ಮಂಗಳೂರು: ವಾಹನ ಡಿಕ್ಕಿ ಹೊಡೆಸಿ ಕೊಲೆ ಮಾಡಿಸಿದ್ದ ಆರೋಪ ಹೊತ್ತುಕೊಂಡಿರುವ ಸತೀಶ್ ಬೈಕಂಪಾಡಿಯನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
2013ರ ಮೇ 14ರಂದು ಹೊಸಬೆಟ್ಟು ಬಳಿ ನಡೆದಿದ್ದ ಅಪಘಾತದಲ್ಲಿ ಬೈಕ್ ಸವಾರ ಧಾರವಾಡ ಮೂಲದ ಹೊಸಬೆಟ್ಟು ನಿವಾಸಿ ಬಸವರಾಜ್ (45) ಮೃತಪಟ್ಟಿದ್ದರು. ಸಹ ಸವಾರರಾಗಿದ್ದ ಗಂಗಾಧರ ಹೊಸಬೆಟ್ಟು ಗಂಭೀರ ಗಾಯಗೊಂಡಿದ್ದರು. ಇದನ್ನು ಸತೀಶ್ ಬೈಕಂಪಾಡಿ ಮತ್ತವನ ತಂಡವೇ ನಡೆಸಿದೆ ಎಂದು ಗಂಗಾಧರ ಹೊಸಬೆಟ್ಟು ಸುರತ್ಕಲ್ ಠಾಣೆಗೆ ದೂರು ನೀಡಿದ್ದರು.
ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಗಂಗಾಧರ ಪಾಂಗಳ್ ಕೊಲೆಯಾದ ಬಗ್ಗೆ ಆರೋಪಿ ಸತೀಶ್ ಬೈಕಂಪಾಡಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿತ್ತು. ಈ ಸಂದರ್ಭ ಹಳೆ ಕೇಸಿನಲ್ಲಿ ವಿಚಾರಣೆ ನಡೆಸಿದ ಪೊಲೀಸರು ಇದರಲ್ಲೂ ಸತೀಶ್ ಬೈಕಂಪಾಡಿ ಕೈವಾಡವಿದೆ ಎಂದು ಆತನನ್ನು ಬಂಧಿಸಿದ್ದರು. ಈತನನ್ನು ಹೆಚ್ಚಿನ ವಿಚಾರಣೆ ನಡೆಸುವ ನಿಟ್ಟಿನಲ್ಲಿ ಬುಧವಾರ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು. ಶನಿವಾರ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಮರಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.