ನವದೆಹಲಿ: 2ಜಿ ಮತ್ತು ಜಯಾ ಅಕ್ರಮ ಅಸ್ತಿ ಗಳಿಕೆ ಪ್ರಕರಣಗಳನ್ನು ಬಯಲಿಗೆಳೆದ ಖ್ಯಾತಿಯ ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಅವರ ಮುಂದಿನ ಟಾರ್ಗೆಟ್ ಕಾಂಗ್ರೆಸ್ ಮುಖಂಡ ಶಶಿ ತರೂರ್..
2ಜಿ ಹಗರಣ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಮಾಡಿದ್ದ ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಅವರ ಮುಂದಿನ ಟಾರ್ಗೆಟ್ ಯಾರು ಗೊತ್ತೆ..? ಅದು ಬೇರಾರು ಅಲ್ಲ… ಐಪಿಎಲ್ ಸರಣಿಯಲ್ಲಿ ಕೇರಳ ತಂಡದಲ್ಲಿ ಷೇರು ಖರೀದಿಸಿ ತಮ್ಮ ಕೇಂದ್ರ ಸಚಿವ ಸ್ಥಾನ ಕಳೆದುಕೊಂಡ ಮಾಜಿ ಕೇಂದ್ರ ಸಚಿವ ಶಶಿತರೂರ್..
ಶಶಿತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ಕುರಿತಂತೆ ಸುಬ್ರಮಣಿಯನ್ ಸ್ವಾಮಿ ಅವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲು ಮಾಡಲು ಮುಂದಾಗಿದ್ದಾರೆ. ಸುನಂದಾ ಪುಷ್ಕರ್ ಅವರ ಸಾವು ನಿಗೂಢವಾಗಿದ್ದು, ಹಲವು ಅನುಮಾನಗಳಿಗೆ ಆಸ್ಪದೆ ನೀಡಿದೆ ಹೀಗಾಗಿ ತಾವು ಅವರ ಸಾವಿನ ಕುರಿತು ವಿಶೇಷ ತನಿಖೆ ನಡೆಸುವಂತೆ ನ್ಯಾಯಾಲಯವನ್ನು ಕೇಳಿಕೊಳ್ಳುತ್ತೇನೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
‘ಸುನಂದಾ ಸಾವಿಗೂ ಮುನ್ನ ನಡೆದ ಕೆಲ ನಾಟಕೀಯ ಬೆಳವಣಿಗೆಗಳು ಅವರ ಸಾವು ಸಾಮಾನ್ಯ ಸಾವಾಗಿರಲಿಲ್ಲ ಎನ್ನುವುದಕ್ಕೆ ಇಂಬು ನೀಡುತ್ತಿದ್ದು, ಆ ಸಮಯದಲ್ಲಿ ಶಶಿ ತರೂರ್ ನಡೆದುಕೊಂಡ ನಡವಳಿಕೆ ಕೂಡ ಅನುಮಾನಾಸ್ಪದವಾಗಿತ್ತು. ಅಲ್ಲದೆ ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ-2 ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಪ್ರಸ್ತುತ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದೆ. ಶಶಿತರೂರ್ ಅವರು ದೆಹಲಿಯಲ್ಲಿರುವ ಬಿಜೆಪಿ ಕಚೇರಿಗೆ ಎಷ್ಟೇ ಬಾರಿ ಅಲೆದರೂ ನಾನು ಆ ಪ್ರಕರಣವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ’ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಕಳೆದ ಜನವರಿ 17ರಂದು ನವದೆಹಲಿಯ ಖಾಸಗಿ ಹೊಟೆಲ್‌ನಲ್ಲಿ ಶಶಿತರೂರ್ ಪತ್ನಿ ಸುನಂದಾ ಪುಷ್ಕರ್ ಅವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಆರಂಭದಲ್ಲಿ ಸುನಂದಾ ಅವರ ಸಾವನ್ನು ಸಾಮಾನ್ಯ ಸಾವು ಎಂದು ಹೇಳಲಾಗಿತ್ತಾದರೂ, ಬಳಿಕ ದೆಹಲಿಯ ಏಮ್ಸ್ ಆಸ್ಪತ್ರೆ ನೀಡಿದ್ದ ವರದಿ ಇಡೀ ಪ್ರಕರಣಕ್ಕೆ ಮಹತ್ವದ ತಿರುವು ನೀಡಿತ್ತು. ಏಮ್ಸ್ ಆಸ್ಪತ್ರೆಯ ವೈದ್ಯರು ಸುನಂದಾ ಹೊಟ್ಟೆಯಲ್ಲಿ ವಿಷಕಾರಿ ದ್ರಾವಕ ಪತ್ತೆಯಾಗಿದೆ ಎಂದು ಹೇಳಿದ್ದರು. ಅಲ್ಲದೆ ಈ ಮೊದಲು ನೀಡಿದ್ದ ಶವಪರೀಕ್ಷಾ ವರದಿಯ ಮೇಲೆ ಕೆಲ ರಾಜಕೀಯ ಪ್ರಭಾವ ಇತ್ತು ಎಂಬ ಅಂಶವನ್ನು ಕೂಡ ಪರೋಕ್ಷವಾಗಿ ಒಪ್ಪಿಕೊಂಡಿದ್ದರು.
