ಕರ್ನಾಟಕ

ಮೂಢನಂಬಿಕೆಗಳ ನಿಷೇಧ ಕಾಯ್ದೆ ಜಾರಿ ಬೇಡಿಕೆ ಈಡೇರಿಕೆಗೆ ಸಿಎಂ ಭರವಸೆ : ಮಠಾಧೀಶರ ಸತ್ಯಾಗ್ರಹ ಅಂತ್ಯ

Pinterest LinkedIn Tumblr

Mathadeesharu

ಬೆಂಗಳೂರು,ನ.19: ಮೂಢನಂಬಿಕೆಗಳ ನಿಷೇಧ ಕಾಯ್ದೆ ಜಾರಿ ಸೇರಿದಂತೆ ನಮ್ಮ ವಿವಿಧ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವ ಹಿನ್ನೆಲೆಯಲ್ಲಿ ನಾವು ನಡೆಸುತ್ತಿರುವ ಮುಷ್ಕರವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ನಿಡುಮಾಮಿಡಿ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ತಿಳಿಸಿದ್ದಾರೆ.

ಇಂದು ವಿವಿಧ ಮಠಾಧೀಶರ ನಿಯೋಗದೊಂದಿಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಚರ್ಚಿಸಿದ ನಂತರ ನಿಡುಮಾಮಿಡಿ ಶ್ರೀಗಳು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಮೂಢನಂಬಿಕೆಗಳ ನಿಷೇಧ ಕಾನೂನು ಜಾರಿಗೆ ಬರಬೇಕು, ಸಾಮಾಜಿಕ ಸಮಾನತೆ ಕಾರ್ಯಕ್ರಮ ಜಾರಿಯಾಗಬೇಕು ಎಂಬ ಬೇಡಿಕೆಗಳೂ ಸೇರಿದಂತೆ ೧೩ ಬೇಡಿಕೆಗಳನ್ನು ನಾವು ಸರ್ಕಾರದ ಮುಂದಿಟ್ಟಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಕಾನೂನಿನ ವ್ಯಾಪ್ತಿಯಲ್ಲಿ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಸಾಧ್ಯವಿರುವಷ್ಟು ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿರುವುದಾಗಿ ಸ್ವಾಮೀಜಿ ಹೇಳಿದ್ದಾರೆ.

ನಮ್ಮ ಮನವಿಗೆ ಮುಖ್ಯಮಂತ್ರಿಯವರು ಸ್ಪಂದಿಸಿರುವುದು ನಮಗೆ ಸಂತಸ ತಂದಿದೆ. ಇದಾದ ನಂತರ ಸರ್ಕಾರದ ಪ್ರತಿನಿಧಿಯೊಬ್ಬರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸರ್ಕಾರದ ನಿಲುವಿನ ಬಗ್ಗೆ ಘೋಷಿಸಲಿದ್ದಾರೆ. ಅವರು ಬಹಿರಂಗವಾಗಿ ಈ ಬಗ್ಗೆ ಮಾಹಿತಿ ನೀಡಿದ ನಂತರ ನಾವು ಮುಷ್ಕರ ಹಿಂದಕ್ಕೆ ಪಡೆಯಲಿದ್ದೇವೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ನಿಯೋಗದಲ್ಲಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಕೋಡಿ ಮಠದ ಶ್ರೀಗಳು, ಲಂಬಾಣಿ ಮಠದ ಶ್ರೀ ಸೇವಾಲಾಲ್ ಸ್ವಾಮೀಜಿ ಮತ್ತಿತರರು ಇದ್ದರು. ಮೂಢನಂಬಿಕೆಗಳ ನಿಷೇಧ, ಹೆಣ್ಣುಭ್ರೂಣ ಹತ್ಯೆ ತಡೆ, ದೇವದಾಸಿ ಪದ್ಧತಿ ನಿಷೇಧ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ, ಗುತ್ತಿಗೆ ಪೌರಕಾರ್ಮಿಕರ ಪದ್ಧತಿ ರದ್ದು, ಗೊಲ್ಲರಹಟ್ಟಿ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಬೇಡಿಕೆ ಗಳನ್ನು ಸರ್ಕಾರದ ಮುಂದಿಟ್ಟುಕೊಂಡು ವಿವಿಧ ಮಠಾಧೀಶರು ಕಳೆದ ಮೂರು ದಿನಗಳಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ನಿಡುಮಾಮಿಡಿ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ, ಯಡಿಯೂರು ಶ್ರೀ ತೋಂಟದಾರ್ಯ ಸ್ವಾಮೀಜಿ, ಕಲ್ಬುರ್ಗಿಯ ಶರಣ ಬಸವ ಸ್ವಾಮೀಜಿ, ಉಕ್ಕೇರಿಯ ಪಂಚಮ ಶಿವಲಿಂಗ ಸ್ವಾಮೀಜಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಮುಖ್ಯಮಂತ್ರಿಯಾಗಲಿ, ಸರ್ಕಾರದ ಪ್ರತಿನಿಧಿಯಾಗಲಿ ಯಾರಾದರೊಬ್ಬರು ಪ್ರತಿಭಟನಾ ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಕೆ ಬಗ್ಗೆ ಭರವಸೆ ನೀಡಿದರೆ ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಸ್ವಾಮೀಜಿಗಳ ಒಕ್ಕೂಟ ನಿನ್ನೆ ಹೇಳಿತ್ತು.

Write A Comment