ಬೆಂಗಳೂರು: ಹೊಸ ಆಕರ್ಷಣೆಗಳೊಂದಿಗೆ ಚಲನಚಿತ್ರ ಅಕಾಡೆಮಿ ಮತ್ತು ಕರ್ನಾಟಕ ಸರ್ಕಾರದ ಸಹ ಆಯೋಜನೆಯಲ್ಲಿ ೭ನೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಡಿಸೆಂಬರ್ ನಾಲ್ಕರಿಂದ ಪ್ರಾರಂಭವಾಗಲಿದೆ. ೪೪ ದೇಶಗಳ ಸುಮಾರು ೧೭೦ ಚಲಚಿತ್ರಗಳು ೧೧ ಪರದೆಗಳಲ್ಲಿ ಪ್ರದರ್ಶನಗೊಳ್ಳಲಿವೆ.
ಲೈಂಗಿಕ ಹಿಂಸೆ: ಸಿನಿಮೋತ್ಸವದ ವಿಶೇಷ ವಸ್ತು
೧೭ ವಿಭಾಗಳಲ್ಲಿ ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿದು, ದೇಶದೆಲ್ಲೆಡೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ, ‘ಲೈಂಗಿಕ ಹಿಂಸೆ’ ಎಂಬ ವಿಶೇಷ ವಸ್ತುವಿನಡಿ ವಿವಿಧ ದೇಶಗಳ ಆರು ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದು ಈ ಸಿನಿಮೋತ್ಸವದ ವಿಶೇಷ. ಆಬ್ಲಿವಿಯನ್, ಮಿಶನ್ ರೇಪ್, ಸ್ಟೋನಿಂಗ್ ಆಫ್ ಸೊರಯ, ದ ಪೆಟರ್ನಲ್ ಹೌಸ್, ಒಸಾಮಾ, ಮತ್ತು ಮೆಗ್ಡಾಲ್ನೆ ಸಿಸ್ಟರ್ಸ್ ಈ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿರುವ ಸಿನೆಮಾಗಳು.
ಮೂರು ವಿಭಾಗಗಳಲ್ಲಿ ಸ್ಪರ್ಧೆ
ಈ ಬಾರಿ ಏಶಿಯಾ, ಭಾರತೀಯ ಮತ್ತು ಕನ್ನಡ ಚಲನಚಿತ್ರಗಳು ಎಂಬ ಮೂರು ವಿಭಾಗಗಳಲ್ಲಿ ಚಲನಚಿತ್ರಗಳ ಮಧ್ಯೆ ಸ್ಪರ್ಧೆ ಇದ್ದು, ಮೂರೂ ವಿಭಾಗಗಳಲ್ಲಿ ಉತ್ತಮ ಚಿತ್ರಕ್ಕೆ ನಗದು ಬಹುಮಾನ ಕೊಡಲಾಗುತ್ತದೆ. ಭಾರತೀಯ ಭಾಷೆಗಳಿಂದ ಸುಮಾರು ೧೨ ಸಿನೆಮಾಗಳು ಆಯ್ಕೆಯಾಗಿದ್ದು, ೯ ಕನ್ನಡ ಸಿನೆಮಾಗಳು ಕೂಡ ಪ್ರದರ್ಶನ ಕಾಣಲಿವೆ.
ಕರ್ನಾಟಕದ ಭಾಷಾ ವೈವಿದ್ಯವನ್ನು ಗೌರವಿಸುವ ದೃಷ್ಟಿಯಿಂದ ಒಂದು ತುಳು ಸಿನೆಮಾ ಕೂಡ ಪ್ರದರ್ಶನಗೊಳ್ಳಲಿದೆ.
ಯು ಆರ್ ಎಗೆ ವಿಶೇಷ ಗೌರವ
ಇತ್ತೀಚೆಗಷ್ಟೇ ಅಗಲಿದ ಕರ್ನಾಟಕದ ಖ್ಯಾತ ಸಾಹಿತಿ ಯು ಆರ್ ಅನಂತಮೂರ್ತಿ ಅವರ ನೆನಪಿನಲ್ಲಿ ಅವರ ಕಥೆಗಳಿಂದ ಸ್ಪೂರ್ತಿ ಪಡೆದ ೫ ಸಿನೆಮಾಗಳು ಪ್ರದರ್ಶನ ಕಾಣಲಿವೆ. ಅಲ್ಲದೆ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಯು ಆರ್ ಎ ಮೇಲೆ ಮಾಡಿರುವ ಸಾಕ್ಷ್ಯಚಿತ್ರ ಕೂಡ ಪ್ರದರ್ಶನಗೊಳ್ಳಲಿದೆ.
ಅಲ್ಲದೆ ಇತ್ತೆಚೆಗಷ್ಟೆ ಅಗಲಿದ ಸಿನೆಮಾ ದಂತಕಥೆಗಳಾದ ವಿ ಕೆ ಮೂರ್ತಿ, ಬಾಲು ಮಹೇಂದ್ರ, ಸಿ ಆರ್ ಸಿಂಹ ಅವರ ನೆನಪಿನಲ್ಲೂ ಸಿನೆಮಾಗಳು ಪ್ರದರ್ಶನ ಕಾಣಲಿವೆ.
ಪೋಲೆಂಡ್ ನಿರ್ದೇಶಕ ಕ್ರಿಸ್ಟಾಫ್ ಜಾನುಸ್ಸಿ ಅವರಿಗೆ ವಿಶೇಷ ಗೌರವ
ಭಾರತದ ಮೇಲೆ ವಿಶೇಷ ಪ್ರೀತಿ ಇಟ್ಟುಕೊಂಡಿರುವ ಪೋಲಿಶ್ ನಿರ್ದೇಶಕ ಕ್ರಿಷ್ಟಾಪ್ಹ್ ಜಾನುಸ್ಸಿ ಅವರು ಈ ಚಿತ್ರೋತ್ಸವಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಈ ಚಲಚಿತ್ರೋತ್ಸವದ ನಿರ್ದೇಶಕ ವಿದ್ಯಾಶಂಕರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇವರ ೭ ಸಿನೆಮಾಗಳ ಪ್ರದರ್ಶನವಿದ್ದು, ಇವರ ಜೊತೆ ಸಂವಾದ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ.
ಡೆಸಿಂಬರ್ ೪ ರಿಂದ ೧೧ ರವರೆಗೆ ನಡೆಯಲಿರುವ ಈ ಚಲನಚಿತ್ರೋತ್ಸವದಲ್ಲಿ ಚರ್ಚೆ, ಛಾಯಾಗ್ರಹಣ ಕಾರ್ಯಗಾರ, ಚಲನಚಿತ್ರ ಸಂಗೀತದ ಮೇಲೆ ಕಾರ್ಯಗಾರ ಮುಂತಾದ ವಿಶೇಷ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.