ಮಂಗಳೂರು: ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಯಲ್ಲಿ ಸ್ಕಾರ್ಫ್ ಧರಿಸುವುದಕ್ಕೆ ವಳಚ್ಚಿಲ್ನ ಶ್ರೀನಿವಾಸ್ ಔಷಧಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಂಶುಪಾಲರು ನಿಷೇಧ ಹೇರಿದ್ದರಿಂದ ಉಂಟಾಗಿದ್ದ ವಿವಾದವು ನಿನ್ನೆ ಅಂತ್ಯಗೊಂಡಿದೆ.
ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು ಎಂಬ ನಿಯಮವನ್ನು ಕಾಲೇಜಿನಲ್ಲಿ ಇತ್ತೀಚಿಗೆ ಜಾರಿಗೊಳಿಸಲಾಗಿತ್ತು. ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ತರಗತಿಗೆ ಹಾಜರಾಗುವುದಕ್ಕೂ ಪ್ರಾಂಶುಪಾಲರು ಅವಕಾಶ ಕಲ್ಪಿಸಿರಲಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗಾಗಿ ನಿನ್ನೆ ಕಾಲೇಜಿಗೆ ಬಂದ ವಿದ್ಯಾರ್ಥಿ ಪೋಷಕರು ಪ್ರಾಂಶುಪಾಲರ ಜೊತೆ ಮಾತುಕತೆ ನಡೆಸಿದರು.
ಈ ವೇಳೆ ಪೋಷಕರು, ಸ್ಕಾರ್ಫ್ ನಿಷೇಧಿಸುವ ನಿರ್ಧಾರವನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಕೈಗೊಳ್ಳುತ್ತಿದ್ದರೆ ನಾವು ಮಕ್ಕಳನ್ನು ಬೇರೆ ಕಾಲೇಜಿಗೆ ಸೇರಿಸಿಕೊಳ್ಳುತ್ತಿದ್ದೆವು, ಆದರೆ ಮಧ್ಯದಲ್ಲೇ ಈ ನಿರ್ಧಾರ ಸರಿಯಲ್ಲ ಎಂದು ವಾದಿಸಿದರು. ಕೊನೆಗೆ ಪೋಷಕರ ಒತ್ತಾಯಕ್ಕೆ ಪ್ರಾಂಶುಪಾಲರು ಮಣಿದು, ಸ್ಕಾರ್ಫ್ಗೆ ಅವಕಾಶ ನೀಡಿದ್ದಾರೆ ಎಂದು ಹೇಳಲಾಗಿದೆ.