ಸುನಂದ ಪುಷ್ಕರ್ ಸಾವನ್ನು ಶಂಕಾಸ್ಪದವಾಗಿ ನೋಡಲು ಮತ್ತೊಂದು ಪ್ರಮುಖ ಕಾರಣವೆಂದರೆ ಪಾಕಿಸ್ತಾನ ಮೂಲದ ಪತ್ರಕರ್ತೆ ಮೆಹರ್ ತರಾರ್ ಎಂಬುವವರು. ಸುನಂದಾ ಸಾವಿಗೂ ಮುನ್ನ ಶಶಿತರೂರ್ ಮತ್ತು ಮೆಹರ್ ತರಾರ್ ಅವರು ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಸ್ವತಃ ಸುನಂದಾ ಪುಷ್ಕರ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಅತ್ತ ಶಶಿ ತರೂರ್ ಅವರು ಇದೆಲ್ಲಾ ಸುಳ್ಳು ನಾನು ಯಾರೊಂದಿಗೂ ಅಕ್ರಮ ಸಂಬಂಧ ಹೊಂದಿಲ್ಲ. ನನ್ನ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿಕೊಂಡಿದ್ದರು. ಬಳಿಕ ಟ್ವೀಟ್ ಮಾಡಿದ್ದ ಸುನಂದಾ ಪುಷ್ಕರ್ ಅವರು ಶಶಿ ತರೂರ್ ಅವರ ಟ್ವಿಟರ್ ಖಾತೆಯ ರಹಸ್ಯ ಸಂಖ್ಯೆಯನ್ನು ನಾನೇ ಬಳಕೆ ಮಾಡಿ ತರಾರ್‌ರೊಂದಿಗೆ ಚಾಟ್ ಮಾಡಿದ್ದೆ. ಆಗ ಅವರ ಅಕ್ರಮ ಸಂಬಂಧ ಬಹಿರಂಗವಾಗಿತ್ತು ಎಂದು ಹೇಳಿದ್ದರು.
ಇದಾದ ಬಳಿಕ ಮೆಹರ್ ತರಾರ್ ಮತ್ತು ಸುನಂದಾ ಪುಷ್ಕರ್ ಅವರು ಪರಸ್ಪರ ಟ್ವಿಟರ್‌ನಲ್ಲಿ ಯುದ್ಧವನ್ನೇ ಸಾರಿದ್ದರು. ಜನವರಿಯಲ್ಲಿ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳಲು ಶಶಿತರೂರ್ ಅವರು ದೆಹಲಿಗೆ ಆಗಮಿಸಿದ್ದಾಗ ಅವರೊಂದಿಗೆ ಸುನಂದಾ ಪುಷ್ಕರ್ ಅವರು ಕೂಡ ದೆಹಲಿಗೆ ಆಗಮಿಸಿದ್ದರು. ಆದರೆ ಖಾಸಗಿ ಹೊಟೆಲ್ ಉಳಿದುಕೊಂಡಿದ್ದ ಸುನಂದಾ ಪುಷ್ಕರ್ ಅವರು ಜನವರಿ 7ರಂದು ನಿಗೂಢವಾಗಿ ಸಾವಿಗೀಡಾಗಿದ್ದರು.
ಸುನಂದಾ ಅವರ ಹೊಟ್ಟೆಯಲ್ಲಿರುವ ವಿಷದಿಂದಾಗಿ ಅವರ ಸಾವಾಗಿದೆ ಎಂಬ ವೈದ್ಯರ ಹೇಳಿಕೆಯನ್ನು ಹೊರತು ಪಡಿಸಿದರೆ, ಆ ವಿಷವನ್ನು ಯಾರು ಸುನಂದಾ ಅವರಿಗೆ ಕೊಟ್ಟರು, ಸುನಂದಾ ಅವರ ಸಾವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬಿತ್ಯಾದಿ ವಿಚಾರಗಳು ನಿಗೂಢವಾಗಿಯೇ ಇದೆ. ಹೀಗಾಗಿಯೇ ಬಹುಶಃ ಸುಬ್ರಮಣಿಯನ್ ಸ್ವಾಮಿ ಅವರು ಸುನಂದಾ ಸಾವನ್ನು ತನಿಖೆಗೊಳಪಡಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.