_ಸತೀಶ್ ಕಾಪಿಕಾಡ್
_ನಿರೀಕ್ಷೆಗೂ ಮೀರಿದ ಯಶಸ್ಸಿನ ನಿರೀಕ್ಷೆಯಲ್ಲಿ ಮದಿಮೆ ಚಿತ್ರ ತಂಡ_
ಮಂಗಳೂರು; ಕರಾವಳಿಯಾದ್ಯಂತ ನಾಳೆ ಮದುವೆ ಸಂಭ್ರಮ… ತುಳುನಾಡಿನ ಜನರು ಕಾತರದಿಂದ ನಿರೀಕ್ಷಿಸುತ್ತಿದ್ದ ಮದಿಮೆ ತುಳು ಚಿತ್ರಕ್ಕೆ ಕೊನೆಗೂ ಮಹೂರ್ಥ ಕೂಡಿ ಬಂದಿದೆ. ಮಂಗಳೂರಿನ ಸುಚಿತ್ರ ಚಿತ್ರಮಂದಿರವಂತೂ ಬೃಹತ್ ಚಪ್ಪರ ಹಾಗೂ ಅಲಂಕಾರದಿಂದ ಕಂಗೊಳಿಸುತ್ತಿದೆ. ಈಗಾಗಲೇ 175 ದಿನಗಳ ಪ್ರದರ್ಶನಗಳ ಮೂಲಕ ಭರ್ಜರಿ ಯಶಸ್ಸು ಕಂಡಿರುವ “ಒರಿಯರ್ದೊರಿ ಅಸಲ್” ಚಿತ್ರದ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ ಚಿತ್ರವೆಂದರೆ ವಿಶೇಷ ನಿರೀಕ್ಷೆಯಿಟ್ಟಿರುವ ತುಳು ನಾಡಿನ ಜನತೆಗೆ “ಮದಿಮೆ” ಚಿತ್ರ ಮತ್ತೊಂದು ದಾಖಲೆ ನಿರ್ಮಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ‘ಮದಿಮೆ’ಯಲ್ಲಿ 5 ಹಾಡುಗಳಿವೆ. ‘ನೆಂಪಾಪುಂಡಾ ಆ ದಿನ’ ಹಾಡನ್ನು ಖ್ಯಾತ ಗಾಯಕ ಸೋನು ನಿಗಂ ಮತ್ತು ‘ಟಕ ಟಕ..’ ಹಾಡನ್ನು ಚಿತ್ರಾ ಹಾಡಿರುವುದು ವಿಶೇಷ. ಇವರಿಬ್ಬರು ಕೂಡ ತುಳುವಿನಲ್ಲಿ ಮೊದಲ ಬಾರಿಗೆ ಹಾಡಿದ ಹಾಡುಗಳು ಸೂಪರ್ ಹಿಟ್ ಆಗಿದ್ದು, ತುಳುನಾಡಿನ ಕಾಮಿಡಿ ಕಿಂಗ್ ಎಂದೇ ಪ್ರಸಿದ್ದರಾದ ಉಮೇಶ್ ಮಿಜಾರ್ ಹಾಗೂ ನವ್ಯ ಅವರ ಅಭಿನಯದ ‘ಇಷ್ಕ್ ಮೇರೆ ಫಿವರ್ವೆು ಚಡ್ಗಯಿ ಬಲಿಯಾ.. ದಾಲ ಬಲ್ಲಿಯಾ’ ಹಾಡು ಈಗಾಗಲೇ ಎಲ್ಲರ ಬಾಯಲ್ಲೂ ಗುನುಗುನಿಸುತ್ತಿದೆ.
‘ಒರಿಯರ್ದೊರಿ ಅಸಲ್’ನ ಯಶಸ್ವಿ ಜೋಡಿ ಲಿಖೀತ್ ಶೆಟ್ಟಿ ಮತ್ತು ರಮ್ಯಾ ಬಾರ್ನೆ ಅವರು ‘ಮದಿಮೆ’ ಮುಖ್ಯ ನೆಲೆಯಲ್ಲಿದ್ದಾರೆ. ಉಮೇಶ್ ಮಿಜಾರ್ಗೆ ಜೋಡಿಯಾಗಿ ನವ್ಯಾ ನಟಿಸಿದ್ದಾರೆ. ಉಷಾ ಭಂಡಾರಿ, ಭೋಜರಾಜ್ ವಾಮಂಜೂರು, ಸಂತೋಷ್ ಶೆಟ್ಟಿ, ಚೇತನ್ ರೈ ಮಾಣಿ, ರಾಘವೇಂದ್ರ ರೈ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರದ ಮುಖ್ಯ ತಾರಾಗಣದಲ್ಲಿರುವುದರಿಂದ ಚಿತ್ರಕ್ಕೆ ಮತ್ತಷ್ಟು ಮೆರುಗು ತಂದಿದೆ.
