ಬೆಂಗಳೂರು, ನ.13: ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಶ್ರೀಗಳ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಪರೀಕ್ಷೆಗೆ ನೀಡಿದ್ದ ತಡೆಯಾಜ್ಞೆಯ ತೆರವು ಕೋರಿ ಸರಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹಿಂದೆ ಸರಿದಿದ್ದಾರೆ.
ರಾಘವೇಶ್ವರ ಸ್ವಾಮೀಜಿಯವರ ವಿರುದ್ಧ ಬೆಂಗಳೂರಿನ ಶ್ರೀನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹಾಗೂ ತೀರ್ಪು ನೀಡುವುದು ವಿಳಂಬವಾಗಿದೆ ಎಂದು ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ಆರೋಪಿಸುತ್ತಿರುವ ಸಂತ್ರಸ್ತೆ ಪ್ರೇಮಲತಾ ಶಾಸ್ತ್ರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ಇದು ನ್ಯಾಯಾಂಗ ವ್ಯವಸ್ಥೆಯ ಮೇಲೆ ವಿಶ್ವಾಸವನ್ನು ಕಳೆದುಕೊಂಡಿರುವುದನ್ನು ತೋರಿಸುತ್ತದೆ. ಅಲ್ಲದೆ, ಈ ಅರ್ಜಿಯ ವಿಚಾರಣೆ ನಡೆಸಿದರೂ ಇದೇ ರೀತಿಯ ಆರೋಪ ಬರಬಹುದು. ಪತ್ರ ಬರೆದಿರುವುದರಿಂದ ನ್ಯಾಯಪೀಠವೇನೂ ವಿಚಲಿತವಾಗಿಲ್ಲ. ವಾದಿ ಮತ್ತು ಪ್ರತಿವಾದಿ ವಕೀಲರಿಬ್ಬರಿಗೂ ವಾದ ಮಂಡಿಸಲು ಒಂದೂವರೆ ದಿನ ಕಾಲಾವಕಾಶ ನೀಡಲಾಗಿತ್ತು. ಒಟ್ಟು ಮೂರು ದಿನಗಳ ಕಾಲ ವಿಚಾರಣೆ ನಡೆಸಿ ನ್ಯಾಯಯುತವಾದ ತೀರ್ಪನ್ನೇ ನೀಡಲಾಗಿದೆ. ಹಾಗಿದ್ದರೂ, ರಾಷ್ಟ್ರಪತಿಗೆ ಪತ್ರ ಬರೆದಿರುವುದರಿಂದ ವಿಚಾರಣೆ ಮುಂದುವರಿಸುವುದು ಉಚಿತವಲ್ಲ ಎಂಬುದಾಗಿ ಅಭಿಪ್ರಾಯಪಟ್ಟು, ವಿಚಾರಣೆಯನ್ನು ಬೇರೊಂದು ಪೀಠಕ್ಕೆ ವರ್ಗಾಯಿಸುವಂತೆ ಮುಖ್ಯ ನ್ಯಾಯಮೂರ್ತಿಯವರಿಗೆ ತಿಳಿಸುವುದಾಗಿ ತಮ್ಮ ಆದೇಶದಲ್ಲಿ ತಿಳಿಸಿ ಪ್ರಕರಣದಿಂದ ಹಿಂದೆ ಸರಿದಿದ್ದಾರೆ.
ವಿಚಾರಣೆ ವೇಳೆ ರಾಘವೇಶ್ವರ ಶ್ರೀಗಳ ಪರ ವಕೀಲ ವಾದ ಮಂಡಿಸಿ, ಈ ತರಹದ ವರ್ತನೆ ನ್ಯಾಯಾಂಗ ಕ್ಷೇತ್ರದ ಘನತೆಗೆ ಧಕ್ಕೆ ತರುವಂತಹದು. ಇಂತಹ ಸಂಗತಿಗಳನ್ನು ಹೀಗೆಯೇ ಮುಂದುವರಿಯಲು ಬಿಟ್ಟಲ್ಲಿ, ಈ ರೀತಿಯ ಪ್ರಕರಣಗಳು ಕ್ಯಾನ್ಸರ್‌ನಂತೆ ಹಬ್ಬುತ್ತವೆ. ಹೀಗಾಗಿ ನ್ಯಾಯಪೀಠವು ದೂರುದಾರರ ಮೇಲೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಬೇಕು ಎಂದು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಷ್ಟನೆ ನೀಡಿದ ನ್ಯಾ.ಕೆ.ಎನ್. ಫಣೀಂದ್ರ ಅವರು, ರಾಷ್ಟ್ರಪತಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ನ್ಯಾಯಪೀಠವೇನೂ ವಿಚಲಿತವಾಗಿಲ್ಲ. ಆದರೆ, ದೂರುದಾರರ ವರ್ತನೆ ಗಮನಿಸಿದಾಗ ನ್ಯಾಯಾಂಗದ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂಬಂಶ ಸ್ಪಷ್ಟವಾಗುತ್ತದೆ. ಹಾಗಾಗಿ ವಿಚಾರಣೆಯನ್ನು ಮುಂದುವರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು ಅರ್ಜಿ ವಿಚಾರಣೆ ಯನ್ನು ಮುಂದುವರಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.
ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಶ್ರೀಗಳು ಸಲ್ಲಿಸಿದ್ದ ಅರ್ಜಿಯ ಸಂಬಂಧ ಮೂರು ದಿನಗಳ ಕಾಲ ಎರಡು ವಾದ-ಪ್ರತಿವಾದ ಆಲಿಸಿದ್ದು, ನ್ಯಾಯಯುತವಾದ ತೀರ್ಪನ್ನು ಪ್ರಕಟಿಸಿದ್ದೇನೆ. ಆದರೂ ತಮ್ಮ ಆದೇಶದ ಬಗ್ಗೆ ಅಸಮಾಧಾನಗೊಂಡು ಪತ್ರ ಬರೆದಿರುವುದು ಸೂಕ್ತವಲ್ಲ ಎಂದು ತಿಳಿಸಿರುವ ನ್ಯಾಯಮೂರ್ತಿ ಅರ್ಜಿಯನ್ನು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
http://vbnewsonline.com