ಬೆಂಗಳೂರು: ಕನ್ನಡಿಗರ ಆರಾಧ್ಯ ದೈವ, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಪ್ರತಿಮೆಗೆ ಹಾನಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದಲ್ಲಿ ತಡರಾತ್ರಿ ನಡೆದಿದೆ. ಡಾ. ರಾಜ್ ಕುಮಾರ್ ಅವರ ಸಿಪಾಯಿ ರಾಮು ಗೆಟಪ್ ನಲ್ಲಿರುವ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದು, ಅಭಿಮಾನಿಗಳನ್ನು ಸೇರಿದಂತೆ, ಕನ್ನಡಪರ ಸಂಘಟನೆಗಳು ಈ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ನವೆಂಬರ್ 23ಕ್ಕೆ ಪ್ರತಿಮೆಯನ್ನು ಲೋಕಾರ್ಪಾಣೆಗೊಳ್ಳಲು ಸಿದ್ಧವಾಗಿದ್ದ ಈ ಪ್ರತಿಮೆಗೆ ಹಾನಿಯಾಗಿರುವನ್ನು ಖಂಡಿಸಿ ವಿವಿಧ ಸಂಘಟನೆಗಳು ಕಿಡಿಗೇಡಿಗಳ ಬಂಧನ ಆಗ್ರಹಿಸಿ ಧರಣಿ ನಿರತರಾಗಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಮುಂದುವರೆದಿದ್ದು ಪೊಲೀಸರ ಬಿಗು ಬಂದೋಬಸ್ತ್ ಸ್ಥಳದಲ್ಲಿ ಏರ್ಪಡಿಸಲಾಗಿದೆ.
ಘಟನೆ ಬಗ್ಗೆ ಎಲ್ಲರ ಖಂಡನೆ: ಪ್ರತಿಮೆ ನಿರ್ಮಾಣ ಹೊಣೆ ಹೊತ್ತಿದ್ದ ಬಲಮುರಿ ಸೇವಾ ಸಮಿತಿ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ನವೆಂಬರ್ 23 ಕ್ಕೆ ಅನಾವರಣಗೊಳ್ಳಲು ಸಿದ್ದತೆ ನಡೆಸಲಾಗಿತ್ತು. ಪ್ರತಿಮೆ ಸಂರಕ್ಷಿಸಲು ಪ್ಲಾಸ್ಟಿಕ್ ಕವರ್ ಸುತ್ತಲಾಗಿತ್ತು. ಈ ಕವರ್ ಗೆ ಬೆಂಕಿ ಹಚ್ಚಿ ಪ್ರತಿಮೆ ಹಾಳುಗೆಡವಿದ್ದಾರೆ. ಮೂಲವೊಂದರ ಪ್ರಕಾರ ತಡರಾತ್ರಿ ೨.೩೦ ರ ಬಳಿಕ ಕ್ರತ್ಯ ನಡೆದಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಗ್ರಹಸಚಿವ ಕೆ.ಜಾರ್ಜ್, ಸ್ಥಳೀಯ ಶಾಸಕರು ಸೇರಿದಂತೆ, ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಡಾ. ಸಾರಾ ಗೋವಿಂದು, ಚಿತ್ರರಂಗದ ಹಲವು ಗಣ್ಯರು ಭೇಟಿ ನೀಡಿದ್ದಾರೆ. ಪೊಲೀಸ್ ಕಮಿಷನರ್ ಎಂ.ಎನ್. ರೆಡ್ಡಿಯವರು ಮಾತನಾಡಿ, ಈ ಬಗ್ಗೆ ತನಿಖೆ ಕೈಗೊಂಡಿದ್ದು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.
ಡಾ.ರಾಜಕುಮಾರ್ ಪುತ್ರ ಪುನೀತ್ ರಾಜಕುಮಾರ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡುತ್ತಾ, ಅಪ್ಪಾಜಿ ಕನ್ನಡಿಗರ ಆಸ್ತಿಯಾಗಿದ್ದು ಈ ಘಟನೆ ಕನ್ನಡಿಗರಿಗೆ ಮಾಡಿರುವ ಅಪಮಾನ, ಆರೋಪಿಗಳು ಯಾರೇ ಆಗಿರಲಿ ಶೀಘ್ರ ಅವರನ್ನು ಪತ್ತೆ ಮಾಡಬೇಕು ಎಂದರು. ರಾಘವೇಂದ್ರ ರಾಜಕುಮಾರ್ ಮಾತನಾಡುತಾ, ಅಭಿಮಾನಿಗಳು ಈ ಬಗ್ಗೆ ಯಾವುದೇ ರೀತಿಯಾಗಿ ಬೇಸರಪಡಬಾರದು ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದರು.
ಇನ್ನು ವಿಧಿವಿಜ್ನಾನ ತಜ್ನರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಬೆಂಗಳೂರಿನಲ್ಲಿ ಮಳೆಯಿರುವ ಕಾರಣ ತನಿಖೆಗೆ ಕೊಂಚ ಹಿನ್ನಡೆಯಾಗುತ್ತಿದೆ ಎನ್ನಲಾಗಿದೆ.