ಚಿಕ್ಕಮಗಳೂರು, ನ.15: ಮುಳ್ಳಯ್ಯನಗಿರಿ ಪರಿಸರದಲ್ಲಿ ಕಾಣಿಸಿಕೊಂಡ ನರಭಕ್ಷಕ ಗಂಡು ಹುಲಿಯೊಂದು ಕಾರ್ಮಿಕ ಮಹಿಳೆಯೋರ್ವಳನ್ನು ದಾಳಿ ನಡೆಸಿ, ಬಲಿ ತೆಗೆದುಕೊಂಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಹುಲಿ ದಾಳಿಗೆ ಬಲಿಯಾದ ಮಹಿಳೆಯನ್ನು ಸುಮಿತ್ರಾ(25) ಎಂದು ಗುರುತಿಸಲಾಗಿದೆ. ಈಕೆ ಶಂಕರೇಗೌಡ ಎಂಬವರ ಕಾಫಿ ತೋಟದಲ್ಲಿ ಎಂದಿನಂತೆ ಸಹ ಕೆಲಸಗಾರರೊಂದಿಗೆ ಕೂಲಿ ಕೆಲಸಕ್ಕೆ ತೆರಳಿದ್ದಾಗ ಹೊಂಚು ಹಾಕಿ ಕಾದಿದ್ದ ಹುಲಿ ದಾಳಿ ನಡೆಸಿದೆ. ತಕ್ಷಣ ಗಾಬರಿಗೊಂಡ ಜನರು ದಿಕ್ಕಾಪಾಲಾಗಿ ಓಡಿದರಾದರೂ ಸುಮಿತ್ರಾರ ಮೇಲೆ ದಾಳಿ ನಡೆಸಿದ ಹುಲಿ ಆಕೆಯ ಕುತ್ತಿಗೆಯ ಭಾಗವನ್ನು ಕಚ್ಚಿ ಗಾಯಗೊಳಿಸಿದೆ.
ಅಲ್ಲದೆ ಮಾಂಸವನ್ನು ತಿಂದಿದೆ.
ಹುಲಿಯ ದಾಳಿ ನಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಇತರ ಕಾರ್ಮಿಕರು ಮತ್ತು ಆಸುಪಾಸಿನ ಜನರು ಹುಲಿಯಿಂದ ಕಾರ್ಮಿಕ ಮಹಿಳೆಯನ್ನು ರಕ್ಷಿಸಲು ನಡೆಸಿದ ಪ್ರಯತ್ನ ಸಫಲವಾಗಲಿಲ್ಲ. ಮಹಿಳೆಯ ದೇಹವನ್ನು ಸುಮಾರು ಅರ್ಧ ಕಿಲೋ ಮೀಟರ್ ದೂರ ಎಳೆದೊಯ್ದಿರುವ ಹುಲಿ ಜನರ ಕಲ್ಲು ಎಸೆತ ಹಾಗೂ ಕಿರುಚಾಟಕ್ಕೆ ಭಯಗೊಂಡು ಶವವನ್ನು ಬಿಟ್ಟು ಓಡಿ ಕಾಡಿನಲ್ಲಿ ಮರೆಯಾಗಿದೆ. ಈ ಗಂಡು ಹುಲಿಗೆ ಹೆಚ್ಚಿನ ವಯಸ್ಸಾಗದಿದ್ದರೂ ನರ ಭಕ್ಷಣೆಗೆ ಮುಂದಾಗಿರುವುದು ಅರಣ್ಯ ಅಧಿಕಾರಿಗಳ ನಿದ್ದೆಗೆಡಿಸಿದೆ. ಸಾಮಾನ್ಯವಾಗಿ ಪ್ರಾಣಿಗಳ ಬೇಟೆಯಾಡಲು ಸಾಧ್ಯವಾಗದ ಹುಲಿಗಳು ನರ ಭಕ್ಷಣೆಗೆ ಮುಂದಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಮುಳ್ಳಯ್ಯನಗಿರಿ ಪರಿಸರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಗಂಡು ಹುಲಿ ಸುಮಾರು ನಾಲ್ಕು ವರ್ಷ ಪ್ರಾಯದ್ದಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಇದೇ ಹುಲಿ ಭೋಜೇಗೌಡ ಎಂಬವರ ಕಾಫಿ ತೋಟದಲ್ಲಿ ಕಾಣಿಸಿಕೊಂಡು ಭೀತಿ ಮೂಡಿಸಿತ್ತು. ಇದರಿಂದ ಶನಿವಾರ ಮತ್ತು ರವಿವಾರ ಮುಳ್ಳಯ್ಯನಗಿರಿ, ಬಾಬಾಬುಡಾನ್ ಗಿರಿಗಳಿಗೆ ಬರುವ ಭಕ್ತರು, ಪ್ರವಾಸಿಗರು ಮತ್ತು ಆಸುಪಾಸಿನ ಜನರಲ್ಲಿ ಭೀತಿ ಆವರಿಸಿದೆ. ಈ ಪರಿಸರವು ಭದ್ರಾ ಅಭಯಾರಣ್ಯ ವ್ಯಾಪ್ತಿಯ ಸಮೀಪದಲ್ಲಿದೆ. ಸುತ್ತಮುತ್ತಲ ತೋಟಗಳಲ್ಲಿ ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಕೂಲಿ ಕೆಲಸಕ್ಕೆ ತೋಟಗಳಿಗೆ ತೆರಳಲು ಭೀತಿಪಡುತ್ತಿದ್ದಾರೆ. ಈ ಕುರಿತು ಅರಣ್ಯಾಧಿಕಾರಿಗಳಿಗೆ ತಿಳಿದಿದ್ದರೂ ಈತನಕ ಯಾವುದೇ ಕ್ರಮ ಅನುಸರಿಸದಿರುವುದರಿಂದ ಮಹಿಳೆ ಜೀವ ಕಳೆದುಕೊಳ್ಳುವಂತಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ಮುಖಂಡರು, ಮೃತ ಮಹಿಳೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ನರಭಕ್ಷಕ ಹುಲಿಯ ಚಲನವಲನ ಗುರುತಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಘಟನೆಯ ಕುರಿತು ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.