet_2

2008ರಿಂದ ಪಿಲಿಕುಳದಲ್ಲಿ (ಒಂದು ವರ್ಷ ಹೊರತುಪಡಿಸಿ) ‘ನೇತ್ರಾವತಿ ಫಲ್ಗುಣಿ’ ಕಂಬಳವನ್ನು ಆಯೋಜಿಸಲಾಗುತ್ತಿದೆ. ಈ ಬಾರಿಯೂ ಈ ಹಿಂದೆ ನಿಗದಿಪಡಿಸಿದಂತೆ 2015ರ ಜ.7ರಂದು ಪಿಲಿಕುಳ ಕಂಬಳ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಕರಾವಳಿ ಉತ್ಸವ ಸಮಯದಲ್ಲಿ ಪಿಲಿಕುಳ ಕಂಬಳ ನಡೆಸುವ ನಿಟ್ಟಿನಲ್ಲಿ ಕಂಬಳ ಸಮಿತಿಯ ಡಿ.28ಕ್ಕೆ ದಿಗೊತ್ತುಪಡಿಸಿತ್ತು. ಆದರೆ ಪಿಲಿಕುಳದಲ್ಲಿ ಸ್ಥಳೀಯರು ಅದೇ ದಿನ ಕೆಲ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾರಣ ಅವರ ಬೇಡಿಕೆಯ ಮೇರೆಗೆ ಇದೀಗ ಡಿ.29ಕ್ಕೆ ಕಂಬಳ ದಿನಾಂಕವನ್ನು ನಿಗದಿ ಪಡಿಸಲಾಗಿದೆ ಎಂದು ಕಂಬಳ ಸಮಿತಿ ಪ್ರಮುಖರಾದ ಡಾ. ಜೀವಂಧರ್ ಬಲ್ಲಾಳ್ ತಿಳಿಸಿದರು.

ಕಂಬಳದ ಪೂರ್ವ ಸಿದ್ಧತಾ ಸಭೆ ಯಲ್ಲಿ ಚಲನಚಿತ್ರ ಕಲಾವಿದರನ್ನು ಕಂಬಳಕ್ಕೆ ಕರೆಸಿಕೊಳ್ಳುವ ಮೂಲಕ ಜನಾಕರ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ರಮಾನಾಥ ರೈ ತಿಳಿಸಿದರು. ಕಂಬಳದಲ್ಲಿ ಕೋಣಗಳಿಗೆ ಹೊಡೆಯುವವರು ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. ಪಿಲಿಕುಳದಲ್ಲಿ ಸಂಸ್ಕೃತಿ ಗ್ರಾಮ ನಿರ್ಮಾಣವಾಗುತ್ತಿದ್ದು, ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಯಕ್ಷಗಾನ ಹಾಗೂ ಕಂಬಳದ ಬಗ್ಗೆ ಮಾಹಿತಿ ನೀಡಲು ನಿಗದಿತ ದಿನಗಳಲ್ಲಿ ಕಂಬಳ ಏರ್ಪಡಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಸಲಹೆ ನೀಡಿದರು.

ಪ್ರತೀ ವರ್ಷದ ಡಿಸೆಂಬರ್ ಕೊನೆಯ ಶನಿವಾರ ಹಾಗೂ ರವಿವಾರದ ದಿನವನ್ನು ಪಿಲಿಕುಳ ಕಂಬಳದ ದಿನ ಎಂದು ಪ್ರವಾಸೋದ್ಯಮ ಇಲಾಖೆಯ ಕ್ಯಾಲೆಂಡರ್‌ನಲ್ಲಿ ಗೊತ್ತುಪಡಿಸಿದರೆ ಅನುಕೂಲ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸೂಚಿಸಿದರು.

ಸಂಸದ ನಳಿನ್‌ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ಮಹಾಬಲ ಮಾರ್ಲ, ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಡಿಸಿಪಿ ಡಾ. ಜಗದೀಶ್, ಪಿಲಿಕುಳ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಭಾಕರ ಶರ್ಮ, ಪಿಲಿ ಕುಳದ ನಿರ್ದೇಶಕ ಜಯಪ್ರಕಾಶ್ ಭಂಡಾರಿಮುಂತಾದವರು ಉಪಸ್ಥಿತರಿದ್ದರು.

