ಕರಾವಳಿ

ಕಲರ್‌ಫುಲ್ 100 ದಿನ ಪೂರೈಸಿದ ರಂಗ್ : ಒರಿಯರ್ದೊರಿ ಅಸಲ್ ಚಿತ್ರದ ನಂತರ ಬಾಕ್ಸ್ ಆಫೀಸ್ ಲೂಟಿ ಮಾಡಿದ ತುಳು ಚಿತ್ರ ರಂಗ್…

Pinterest LinkedIn Tumblr

Ranga_Film_100_1

ಮಂಗಳೂರು : ಕಟೀಲೇಶ್ವರಿ ಕಂಬೈನ್ ನಿರ್ಮಾಣದ ರಂಗ್ ತುಳು ಸಿನಿಮಾ ಯಶಸ್ವಿ 100 ದಿನಗಳನ್ನು ಪೂರೈಸಿದೆ.ಶತದಿನ ಪೂರೈಸಿದ ಈ ಸಿನಿಮಾ ಮಂಗಳೂರಿನ ಪ್ರಭಾತ್ ಥಿಯೇಟರ್‌ನಲ್ಲಿ ಇನ್ನೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.2014ರ ಆಗಸ್ಟ್ 8 ರಂದು ತೆರೆಕಂಡ ಈ ಚಿತ್ರ ಇದೇ ನವೆಂಬರ್ 15ರ ಶನಿವಾರದಂದು 100 ದಿನಗಳನ್ನು ಪೂರೈಸಿದೆ.ಅತಿ ಕಡಿಮೆ ಅವಧಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನ ವೀಕ್ಷಣೆ ಮಾಡಿದ ತುಳು ಸಿನಿಮಾ ಎಂಬ ಹೆಗ್ಗಳಿಕೆಯ ಜೊತೆಗೆ ಅಧಿಕ ಗಳಿಕೆಯ ಸಿನಿಮಾ, ಉಭಯ ಜಿಲ್ಲೆಯ ಸುಮಾರು 12 ಥೀಯೇಟರ್‌ಗಳಲ್ಲಿ ದಿನಕ್ಕೆ 84 ಪ್ರದರ್ಶನಗಳಂತೆ ಹಲವು ವಾರಗಳ ಕಾಲ ತೆರೆ ಕಂಡ ಮತ್ತು ಒಂದೇ ದಿನದಲ್ಲಿ 39 ಪ್ರದರ್ಶನ ಕಂಡ ತುಳು ಸಿನಿಮಾ ಎಂಬ ದಾಖಲೆಯನ್ನೂ ರಂಗ್ ಪಡೆದುಕೊಂಡಿದೆ.

ತುಳು ಚಿತ್ರರಂಗದ ಎನ್ನ ತಂಗಡಿ ಸಿನಿಮಾದಿಂದ ಈವರೆಗೆ ಸಾಕಷ್ಟು ಚಿತ್ರಗಳು ಯಶಸ್ವಿ ಪ್ರದರ್ಶನ ಕಂಡಿದ್ದರೂ ಕೆಲವೇ ಕೆಲವು ಚಿತ್ರಗಳು ಶತದಿನ ಪೂರೈಸಿದ್ದವು.  ವಿಶುಕುಮಾರ್ ಅವರ ಕೋಟಿಚೆನ್ನಯ್ಯ(ಕಪ್ಪುಬಿಳುಪು), ರಿಚರ್ಡ್ ಕ್ಯಾಸ್ಟಲಿನ್ ಅವರ ಬಂಗಾರ್ ಪಟ್ಲೇರ್ ಹಾಗೂ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ಅವರ ಒರಿಯರ್ದೊರಿ ಅಸಲ್ ಚಿತ್ರಗಳು ಶತದಿನಗಳನ್ನು ಪೂರೈಸಿದ್ದ ಸಿನಿಮಾಗಳಾಗಿದ್ದರೆ ಇದೀಗ ಆ ಸಾಲಿಗೆ ರಂಗ್ ಚಿತ್ರವೂ ಸೇರ್ಪಡೆಗೊಂಡಿದೆ.ಒರಿಯರ್ದೊರಿ ಅಸಲ್ ಚಿತ್ರವನ್ನು ಹೊರತುಪಡಿಸಿದರೆ 100 ದಿನಗಳಲ್ಲಿ ಅತ್ಯಧಿಕ ಗಳಿಕೆ ಮಾಡಿ ಬಾಕ್ಸ್ ಆಫೀಸ್ ಲೂಟಿ ಮಾಡಿದ ಮೊದಲ ತುಳು ಚಿತ್ರ ಅನ್ನುವ ಖ್ಯಾತಿಗೂ ರಂಗ್ ಸ್ಥಾನ ಪಡೆದಿದೆ.

