ಮಂಜೇಶ್ವರ, ನ.12: ಕೈಕಂಬ-ಬಾಯಾರು ರಸ್ತೆ ದುರಸ್ತಿ ಮಾಡದಿರುವುದನ್ನು ಪ್ರತಿಭಟಿಸಿ ಕೈಕಂಬ ಬಾಯಾರು ರಸ್ತೆ ಸಂರಕ್ಷಣಾ ಸಮಿತಿಯು ಕರೆ ನೀಡಿದ್ದ ರಸ್ತೆ ತಡೆ ಮಂಗಳವಾರ ಸಂಪೂರ್ಣ ಯಶಸ್ವಿ ಕಂಡಿದೆ. ಕಳೆದ 6 ವರ್ಷಗಳಿಂದ ದುರಸ್ತಿ ಕಾಣದ ಈ ರಸ್ತೆಯ ದುರಸ್ತಿಗೆ ಆಡಳಿತ ಅಧಿಕಾರಿ ವರ್ಗ ಮುಂದಾಗುತ್ತಿಲ್ಲವೆಂಬ ಆರೋಪ ನಾಗರಿಕರದ್ದಾಗಿದೆ. ರಸ್ತೆಯ ಮಧ್ಯದಲ್ಲಿಯೇ ಕುರ್ಚಿ ಹಾಕಿ ಕುಳಿತ ಪ್ರತಿಭಟನಕಾರರು ರಸ್ತೆ ಸಂಚಾರ ಸಂಪೂರ್ಣ ತಡೆದರಲ್ಲದೆ ರಸ್ತೆಯ ಮಧ್ಯದಲ್ಲಿಯೇ ಒಲೆ ಹಾಕಿ ಪ್ರತಿಭಟನೆ ನಡೆಸಿದರು.
ಬೇಕೂರು ಹಾಗೂ ಬಾಯಿಕಟ್ಟೆಯಲ್ಲಿ ರಸ್ತೆಯ ಮಧ್ಯೆ ಟೈಯರ್, ಮರಗಳಿಗೆ ಬೆಂಕಿ ಹಾಕಲಾಗಿತ್ತು. ಬಳಿಕ ಮಂಜೇಶ್ವರ ಠಾಣಾ ಸಬ್‌ಇನ್ಸ್‌ಪೆಕ್ಟರ್ ಪ್ರಮೋದ್ ನೇತೃತ್ವದ ಪೊಲೀಸರ ತಂಡ ಅವರನ್ನು ಬಂಧಿಸಿ ಬಿಡುಗಡೆಗೊಳಿಸಿದರು.
ಪಿ.ಡಬ್ಲ್ಯೂ.ಡಿ. ಈ ರಸ್ತೆಯ ದುರಸ್ತಿಗೆ ಹಣ ಮಂಜೂರು ಮಾಡಲಾಗಿದ್ದರೂ ಗುತ್ತಿಗೆ ತೆಗೆಯಲು ಯಾರೂ ಮುಂದಾಗದೇ ಇರುವುದು ದುರಸ್ತಿ ವಿಳಂಬಕ್ಕೆ ಕಾರಣ ಎನ್ನಲಾಗಿದೆ. ಇದೇ ರಸ್ತೆಯಾಗಿ ದಿನ ನಿತ್ಯ ನೂರಾರು ವಾಹನಗಳು ಓಡಾಡುತ್ತಿದೆ. ಕೇಸು ದಾಖಲು: ರಸ್ತೆ ತಡೆಯೊಡ್ಡಿದ 500 ಮಂದಿಯ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.