ಮಂಗಳೂರು,ನ.19 : ಮಡೆಸ್ನಾನ ಸೇರಿದಂತೆ ಮೂಢ ನಂಬಿಕೆ ನಿಷೇಧ ಕಾನೂನು ಜಾರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮೌಖಿಕ ಒಪ್ಪಿಗೆ ನೀಡುತ್ತಿದ್ದಂತೆ. ಇದರ ಬೆನ್ನಲ್ಲೇ ಮಡೆಸ್ನಾನಕ್ಕೆ ಹೈಕೋರ್ಟ್ ಬುಧವಾರ ಗ್ರೀನ್ ಸಿಗ್ನಲ್ ನೀಡಿದೆ. ಪವಿತ್ರ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಚಾಲ್ತಿಯಲ್ಲಿರುವ ನಿರ್ದಿಷ್ಟ ಸಮುದಾಯದ ಜನ ಉಂಡುಬಿಟ್ಟ ಎಂಜಲೆಲೆಯ ಮೇಲೆ ಭಕ್ತಾದಿಗಳು ನಡೆಸುವ ಉರುಳು ಸೇವೆ (ಮಡೆ ಮಡೆಸ್ನಾನ) ಪದ್ದತಿಯನ್ನು ನಿಲ್ಲಿಸಬೇಕೆಂದು ರಾಜ್ಯ ಉಚ್ಚ ನ್ಯಾಯಾಲಯ ನೀಡಿದ್ದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿತ್ತು. ಅದರೆ, ಹೈಕೋರ್ಟ್ ವಿಭಾಗೀಯ ಪೀಠ ಮಡೆ ಮಡೆಸ್ನಾನಕ್ಕೆ ಇರುವ ತಡೆಯನ್ನು ತೆರವುಗೊಳಿಸಿದೆ
ಹೈಕೋರ್ಟ್ ನಿಂದ ಪರಿಷ್ಕೃತ ಆದೇಶ ಹೊರಬಂದಿರುವುದರಿಂದ ನ.25 ರಿಂದ 29 ರ ತನಕ ಮಡೆಸ್ನಾನ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲಿ ನಡೆಸಬಹುದಾಗಿದೆ. ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಹರಕೆ ರೂಪದಲ್ಲಿ ಉರುಳುವ ಮಡೆ ಮಡೆಸ್ನಾನ ‘ಅನಿಷ್ಠ’ ಪದ್ದತಿಯನ್ನು ಕೂಡಲೇ ನಿಷೇಧಿಸಬೇಕೆಂದು ನಿಡುಮಾಮಿಡಿ ಶ್ರೀ, ದೊರೆಸ್ವಾಮಿ ಅಯ್ಯಂಗಾರ್, ಪ್ರೊ. ಗೋವಿಂದ ರಾವ್, ಮರುಳುಸಿದ್ದಪ್ಪ, ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ಹನ್ನೊಂದು ಮಂದಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಮಡೆಸ್ನಾನ ಪದ್ದತಿ ಸುಮಾರು 400 ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದು ಕುಕ್ಕೇ ಅಥವಾ ಉಡುಪಿ ದೇವಾಲಯದ ಸೇವಾಪಟ್ಟಿಯಲ್ಲಿರದ ಸೇವೆ. ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರೂ ಈ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