ಶಹಜಹಾನ್‌ಪುರ: ಉತ್ತರ ಪ್ರದೇಶದ ಪಾನಮತ್ತ ಪೊಲೀಸ್ ಪೇದೆಯೊಬ್ಬ ತನ್ನ ಬಳಿ ಇದ್ದ ಗನ್ ತೋರಿಸಿ ಮಹಿಳಾ ಡಾನ್ಸರ್‌ಳನ್ನು ಗಂಟೆಗಟ್ಟಲೆ ಕುಣಿಸಿದ್ದಾನೆ.
ಶಹಜಹಾನ್ ಪುರದಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್ ಪೇದೆ ಕಂಠಪೂರ್ತಿ ಕುಡಿದು ನಗೋಹಾದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ತನ್ನ ಬಳಿ ಇದ್ದ ಗುಂಡು ಸಹಿತ ಗನ್ ಅನ್ನು ಸಾರ್ವಜನಿಕವಾಗಿಯೇ ಪ್ರದರ್ಶಿಸಿದ್ದಾನೆ. ಅಷ್ಟೇ ಅಲ್ಲದೆ ವೇದಿಕೆ ಮೇಲೆ ಕುಣಿಯುತ್ತಿದ್ದ ಯುವತಿಗೆ ತನ್ನ ಗನ್ ತೋರಿಸಿ ತನ್ನೊಂದಿಗೆ ಕುಣಿಯುವಂತೆ ಆಜ್ಞೆ ಮಾಡಿದ್ದಾನೆ. ಪೊಲೀಸಪ್ಪನ ಬೆದರಿಕೆಯಿಂದಾಗಿ ವೇದಿಕೆ ಮೇಲಿದ್ದ ಯುವತಿಯು ಆತ ಹೇಳಿದ್ದಂತೆ ಗಂಟೆಗಟ್ಟಲೆ ಡಾನ್ಸ್ ಮಾಡಿದ್ದಾಳೆ.
ಪೇದೆಯ ಅಟ್ಟಹಾಸಕ್ಕೆ ಬೆದರಿದ ಯುವತಿ ಹಲವು ಬಾರಿ ತನ್ನ ಸಮತೋಲನವನ್ನು ಕಳೆದು ಕೊಂಡು ಕೆಳಗೆ ಬಿದ್ದರೂ ಆಕೆಯನ್ನು ಬಿಡದ ಈ ಆತ ಮತ್ತೆ ಆಕೆಯನ್ನು ಎಬ್ಬಿಸಿ ನೃತ್ಯ ಮಾಡಿಸಿದ್ದಾನೆ. ಅತ್ತ ಯುವತಿ ವೇದಿಕೆ ಮೇಲೆ ಕುಣಿಯುತ್ತಿದ್ದರೆ ಇತ್ತ ಪೊಲೀಸ್ ಪೇದೆ ತನ್ನ ಜೇಬಿನಿಂದ ಹಣದ ಕಂತೆಯನ್ನು ತೆಗೆದು ಆಕೆಯ ಮೇಲೆ ಎರಚುತ್ತಿದ್ದನು. 100 ರು. ಮತ್ತು 500ರು.ಮುಖಬೆಲೆಯ ನೋಟುಗಳನ್ನು ಸುಮಾರು ಅರ್ಧಗಂಟೆಯ ಕಾಲ ಸತತವಾಗಿ ಯುವತಿಯ ಮೇಲೆ ಆತ ಎರಚುತ್ತಿದ್ದುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಒಂದು ಅಂದಾಜಿನ ಪ್ರಕಾರ ಪೇದೆ ಯುವತಿಯ ಮೇಲೆ ಎರಚಿದ ಹಣದ ಮೌಲ್ಯವೇ ಸುಮಾರು 30 ಸಾವಿರ ರು.ಗಳು ಇರಬಹುದು ಎಂದು ಊಹಿಸಲಾಗಿದೆ.
ಪೇದೆಯ ದೌರ್ಜನ್ಯವನ್ನು ಕಂಡ ಸ್ಥಳೀಯ ಜನತೆ ಬೆಚ್ಚಿ ಬಿದ್ದಿದ್ದು, ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಅದರ ದೃಶ್ಯಾವಳಿಗಳು ಇದೀಗ ಮಾಧ್ಯಮಗಳಿಗೆ ಲಭ್ಯವಾಗಿದ್ದು, ಸಾರ್ವಜನಿಕರಿಂದ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಮೂಲಗಳ ಪ್ರಕಾರ ಕಾರ್ಯಕ್ರಮದಲ್ಲಿ ಅಸಭ್ಯವಾಗಿ ವರ್ತಿಸಿದ ಪೊಲೀಸ್ ಪೇದೆಯ ಹೆಸರು ಶೈಲೇಂದ್ರ ಶುಕ್ಲಾ ಎಂದು ತಿಳಿದುಬಂದಿದ್ದು, ಈತ ಶಹಜಹಾನ್ ಪೊಲೀಸ್ ಠಾಣೆಯ ಪೇದೆ ಎಂದು ಹೇಳಲಾಗುತ್ತಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೇದೆ ಶುಕ್ಲಾನನ್ನು ಶಹಜಹಾನ್ ಪುರ ಪೊಲೀಸ್ ಠಾಣೆಯ ಎಸ್‌ಪಿ ರಮೇಶ್ ಚಂದ್ರ ಸಾಹು ಅವರು ಅಮಾನತು ಮಾಡಿದ್ದು, ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ‘ಪ್ರಕರಣ ನಮ್ಮ ಗಮನಕ್ಕೆ ಬಂದ ಕೂಡಲೇ ಪೇದೆ ಶೈಲೇಂದ್ರ ಶುಕ್ಲಾ ಅವರನ್ನು ಅಮಾನತು ಮಾಡಲಾಗಿದೆ. ಇದಲ್ಲದೆ ಪೇದೆ ವಿರುದ್ಧ ಸಾರ್ವಜನಿಕರಿಗೆ ತೊಂದರೆ ನೀಡಿದ ಪ್ರಕರಣದಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆದೇಶಿಸಿದ್ದೇವೆ’ ಎಂದು ಶಹಜಹಾನ್ ಪುರ ಪೊಲೀಸ್ ಠಾಣೆಯ ಎಸ್‌ಪಿ ರಮೇಶ್ ಹೇಳಿದ್ದಾರೆ.
ಒಟ್ಟಾರೆ ಕರ್ತವ್ಯದಲ್ಲಿದ್ದಾಗಲೇ ಕಂಠಪೂರ್ತಿ ಕುಡಿದು ಸಾರ್ವಜನಿಕರ ಮೇಲೆ ತನ್ನ ದರ್ಪ ತೋರಿದ್ದ ಪೊಲೀಸ್ ಪೇದೆ, ಇದೀಗ ತನ್ನ ತಪ್ಪಿಗೆ ತಾನೇ ಪಶ್ಚಾತ್ಥಾಪ ಪಡುವಂತಾಗಿದೆ.