Ranga_Film_100_2

ಈ ಯಶಸ್ಸಿನ ಹಾದಿ ಹಾಡುಗಳ ಧ್ವನಿ ಸುರುಳಿ ಬಿಡುಗಡೆಯ ದಿನದಿಂದಲೇ ಆರಂಭಗೊಂಡಿತ್ತು.“ಪ್ರೇಮನಾಥೆ ಪಾಸ್.. ಆತೆ…” ಎಂಬ ಹಾಡು ಮಕ್ಕಳು ಸೇರಿದಂತೆ ಹಿರಿಯರ ನಾಲಗೆಗಳಲ್ಲೂ ಕುಣಿದಾಡಿದ್ದು ಒಂದಾದರೆ ಬಾಲಿವುಡ್‌ನ ಕಾಮಿಡಿಕಿಂಗ್ ಜಾನಿಲಿವರ್ ಅದಕ್ಕೆ ಹೆಜ್ಜೆ ಹಾಕಿ ಸಿನಿಮಾದಲ್ಲಿ ಅಭಿನಯಿಸಿರುವುದು ಚಿತ್ರ ರಸಿಕರ ಕುತೂಹಲಕ್ಕೆ ಕಾರಣವಾಗಿತ್ತು.

ಮಣಿಕಾಂತ್ ಕದ್ರಿ ಸಂಗೀತವಿರುವ ಈ ಚಿತ್ರದ ೫ ಹಾಡುಗಳೂ ಒಂದರ ಮೇಲೊಂದರಂತೆ ಹಿಟ್ ಆಗಿರೋದು ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್. ಈಗಾಗಲೇ ಈ ಎಲ್ಲಾ ಹಾಡುಗಳು ಕಾಲೇಜು ಸೇರಿದಂತೆ ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲೂ ರಸಿಕರ ಫೇವರೇಟ್ ಹಾಡುಗಳಾಗಿ ಮಿಂಚುತ್ತಿದೆ. ಪಡ್ಡೆ ಹುಡುಗರ ಕೈಗೆ ಸಿಕ್ಕಿದ ಈ ಹಾಡುಗಳು ಡಿ.ಜೆ ಮಿಕ್ಷಿಂಗ್ ಆಗಿ ಮತ್ತೊಂದು ರೂಪ ಪಡೆದುಕೊಂಡು ಡ್ಯಾನ್ಸರ್‌ಗಳಿಗೆ ಉನ್ಮಾದ ತರಿಸಿದೆ.

Ranga_Film_100_3 Ranga_Film_100_4

ಪ್ರಮೀಳ ದೇವ್ ಅರ್ಪಿಸುವ ಈ ಚಿತ್ರದ ನಿರ್ಮಾಪಕರು ದೇವದಾಸ್‌ಕುಮಾರ್ ಪಾಂಡೇಶ್ವರ್ ಹಾಗೂ ಸುಖ್‌ಪಾಲ್ ಪೊಳಲಿ ಕಾರ್ಯಕಾರಿ ನಿರ್ಮಾಪಕರು .ನಾಯಕನಟ,ನಟಿ ಸೇರಿದಂತೆ ಹಲವಾರು ಉದಯೋನ್ಮುಖ ಸಿನಿಮಾ ಕಲಾವಿದರುಗಳಿಗೆ ನಟನಾ ಕಮ್ಮಟ ನಡೆಸಿ ನಟನೆಗೆ ಸಂಬಂದಪಟ್ಟ ಪ್ರಾಯೋಗಿಕ ತರಬೇತಿ, ಸಿನಿಮಾ ರಂಗಕ್ಕೆ ರಂಗ್ ತಂಡ ನೀಡಿದ ಮತ್ತೊಂದು ಕೊಡುಗೆ ಎಂದೇ ಪರಿಗಣಿಸಲಾಗುತ್ತಿದೆ.ಇದು ಈ ಚಿತ್ರದ ಯಶಸ್ಸಿಗೂ ಕಾರಣವಾಗಿತ್ತು.