ನಾಳೆಯಿಂದ ತುಳುನಾಡಿನಲ್ಲಿ “ಮದಿಮೆ”ದ ಗೌಜಿ :
ಬಾಲಕೃಷ್ಣ ಫಿಲ್ಮ್ಸ್ ಬ್ಯಾನರ್ನಲ್ಲಿ ಮೇಗಿನ ಮಾಲಾಡಿ ಬಾಲಕೃಷ್ಣ ಶೆಟ್ಟಿ ನಿರ್ಮಾಣದ, ತುಳು ಚಿತ್ರರಂಗದಲ್ಲಿ ಬಹಳಷ್ಟು ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿದ ವಿಜಯ್ಕುಮಾರ್ ಕೊಡಿಯಾಲ್ಬೈಲ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಮದಿಮೆ’ ತುಳು ಸಿನೆಮಾ ನ.20ರಂದು ಗುರುವಾರ ಮಂಗಳೂರಿನಾದ್ಯಂತ ತೆರೆ ಕಾಣಲಿದೆ. ಮಂಗಳೂರಿನ ಸುಚಿತ್ರಾ ಹಾಗೂ ಬಿಗ್ಸಿನಿಮಾ,ಸಿನಿಪೊಲಿಸ್ ಮಲ್ಟಿಪ್ಲೆಕ್ಸ್ ಥೀಯೇಟರ್ನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದ್ದು, ಕೆಲವೇ ದಿನದಲ್ಲಿ ತುಳುನಾಡಿನ ಇತರ ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ವಿಜಯ್ಕುಮಾರ್ ಕೊಡಿಯಾಲ್ಬೈಲ್ ಅವರು ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿಜಯ್ಕುಮಾರ್ ಕೊಡಿಯಾಲ್ಬೈಲ್ ಅವರ ಕಥೆ-ಚಿತ್ರಕಥೆ-ಸಾಹಿತ್ಯ-ಸಂಭಾಷಣೆ ನಿರ್ದೇಶನದ ಈ ತುಳು ಸಿನಿಮಾದಲ್ಲಿ ಒರಿಯರ್ದೊರಿ ಅಸಲ್ನ ಜೋಡಿ ಲಿಖಿತ್ ಶೆಟ್ಟಿ ಹಾಗೂ ರಮ್ಯಾ ಬಾರ್ನ ನಾಯಕ-ನಾಯಕಿಯರಾಗಿ ಮತ್ತೊಮ್ಮೆ ತುಳು ತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.ಚೇತನ್ ರೈ ಮಾಣಿ, ಉಷಾ ಭಂಡಾರಿ, ಭೋಜರಾಜ್ ವಾಮಂಜೂರು, ಸಂತೋಷ್ ಶೆಟ್ಟಿ, ಉಮೇಶ್ ಮಿಜಾರ್, ನವ್ಯಾ ಪುತ್ತೂರು, ಸುನೀಲ್ ನೆಲ್ಲಿಗುಡ್ಡೆ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಮಂಜು ರೈ ಮೂಳೂರು, ನಿನಾಸಂನ ಪ್ರಶಾಂತ್ ಸಿದ್ದಿ, ರಾಘವೇಂದ್ರ ರೈ, ಚಿ.ರಮೇಶ್ ಕಲ್ಲಡ್ಕ, ದಯಾನಂದ ಕುಲಾಲ್ ಉರ್ವಾ, ರೋಹಿಣಿ ಜಗರಾಂ, ನಮಿತ ಅಳಪೆ, ವಿಟ್ಲ ಮಂಗೇಶ್ ಭಟ್, ಪ್ರಸನ್ನ ಶೆಟ್ಟಿ ಬೈಲೂರು, ಅರುಣ್ ಶೆಟ್ಟಿ ಮಂಗಳಾದೇವಿ, ಐಕಳ ಹರೀಶ್ ಶೆಟ್ಟಿ, ಬಂಟ್ವಾಳ ಜಯರಾಮ ಆಚಾರ್ಯ, ಯಾದವ ಮಣ್ಣಗುಡ್ಡೆ, ಹರೀಶ್ ಮೂಡಬಿದ್ರೆ, ವಿನ್ನಿ ಫೆರ್ನಾಂಡಿಸ್, ಬಾಲಚಂದ್ರ ಶೆಟ್ಟಿ ಅಡ್ಕ, ಬಾಬಾಪ್ರಸಾದ್, ಆನಂದ ಶೆಟ್ಟಿ ಅಶೋಕನಗರ, ರಾಂದಾಸ್ ಪ್ರಭು, ಮಂಜುಳಾ ಶೆಟ್ಟಿ,ಸಂದೀಪ್ ಉಡುಪಿ, ಸುರೇಶ್ ಬಾರಿತ್ತಾಯ.ಮುಂತಾದವರು ಅಭಿನಯಿಸಿದ್ದಾರೆ.
