ಬೆಂಗಳೂರು,ನ.20 : ಎಪ್ಪತ್ತು, ಎಂಬತ್ತರ ದಶಕದಲ್ಲಿ ಬಲು ಬೇಡಿಕೆಯ ತಾರೆ ಎನ್ನಿಸಿಕೊಂಡಿದ್ದ, ತಮ್ಮ ಐಟಂ ಡಾನ್ಸ್ ಗಳ ಮೂಲಕ ಚಿತ್ರರಸಿಕರ ಮನಸೂರೆಗೊಂಡಿದ್ದ ನಟಿ ಡಿಸ್ಕೋ ಶಾಂತಿ. ಇದೀಗ ಅವರು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಕೃತ್ತಿನ ತೊಂದರೆಯಿಂದ ಬಳಲುತ್ತಿರುವ ಅವರು ಸಿಂಗಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಕೃತ್ತಿನ ಕಸಿ ಚಿಕಿತ್ಸೆಗಾಗಿ ಅವರು ಸಿಂಗಪುರದ ಆಸ್ಪತ್ರೆ ದಾಖಲಾಗಿದ್ದಾರೆ ಎಂಬುದು ಸದ್ಯದ ಮಾಹಿತಿ. ಯಾವ ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರ ಸದ್ಯದ ಪರಿಸ್ಥಿತಿ ಏನು ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕು
ತೆಲುಗು ರಿಯಲ್ ಸ್ಟಾರ್ ಶ್ರೀಹರಿ (ಡಿಸ್ಕೋ ಶಾಂತಿ ಪತಿ) ಅವರನ್ನು ಕಳೆದುಕೊಂಡ ಬಳಿಕ ಡಿಸ್ಕೋ ಶಾಂತಿ ಅವರು ಮಾನಸಿಕವಾಗಿ ಜರ್ಜರಿತರಾಗಿದ್ದರು. ದಿನೇ ದಿನೇ ಅವರ ಆರೋಗ್ಯ ಪರಿಸ್ಥಿತಿಯೂ ಹದಗೆಡುತ್ತಾ ಬಂದು ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ ಎನ್ನುತ್ತವೆ ಮೂಲಗಳು. ಡಿಸ್ಕೋ ಶಾಂತಿ ಅವರಿಗೆ ಒಬ್ಬ ಮಗಳು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಕನ್ನಡದ ಎಸ್ ಪಿ ಸಾಂಗ್ಲಿಯಾನ, ಇದು ಸಾಧ್ಯ, ಅಶ್ವಮೇಧ ಚಿತ್ರಗಳಲ್ಲಿ ಡಿಸ್ಕೋ ಶಾಂತಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲೂ ಡಿಸ್ಕೋ ಶಾಂತಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದವರು.
ಆರಂಭದಲ್ಲಿ ತಮಿಳು ಚಿತ್ರಗಳಲ್ಲಿ ನಾಯಕಿಯಾಗಿ ಎಂಟ್ರಿ ಕೊಟ್ಟ ಡಿಸ್ಕೋ ಶಾಂತಿ ಬಳಿಕ ಐಟಂ ಪಾತ್ರಗಳಿಗೆ ಸೀಮಿತರಾದರು. ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಅಭಿನಯಿಸಿರುವ ಡಿಸ್ಕೋ ಶಾಂತಿ ಸರಿಸುಮಾರು ನಾಲ್ಕು ಡಜನ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸೋಣ.