ಕಾಸರಗೋಡು, ನ.19: ಸಂದರ್ಶಕ ವೀಸಾದಲ್ಲಿ ಸಿಂಗಾಪುರಕ್ಕೆ ತಲುಪಿದ್ದ ಕಾಸರಗೋಡಿನ ಮೂವರು ಯುವಕರು ಅಲ್ಲಿನ ಜೈಲಿನಲ್ಲಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ನಗರ ಹೊರವಲಯದ ಚೂರಿ ಬಟ್ಟಂಪ್ಪಾರೆಯ ಸಿ.ಎಸ್.ಶಿಹಾಬುದ್ದೀನ್(29), ಆರ್.ಡಿ.ನಗರದ ಎ.ಎಸ್.ಹಾಸಿಮ್(35) ಮತ್ತು ಮೊಗ್ರಾಲ್ ಪುತ್ತೂರಿನ ಎಂ.ಮುಹಮ್ಮದ್ ನವಾಝ್(34) ಸಿಂಗಾಪುರ ಜೈಲಿನಲ್ಲಿರುವ ಯುವಕರು.
2014ರ ಜೂನ್ ಒಂದರಂದು ಇವರು ಸಿಂಗಾಪುರಕ್ಕೆ ಹೊರಟಿದ್ದರು.ಕಾಸರಗೋಡು ನಿವಾಸಿಯಾಗಿರುವ ಉದ್ಯಮಿಯೋರ್ವರ ಮಳಿಗೆಯಲ್ಲಿ ಕೆಲಸ ನೀಡುವ ಭರವಸೆ ನೀಡಿ ಕರೆದೊಯ್ಯಲಾಗಿತ್ತು ಎನ್ನಲಾಗಿದೆ. ಜೂನ್ 2ರಂದು ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದಲ್ಲಿ ಅವರ ಲಗೇಜು ತಪಾಸಣೆ ನಡೆಸಿದಾಗ ನಕಲಿ ಕ್ರೆಡಿಟ್ ಕಾರ್ಡ್ ಪತ್ತೆಯಾಗಿದ್ದು, ಅವರು ಊರಿನಿಂದ ಹೊರಡುವ ಸಂದರ್ಭದಲ್ಲಿ ವೀಸಾ ನೀಡಿದ ವ್ಯಕ್ತಿಯು ಓರ್ವರಿಗೆ ತಲುಪಿಸಲು ನೀಡಿದ್ದ ಬ್ಯಾಗ್ನಲ್ಲಿ ಈ ನಕಲಿ ಕ್ರೆಡಿಟ್ ಕಾರ್ಡ್ಗಳಿದ್ದವು ಎಂದು ತಿಳಿದುಬಂದಿದೆ.
ವಿಮಾನ ನಿಲ್ದಾಣದ ಹೊರಗಡೆ ಬರಮಾಡಿಕೊಳ್ಳಲು ಬರುವ ವ್ಯಕ್ತಿಗೆ ಈ ಬ್ಯಾಗನ್ನು ನೀಡುವಂತೆ ಹೇಳಿದ್ದರು ಎನ್ನಲಾಗಿದೆ. ಆದರೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಮೂವರು ಸಿಕ್ಕಿಬಿದ್ದಿದ್ದು ಮಾಡದ ತಪ್ಪಿಗೆ ಜೈಲುಪಾಲಾಗಿದ್ದಾರೆ. ಕಳೆದ 4 ತಿಂಗಳಿನಿಂದ ಇವರ ಬಗ್ಗೆ ಯಾವುದೇ ಸುಳಿವು ಇಲ್ಲದಿದ್ದುದರಿಂದ ಸಂಬಂಧಿಕರು ವಿಚಾರಣೆ ನಡೆಸಿದಾಗ ಸಿಂಗಾಪುರದ ಜೈಲಿನಲ್ಲಿರುವುದು ತಿಳಿದು ಬಂದಿತು.
ಇವರಿಗೆ ವೀಸಾ ನೀಡಿದ ವ್ಯಕ್ತಿ ಗಲ್ಫ್ಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸುದ್ದಿ ತಿಳಿದು ಕುಟುಂಬಸ್ಥರು ಆತಂಕಗೊಂಡಿದ್ದು, ಅಮಾಯಕ ಯುವಕರನ್ನು ಕೂಡಲೇ ಬಿಡುಗಡೆಗೊಳಿಸಲು ಸರಕಾರ ಮುಂದಾಗುವಂತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.
ಇವರ ಬಿಡುಗಡೆಗೆ ಕೇರಳ ಮುಖ್ಯಮಂತ್ರಿ ಉಮ್ಮನ್ಚಾಂಡಿ, ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಕೇಂದ್ರ ಮತ್ತು ರಾಜ್ಯದ ಸಚಿವರು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.