ಒರಿಯರ್ದೊರಿ ಅಸಲ್ನ ಖ್ಯಾತ ಸಂಗೀತ ನಿರ್ದೇಶಕ ಎ.ಕೆ.ವಿಜಯ್(ಕೋಕಿಲ) ಅವರ ಸಂಗಿತ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾದ ೫ ಹಾಡುಗಳು ಈಗಾಗಲೇ ಧ್ವನಿಸುರುಳಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.ಬಾಲಿವುಡ್ನ ಸೂಪರಸ್ಟಾರ್ ಸಿಂಗರ್ ಸೋನು ನಿಗಮ್ ಹಾಗೂ ಬಹುಭಾಷಾ ಗಾಯಕಿ ಪದ್ಮಶ್ರೀ ಕೆ.ಎಸ್ ಚಿತ್ರಾ ತುಳು ಭಾಷೆಯಲ್ಲಿ ಪ್ರಥಮವಾಗಿ ಎರಡು ಹಾಡುಗಳನ್ನು ಹಾಡಿದ್ದು ತುಳು ಸಂಗೀತ ಪ್ರೇಮಿಗಳ ಮನವನ್ನು ಈಗಾಗಲೇ ಗೆದ್ದಿದೆ.ಉಳಿದ ಹಾಡುಗಳನ್ನು ಖ್ಯಾತ ಗಾಯಕರಾದ ರವೀಂದ್ರ ಪ್ರಭು, ಶಮಿತಾ ಮಲ್ನಾಡ್, ಅಕಾಂಕ್ಷ ಬಾದಾಮಿ, ವಿನೋದ್ ರಾಜ್, ವಿಶಾಲ್ ರಾಜ್(ಕೋಕಿಲಾ)ಹಾಡಿದ್ದಾರೆ.ಚಿತ್ರದ ಎಲ್ಲಾ ಹಾಡುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಪ್ರಶಂಸೆಯ ಸುರಿಮಳೆ ಬಂದಿದೆ ಎಂದು ವಿಜಯ ಕುಮಾರ್ ವಿವರಿಸಿದರು.
ಸುಜಾತ ಬಾಲಕೃಷ್ಣ ಶೆಟ್ಟಿ ಅರ್ಪಿಸುವ ಈ ಚಿತ್ರದ ನಿರ್ಮಾಪಕರು ಮೇಗಿನ ಮಾಲಾಡಿ ಬಾಲಕೃಷ್ಣ ಶೆಟ್ಟಿ. ಈ ಚಿತ್ರಕ್ಕೆ ಪಿ.ಗುರುಪ್ರಶಾಂತ್ ರೈ ಛಾಯಾಗ್ರಹಣವಿದ್ದು ಸಂಕಲನ ಪಿ.ಶ್ರೀನಿವಾಸ್ ಬಾಬು ಅವರದ್ದಿದೆ. ಮದನ್-ಹರಿಣಿ ಈ ಚಿತ್ರದ ಎಲ್ಲಾ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.ಹಿನ್ನಲೆ ಸಂಗೀತ ಸತೀಶ್ ಬಾಬು.ಕಲೆ ತಮ್ಮ ಲಕ್ಷ್ಮಣ.ಸಹನಿರ್ದೇಶನ ಎಂ.ಕೆ.ಮಠ ಉಪ್ಪಿನಂಗಡಿ ಹಾಗೂ ತ್ರಿಶೂಲ್ ಶೆಟ್ಟಿ ಅವರದ್ದು, ಸಹಾಯಕ ನಿರ್ದೇಶನ ಅಶೋಕ್ ಎಸ್.ಎಲ್.ಪತ್ರಿಕಾ ಪ್ರಚಾರ-ಜಗನ್ನಾಥ್ ಶೆಟ್ಟಿ ಬಾಳ ಹಾಗೂ ವಿಜಯ್ಕುಮಾರ್ ಬೆಂಗಳೂರು.ಪ್ರಚಾರ ಕಲೆ ದೇವಿ. ಚಂದ್ರಕುಮಾರ್ ಕೊಡಿಯಾಲ್ಬೈಲ್ ಹಾಗೂ ಸುಖ್ಪಾಲ್ ಪೊಳಲಿ ಕಚೇರಿ ಮೇಲ್ವೀಚಾರಣೆಯನ್ನು ಹೊಂದಿದ್ದಾರೆ ಎಂದರು.
ನಿರ್ಮಾಪಕ ಮೇಗಿನ ಮಾಲಾಡಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಅವರ ಅತ್ಯಂತ ಯಶಸ್ಸು ಕಂಡ ನಾಟಕ ‘ಮದಿಮೆ’ಯ ಕೆಲವು ಉತ್ತಮ ಅಂಶಗಳನ್ನು ಉಳಿಸಿಕೊಂಡು, ಅದಕ್ಕೆ ಮತ್ತಷ್ಟು ಪೂರಕ ಮತ್ತು ಅಗತ್ಯ ವಿಷಯಗಳನ್ನು ಸೇರಿಸಿಕೊಂಡು ಈ ಚಿತ್ರವನ್ನು ತಯಾರಿಸಲಾಗಿದ್ದು, ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಚಿತ್ರದ ಸಂಗೀತ ನಿರ್ದೇಶಕ ಎ. ಕೆ. ವಿಜಯ್ ಹಾಗೂ ನಟ ಸಂತೋಷ್ ಶೆಟ್ಟಿ ಚಿತ್ರದ ಬಗ್ಗೆ ಪೂರಕ ಮಾಹಿತಿಗಳನ್ನು ನೀಡಿದರು.