ಮಂಗಳೂರು, ನ. 12: ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಪೋಸ್ಕೋ ಕಾಯ್ದೆಯಡಿ ದಾಖಲಾಗಿರುವ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಒಂದು ವರ್ಷದೊಳಗೆ ಇತ್ಯರ್ಥಗೊಳಿಸಲಾಗುವುದು ಎಂದು ಕಾನೂನು, ನ್ಯಾಯ, ಮಾನವ ಹಕ್ಕು, ಸಂಸದೀಯ ವ್ಯವಹಾರ, ಪಶುಸಂಗೋಪನೆ ಮತ್ತು ಮುಜರಾಯಿ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ, ಕಿರುಕುಳ ನಡೆದಾಗ ನೇರವಾಗಿ ನ್ಯಾಯಾಲಯಕ್ಕೆ ಹೋಗಿ ನ್ಯಾಯಾಧೀೀಶರಲ್ಲಿ ದೂರು ನೀಡುವ ಮಹತ್ವದ ತೀರ್ಮಾನವನ್ನು ಸರಕಾರ ಕೈಗೊಂಡಿದೆ. ಈ ‘164 ಹೇಳಿಕೆ’ಯಿಂದ ವಿಚಾರಣೆ ವೇಳೆ ಸಾಕ್ಷಿಗಳು ಬಾರದಿದ್ದರೂ, ನ್ಯಾಯಾಧೀಶರು ಸಾಬೀತು ಮಾಡಬಹುದು. ಜೊತೆಗೆ ಎಲ್ಲ ನ್ಯಾಯಾಲಯಗಳಲ್ಲಿ ವಿಶೇಷ ಪ್ರಾಸಿಕ್ಯೂಷನ್ ನೇಮಿಸಿ, ಒಂದು ವರ್ಷದೊಳಗೆ ಎಲ್ಲ ಪ್ರಕರಣ ಇತ್ಯರ್ಥಪಡಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ಹೇಳಿದರು.
ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಪೋಕ್ಸೂ ಕಾಯ್ದೆಯಂತೆ ರಾಜ್ಯದಲ್ಲಿ ಒಟ್ಟು 1,577 ಪ್ರಕರಣ ದಾಖಲಾಗಿದ್ದು, ಅದರಲ್ಲಿ 281 ಇತ್ಯರ್ಥಗೊಂಡು, 1,296 ಪ್ರಕರಣಗಳು ಬಾಕಿ ಇವೆ. ಬೆಂಗಳೂರಿನಲ್ಲಿ 400, ಕಾರವಾರ 26, ದಕ್ಷಿಣ ಕನ್ನಡ 59, ಕೊಡಗು 30, ಕೋಲಾರ 41 ಪ್ರಕರಣಗಳು ದಾಖಲಾಗಿವೆ. ಪ್ರಕರಣದ ತ್ವರಿತ ವಿಚಾರಣೆಗೆ ಬೆಂಗಳೂರಿನಲ್ಲಿ ಎರಡು ಹಾಗೂ ಉಳಿದ ಎಲ್ಲ ಜಿಲ್ಲೆಗಳಲ್ಲಿ ವಿಶೇಷ ಕೋರ್ಟ್ ಸ್ಥಾಪಿಸಲಾಗುತ್ತಿದೆ. ಜಿಲ್ಲಾ ಸೆಷನ್ಸ್ ನ್ಯಾಯಾಧೀಶರೇ ವಿಚಾರಣೆ ನಡೆಸುತ್ತಾರೆ ಎಂದು ಅವರು ತಿಳಿಸಿದರು.
ಕಾನೂನಿನ ಭಯವಿಲ್ಲದೆ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಾನೂನು ಅರಿವು, ಸಂವಾದದ ಮೂಲಕ ಪೋಕ್ಸೋ ಕಾಯ್ದೆ, ಶಿಕ್ಷೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸೂಚನೆ ನೀಡಲಾಗಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ಹಿಂದಿನ ಸರಕಾರ ರಚಿಸಿದ್ದ ರಾಜ್ಯ ಹಾಗೂ ಜಿಲ್ಲಾಮಟ್ಟದ ಧಾರ್ಮಿಕ ಪರಿಷತ್ಗಳನ್ನು ನಮ್ಮ ಸರಕಾರ ವಜಾ ಮಾಡಿತ್ತು. ಈ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇದೆ. ಫೆಬ್ರವರಿ ವೇಳೆಗೆ ಧಾರ್ಮಿಕ ಪರಿಷತ್ ಮತ್ತು ಎಲ್ಲ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ನೇಮಕ ಮಾಡಲಾಗುವುದು ಎಂದು ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಕೊಯಿಲದಲ್ಲಿ ಪಶು ವೈದ್ಯಕೀಯ ಕಾಲೇಜು ಯೋಜನೆ ಶೀಘ್ರ ಆರಂಭಿಸಲು ಆದ್ಯತೆ ನೀಡಬೇಕು. ಏಕರೂಪ ಮರಳುಗಾರಿಕೆಗೆ ಅಡ್ಡಿಯಾಗಿರುವ ಸಿಆರ್ಝೆಡ್ ನಿಯಮ, ಮತೀಯ ಸಾಮರಸ್ಯ ಹದಗೆಡಿಸುವವರ ವಿರುದ್ಧ ಕ್ರಮ, ಧಾರ್ಮಿಕ ಪರಿಷತ್ ಸ್ಥಾಪನೆಗೆ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಉಪಮೇಯರ್ ಕವಿತಾ ವಾಸು, ಕಾಂಗ್ರೆಸ್ ಮುಖಂಡರಾದ ಬಿ.ಇಬ್ರಾಹೀಂ, ಕೋಡಿಜಾಲ್ ಇಬ್ರಾಹೀಂ, ಕಳ್ಳಿಗೆ ತಾರನಾಥ ಶೆಟ್ಟಿ, ಎ.ಸಿ.ಭಂಡಾರಿ, ಹಿಲ್ಡಾ ಆಳ್ವ, ಶಶಿಧರ ಹೆಗ್ಡೆ, ಕೃಪಾ ಆಳ್ವ, ವಿಶ್ವಾಸ್ಕುಮಾರ್ ದಾಸ್, ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಫಿ ಅಹ್ಮದ್, ನಾಗೇಂದ್ರ ಕುಮಾರ್, ಸದಾಶಿವ ಉಳ್ಳಾಲ್, ಸಂತೋಷ್ ಕುಮಾರ್ ಶೆಟ್ಟಿ, ಬಿ.ಕೆ. ಇದಿನಬ್ಬ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಚಿವ ಜಯಚಂದ್ರ, ಮುಂಬರುವ ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗೆ ಹೆಚ್ಚಿನ ಗಮನ ನೀಡುವಂತೆ ಕರೆ ನೀಡಿದರು. ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ಗೆ ಸುಧಾರಣೆ ತರುವ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಸಮಿತಿ ರಚಿಸಿ ಸರಕಾರದ ಮಟ್ಟದಲ್ಲಿ ಚರ್ಚಿಸಿ ಅಂತಿಮವಾಗಿ ನಿರ್ಧಾರ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ಗಳಿಗೆ ಹೊಸ ಸ್ವರೂಪವನ್ನು ನೀಡುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದಿಂದ ಆಗಲಿದೆ ಎಂದವರು ಹೇಳಿದರು.