ಬೆಂಗಳೂರು: ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ, ಬಿಬಿಎಂಪಿ ಗಿರಿನಗರ ವಾರ್ಡ್ BJP ಸದಸ್ಯೆ ಎಚ್.ಎಸ್.ಲಲಿತಾ ಗುರುವಾರ ನಿಧನರಾಗಿದ್ದಾರೆ.
ಲಲಿತಾ ಅವರು ಕ್ಲೆಪ್ಟೋಮೆನಿಯಾ ಎಂಬ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈ ಹಿಂದೆ ಮಾನಸಿಕ ವ್ಯಾದಿಯಿಂದಾಗಿ ಅವರು ಕಳ್ಳತನ ಮಾಡಿದ್ದರು ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿತ್ತು. ಆದರೆ ಕಳ್ಳತನ ಆರೋಪ ರಾಜ್ಯದಲ್ಲೆಡೆ ಸುದ್ದಿಯಾಗಿ ಅವಮಾನಕ್ಕೆ ಒಳಗಾಗಿದ್ದರು. ಬಳಿಕ ಲಲಿತಾ ಅವರು ಹಲವು ದಿನಗಳಿಂದ ಮನೆಯವರ ಕಣ್ಣು ತಪ್ಪಿಸಿ ಮಾತ್ರೆಗಳನ್ನು ಸೇವಿಸುತ್ತಿದ್ದರು, ಇದರ ಪರಿಣಾಮವಾಗಿ ನ.18 ರಂದು ತೀವ್ರವಾಗಿ ಅಸ್ವಸ್ಥಗೊಂಡ ಲಲಿತಾ ಅವರನ್ನು ಬನ್ನೇರುಘಟ್ಟ ರಸ್ತೆಯ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದ್ದಾರೆ.
ಏ.22ರಂದು ಗ್ರಾಹಕರಂತೆ ಗಾಂಧಿನಗರ ಸುಖ ಸಾಗರ್ ಮಾಲ್‌ನಲ್ಲಿರುವ ಅಶೋಕ ಅಪರೆಲ್ಸ್‌ಗೆ ಬಂದಿದ್ದ ಲಲಿತಾ ಅವರು ಡ್ರೆಸ್ ಕಳ್ಳತನ ಮಾಡಿದ್ದರು. ಇದನ್ನು ಗಮನಿಸಿದ ಮಳಿಗೆ ಮಾಲೀಕರು ಉಪ್ಪಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಲಲಿತಾ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದರು. ಐಪಿಸಿ ಕಲಂ 380(ಕಳ್ಳತನ) ಅನ್ವಯ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳುಹಿಸಿದ್ದರು. ಬಳಿಕ ಲಲಿತಾಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.