ಕಡಿಮೆ ಹೊಡೆಯುವ ಐವರಿಗೆ ವಿಶೇಷ ಬಹುಮಾನ

ಸುಪ್ರೀಂ ಕೋರ್ಟ್ ನಿಯಮದಂತೆ ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡುವುದನ್ನು ಯಾವ ರೀತಿಯಲ್ಲಿ ತಡೆಯಲಾಗುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಂಬಳ ಸಮಿತಿಯ ಪ್ರಮುಖ ಡಾ. ಜೀವಂಧರ್, ಕೋಣಗಳಿಗೆ ಹಿಂಸೆ ನೀಡುವ ಅಗತ್ಯವೇ ಇಲ್ಲ. ಕಂಬಳದಲ್ಲಿ ಕೋಣಗಳನ್ನು ಓಡಿಸುವವರು ಯುವಕರಾಗಿರುವುದರಿಂದ ತಮ್ಮ ಪರಾಕ್ರಮವನ್ನು ಸಾರುವ ನಿಟ್ಟಿನಲ್ಲಿ ಹೊಡೆಯುವ ಪ್ರಕ್ರಿಯೆ ನಡೆಯುತ್ತದೆ. ಅದು ನೋಡುಗರಿಗೆ ನೋವುಂಟು ಮಾಡುತ್ತದೆ. ಆದರೆ ಇದರ ಅಗತ್ಯ ಇಲ್ಲ. ಮಾತ್ರವಲ್ಲದೆ, ಕಂಬಳದ ಸಂದರ್ಭ ಗಾಯವಾದ ಕೋಣಗಳಿಗೆ ನಿಂಬೆ ಹಣ್ಣಿಗೆ ಮೆಣಸು ಬೆರೆಸಿ ಹಚ್ಚಲಾಗುತ್ತದೆ ಎಂಬ ಅಪವಾದವೂ ಇದೆ. ಆದರೆ ಅಂತಹದ್ದು ಯಾವುದೂ ನಡೆಯುವುದಿಲ್ಲ ಎಂದವರು ಸ್ಪಷ್ಟಪಡಿಸಿದರು.

ಸುಪ್ರಿಂಕೋರ್ಟ್ ನಿಯಮ ಪಾಲಿಸಲು ವಿಶೇಷ ಗಮನ ಹರಿಸಲಾಗುತ್ತದೆ. ಈ ಕುರಿತಂತೆ ಇತ್ತೀಚೆಗೆ ನಡೆದ ಕಂಬಳ ಸಮಿತಿಯ ಸಭೆಯಲ್ಲಿ ಕೋಣ ಓಡಿಸುವವರಿಗೆ ಸೂಚನೆಗಳನ್ನು ನೀಡಲಾಗಿದೆ. ಪಿಲಿಕುಳದಲ್ಲಿ ಈ ಬಾರಿ ಆಯೋಜಿಸಲಾಗುವ ಕಂಬಳದಲ್ಲಿ ಕಡಿಮೆ ಹೊಡೆಯುವವರು ಹಾಗೂ ಕಡಿಮೆ ಸುತ್ತು ಕೋಣಗಳನ್ನು ತಿರುಗಿಸುವ ಐವರಿಗೆ ವಿಶೇಷ ಬಹುಮಾನ ನೀಡಲಾಗುವುದು.

ಕಂಬಳವು ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಸೀನಿಯರ್, ನೇಗಿಲು ಜೂನಿಯರ್, ಕನೆ ಹಲಗೆ ಹಾಗೂ ಅಡ್ಡಹಲಗೆ ಎಂಬ ವಿಭಾಗಗಳಲ್ಲಿ ನಡೆಯಲಿದೆ ಎಂದು ಡಾ. ಜೀವಂಧರ್ ಬಳ್ಳಾಲ್ ವಿವರಿಸಿದರು.

Write A Comment