ಕಥೆಗೆ ಪೂರಕವಾದ ಕೊರಿಯೋಗ್ರಾಫಿ,ಭಾಸ್ಕರ್ ನೆಲ್ಲಿತೀರ್ಥ ಮತ್ತು ಶಶಿರಾಜ ಕಾವೂರ್‌ರ ಸಿನಿಮಾದ ಕಥೆಗೆ ಪೂರಕವಾದ ಸಾಹಿತ್ಯಗಳು ಕಥೆ ಮತ್ತು ಸಂಗೀತವನ್ನೂ ಎತ್ತಿ ಹಿಡಿದಿತ್ತು.ಈ ಸಿನಿಮಾದ ಕಥೆ,ಚಿತ್ರಕಥೆ,ಸಂಭಾಷಣೆಯನ್ನು ಬರೆದಿರುವ ನಿರ್ದೇಶಕರುಗಳಾದ ಸುಹಾನ್ ಪ್ರಸಾದ್ ಮತ್ತು ವಿಸ್ಮಯ ವಿನಾಯಕ್ ಇವರ ಪ್ರಯತ್ನಗಳಿಗೆ ಇದೀಗ ಜನಮನ್ನಣೆ ಸಿಕ್ಕಿದಂತಾಗಿದೆ.

Ranga_Film_100_5 Ranga_Film_100_6

ಅರ್ಜುನ್ ಕಾಪಿಕಾಡ್ ನಾಯಕ ನಟರಾಗಿರುವ ರಂಗ್‌ನಲ್ಲಿ ತುಳುವರನ್ನು ನುಕ್ಕು ನಗಿಸುವ ಕಾಮಿಡಿ ಸ್ಟಾರ್‌ಗಳಾದ ದೇವ್‌ದಾಸ್ ಕಾಪಿಕಾಡ್,ನವೀನ್ ಡಿ ಪಡೀಲ್,ಭೋಜರಾಜ್ ವಾಮಂಜೂರು,ಸತೀಶ್‌ಬಂದಲೆ,ಅಶೋಕ್‌ಶೆಟ್ಟಿ ಅಂಬ್ಲಮೊಗರು,ವಿಸ್ಮಯವಿನಾಯಕ್ ಅವರ ಹಾಸ್ಯಭರಿತ ನಟನೆಗಳು ಚಿತ್ರರಸಿಕರನ್ನು ಹೊಟ್ಟೆ ಹುಣ್ಣಾಗುವಂತೆ ಮಾಡಿದೆ. ವೀರಮದಕರಿ ಖ್ಯಾತಿಯ ಮಂಗಳೂರಿನ ಗೋಪಿನಾಥ್ ಭಟ್ ಅವರ ಖಳನಾಯಕನ ಪಾತ್ರ ಸಂತೋಷ್ ಶೆಟ್ಟಿ,ಚಂದ್ರಹಾಸ್ ಉಳ್ಳಾಲ್,ಸುಧಾಕರ ಸಾಲ್ಯಾನ್ ಅವರನ್ನು ಒಳಗೊಂಡಂತೆ ಹಿರಿಯ ಕಲಾವಿದರಾದ ರೋಹಿಣಿಜಗರಾಂ,ಶ್ರೀನಿವಾಸ್ ಪುತ್ತಿಲ ಅವರುಗಳು ಕಾಣಿಸಿಕೊಂಡಿರುವ ರಂಗ್ ತುಳು ಸಿನಿಮಾ ಅಚ್ಚರಿಯ ದಾಖಲೆಗಳನ್ನು ಗಳಿಸಿ ನೂರು ದಿನ ಪೂರೈಸಿಕೊಂಡು ಮುನ್ನಡೆದಿದೆ.

Write A Comment