ಕರ್ನಾಟಕ

ಅಸಂಘಟಿತ ಕಟ್ಟಡ ಕಾರ್ಮಿಕರ ನೋಂದಾವಣೆಯಾಗಲಿ: ನ್ಯಾ.ವೇಲಾ (Vaghela)

Pinterest LinkedIn Tumblr

J

ಬೆಂಗಳೂರು, ನ.16: ದೇಶದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಕಾನೂನುಗಳಿದ್ದರೂ ಅವುಗಳು ಕೇವಲ ಕಡತಗಳಲ್ಲಿ ಮಾತ್ರ ಕಾಯ್ದೆಗಳಾಗಿ ಉಳಿದಿವೆ ಎಂದು ಮುಖ್ಯನ್ಯಾಯಮೂರ್ತಿ ಡಿ.ಎಚ್.ವೇಲಾ ಹೇಳಿದ್ದಾರೆ.
ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕ್ರೆಡೈ ಮತ್ತು ಬಿಎಂಆರ್‌ಸಿಎಲ್ನ ಸಹಯೋಗದೊಂದಿಗೆ ರವಿವಾರ ವಿಕಾಸ ಸೌಧದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ 1966 ಮತ್ತು ಕರ್ನಾಟಕ ನಿಯಮಗಳು 2006 ರ ಸಮರ್ಪಕ ಅನುಷ್ಠಾನ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಟ್ಟಡ ಸೇರಿದಂತೆ ಎಲ್ಲ ರೀತಿಯ ಕಾರ್ಮಿಕರಿಗೆ ತಮ್ಮ ಅಭಿವೃದ್ಧಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯಿಲ್ಲ. ಈ ಬಗ್ಗೆ ಅವರಲ್ಲಿ ಅರಿವು ಮೂಡಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಬೇಕಾದ ಅಗತ್ಯವಿದೆ. ಸರಕಾರದ ಕಾನೂನುಗಳನ್ನು ಅನುಷ್ಠಾನ ಮಾಡಬೇಕಾದ ಅಗತ್ಯವಿದೆ ಎಂದು ವೇಲಾ ತಿಳಿಸಿದರು.
ಸರಕಾರದಿಂದ ನೀಡುವ ಎಲ್ಲ ಸವಲತ್ತುಗಳನ್ನು ಪಡೆಯುವುದು ನಮ್ಮ ಹಕ್ಕು ಎಂದು ಪ್ರತಿಯೊಬ್ಬ ಕಾರ್ಮಿಕನಿಗೂ ಅರಿವಿರಬೇಕು. ಈ ನಿಟ್ಟಿನಲ್ಲಿ ಸರಕಾರ ಹಾಗೂ ನ್ಯಾಯಾಂಗ ವ್ಯವಸ್ಥೆ ಕೈಜೋಡಿಸಿ ಕೆಲಸ ಮಾಡಬೇಕು. ಈ ಯೋಜನೆಗಳ ಸಮಗ್ರ ಅನುಷ್ಠಾನ ಮಾಡುವುದಕ್ಕಾಗಿ ರಾಜ್ಯದ ಪ್ರತಿ ಕಾರ್ಮಿಕನೂ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಭಾರತದ ಆರ್ಥಿಕತೆಗೆ ಶೇಕಡ 60 ಕ್ಕೂ ಹೆಚ್ಚು ಪ್ರಮಾ ಣದ ಕೊಡುಗೆ ನೀಡುವ ಅಸಂಘಟಿತ ವಲಯದ ಎಲ್ಲ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರನ್ನು ಗುರುತಿಸಿ ನೋಂದಾಯಿಸಬೇಕು.
ರಾಜ್ಯಾದ್ಯಂತ ಸುಮಾರು 10 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿದ್ದು, ಅವರೆಲ್ಲರನ್ನು ಗುರುತಿಸಿ, ನೋಂದಾಯಿಸಿ ಗುರುತಿನ ಚೀಟಿ ಹಾಗೂ ಬ್ಯಾಂಕ್ ಖಾತೆಗಳನ್ನು ತೆರೆಯುವ ಕೆಲಸವನ್ನು ಸರಕಾರ ಮಾಡಬೇಕಿದೆ. ಅಸಂಘಟಿತ ಕಾರ್ಮಿಕರಿಗೆ ಈ ಮೂಲಕ ವಿವಿಧ ಸವಲತ್ತುಗಳನ್ನು ವಿತರಿಸುವ ಮಹತ್ವದ ಕೆಲಸವಾಗಬೇಕಾಗಿದೆ ಎಂದು ವೇಲಾ ಹೇಳಿದರು. ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರವು ಸ್ಥಳೀಯ ಕಾರ್ಮಿಕರನ್ನು ಗುರುತಿಸುವ ಕಾರ್ಯವನ್ನು ಮಾಡಬೇಕಿದೆ. ಇದ್ಕಕಾಗಿ ಕಾಲೇಜು ವಿದ್ಯಾರ್ಥಿಗಳನ್ನು ಮತ್ತು ಸರಕಾರೇತರ ಸಂಸ್ಥೆಗಳ ಸಹಾಯವನ್ನು ಬಳಸಿಕೊಳ್ಳುವಂತೆ ಅವರು ತಿಳಿಸಿದರು.
ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, 2015 ರ ಮಾರ್ಚ್‌ನೊಳಗೆ ರಾಜ್ಯದಲ್ಲಿರುವ ಸುಮಾರು 10 ರಿಂದ 12 ಲಕ್ಷ ಕಾರ್ಮಿಕರನ್ನು ಗುರುತಿಸಿ ನೋಂದಣಿ ಮಾಡಿಸಿ ಸವಲತ್ತುಗಳನ್ನು ವಿತರಿಸುವ ಗುರಿ ಸರಕಾರಕ್ಕಿದೆ ಎಂದರು. ಈ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 4 ಲಕ್ಷಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರನ್ನು ನೋಂದಣಿ ಮಾಡಲಾಗಿದೆ. ಈ ಗುರಿಯನ್ನು ಸಾಧಿಸಲು ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ ಒಂದು ಕೋಟಿ ರೂ.ಗಳಷ್ಟು ಸೆಸ್ ಸಂಗ್ರಹವಾಗಿದ್ದು, ಈ ಮೊತ್ತದ ಶೇಕಡ 20ರಷ್ಟನ್ನು ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುವುದು ಎಂದು ಸಚಿವರು ತಿಳಿಸಿದರು. ಸರ್‌ಎಂವಿ ಹೆಸರಿನಲ್ಲಿ ಅಕಾಡಮಿ ಸ್ಥಾಪನೆ:   ಭಾರತದಲ್ಲಿ ಇರುವ ಏಕೈಕ ರಾಷ್ಟ್ರೀಯ ನಿರ್ಮಾಣ ಆಕಾಡಮಿ ಮಾದರಿಯಲ್ಲಿ ರಾಜ್ಯದಲ್ಲಿಯೂ 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಕಾಡಮಿಯನ್ನು ಸ್ಥಾಪಿಸಲು ದೊಡ್ಡಬಳ್ಳಾಪುರದ ಬಳಿ 20 ಎಕರೆ ಜಮೀನನ್ನು ಖರೀದಿಸಲಾಗಿದೆ. ಆಕಾಡಮಿಗೆ ಸರ್.ಎಂ. ವಿಶ್ವೇಶ್ವರಯ್ಯನವರ ಹೆಸರನ್ನು ಇಡಲಾಗುವುದು. ಆಕಾಡಮಿಯಲ್ಲಿ ಕಾರ್ಮಿಕರ ಕೌಶಲಾವೃದ್ಧಿ ತರಬೇತಿ, ಡಿಪ್ಲೊಮಾ ಕೋರ್ಸ್‌ಗಳು ಮುಂತಾದವುಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎನ್.ಕೆ. ಪಾಟೀಲ್, ಎ.ವಿ.ಚಂದ್ರಶೇಖರ್, ಕಾರ್ಮಿಕ ಆಯಕ್ತ ಹಾಗೂ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಡಿ. ಎಸ್. ವಿಶ್ವನಾಥ್, ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಅಶೋಕ್ ಜಿ.ನಿಜಗಣ್ಣನವರ್ ಹಾಜರಿದ್ದರು.

http://vbnewsonline.com

Write A Comment