ಕುಂದಾಪುರ : ಕುಂದಾಪುರ ಎಂದೊಡನೆ ಮೊದಲು ನೆನಪಿಗೆ ಬರುವುದು ಊರಿನ ಅಧಿದೇವತೆ ಶ್ರೀ ಕುಂದೇಶ್ವರ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಶ್ರೀ ಕುಂದೇಶ್ವರ ಸಹಸ್ರ- ಸಹಸ್ರ ಭಕ್ತಾಧಿಗಳ ಹೃದಯದಲ್ಲಿ ನೆಲೆ ನಿಂತಿದ್ದಾನೆ. ತಲೆ – ತಲಾಂತರಗಳಿಂದ ಬಂದ ಅಭಿಪ್ರಾಯದಂತೆ ಕುಂದೇಶ್ವರನಿಂದಾಗಿ ಈ ಊರು ಕುಂದಾಪುರ ಎಂದು ಹೆಸರು ಪಡೆಯಿತು. ಜನರನ್ನು ಕಾಯುವ ಶ್ರೀ ಕುಂದೇಶ್ವರನಿಗೀಗ ದೀಪೋತ್ಸವ ಸಂಭ್ರಮ.
ಹೌದು ಇಂದು,(ಶುಕ್ರವಾರ) ಕುಂದಾಪುರ ಶ್ರೀ ಕುಂದೇಶ್ವರ ದೇವಳದಲ್ಲಿ ಸಂಭ್ರಮದ ದೀಪೋತ್ಸವ ಹಾಗೂ ಕಟ್ಟೆಪೂಜೆ. ಇದಕ್ಕಾಗಿ ಕುಂದಾಪುರದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ದೇವಳವೂ ಕೂಡ ಧಾರ್ಮಿಕ ಹಾಗೂ ಸಕಲ ಕಾರ್ಯಕ್ರಮಗಳಿಗೆ ಸಿದ್ಥತೆ ನಡೆಸಿದೆ. ಕುಂದಾಪುರ ಪೇಟೆಯಲ್ಲಿ ಈಗಾಗಲೇ ವಾಣಿಜ್ಯ ಮಳಿಗೆಗಳು ಸಿದ್ದವಾಗಿ ಜನರನ್ನು ಕೈಬೀಸಿ ಕರೆಯುತ್ತಿದೆ.
ದೇವಳದ ಇತಿಹಾಸ: ಇತಿಹಾಸಗಳ ಪ್ರಕಾರ ಕುಂದಾಪುರವನ್ನು ಕುಂದವರ್ಮನೆಂಬ ರಾಜ ಆಳಿದ್ದು ಆತನು ಅಪಾರ ಶಿವಭಕ್ತನಾಗಿದ್ದನಂತೆ. ಈತ ತನ್ನ ಆಳ್ವಿಕೆಯ ಅವಧಿಯಲ್ಲಿ ಕುಂದಾಪುರದಲ್ಲಿ ಶಿವದೇವಸ್ಥಾನ ನಿರ್ಮಿಸಿದ್ದು ಅದು ಕುಂದೇಶ್ವರ ಆಗಿದೆ ಎನ್ನಲಾಗುತ್ತದೆ. ತನ್ನ ಹೆಸರಿನ ಮೊದಲಿನ 2 ಅಕ್ಷರ ಕುಂದ ಎಂಬುದನ್ನು ಈಶ್ವರನಿಗೆ ಸೇರಿಸಿ ಕುಂದೇಶ್ವರ ಎಂದು ನಾಮಕರಣ ಮಾಡಲಾಗಿತ್ತೆಂಬ ಪ್ರತಿಯೂ ಇದೆ.
ಲಕ್ಷ್ಮಣ ಶಾಸ್ತ್ರಿ ವಿರಚಿತ ಗುರುವಂಶ ಕಾವ್ಯ ಮತ್ತು ಕೆಳದಿ ಅರಸರಿಗೆ ಸಂಬಂಧಿಸಿದ ಕೆಳದಿ ನೃಪವಿಜಯ ಮೊದಲಾದ ಗ್ರಂಥಗಳಲ್ಲಿ ಶೃಂಗೇರಿ ಧರ್ಮಸಂಸ್ಥಾನದ ಜಗದ್ಗುರುಗಳಿಗೂ ಕುಂದಾಪುರಕ್ಕೂ ಇದ್ದ ನಿಕಟ ಸಂಪರ್ಕ ಉಲ್ಲೇಖಗೊಂಡಿದೆ. ಕೆಳದಿ ಅರಸರು ಕೊಲ್ಲೂರು, ಗೋಕರ್ಣ ಮೊದಲಾದ ಕಡೆಗೆ ಯಾತ್ರೆ ಹೋಗುವಾಗಲೆಲ್ಲ ಶೃಂಗೇರಿ ಜಗದ್ಗುರುಗಳವರನ್ನು ಗೌರವ ಪೂರ್ವಕವಾಗಿ ಪಲ್ಲಕ್ಕಿಯಲ್ಲಿ ಮುಂದಿರಿಸಿಕೊಂಡು ಈ ಮಾರ್ಗವಾಗಿ ಹೋಗುತ್ತಿದ್ದ ಉಲ್ಲೇಖವಿದೆ. ಹಾಲಾಡಿ, ಕೋಟೇಶ್ವರ, ಬಸ್ರೂರು, ಕುಂದಾಪುರ ಮುಂತಾದ ಕಡೆ ಅವರು ಮೊಕ್ಕಾಂ ಮಾಡುತ್ತಿದ್ದ ಮತ್ತು ಆ ಸಂದರ್ಭದಲ್ಲಿ ಕೋಟೇಶ್ವರದ ಕೋಟಿಲಿಂಗೇಶ್ವರ, ಕುಂದಾಪುರದ ಕುಂದೇಶ್ವರ, ಬಸ್ರೂರಿನ ಮಹಾಲಿಂಗೇಶ್ವರ ಮೊದಲಾದ ದೇವರನ್ನು ಪೂಜಿಸುತ್ತಿದ್ದ ನಿದರ್ಶನಗಳಿವೆ.
ದೇವಳದ ಪ್ರಾಕಾರ: ಕುಂದಾಪುರ ತಾಲೂಕಿನ ಪ್ರಾಚೀನ ದೇವಾಲಯಗಳಲ್ಲಿ ಕುಂದೇಶ್ವರವೂ ಒಂದು. ಸಮುದ್ರ ತೀರದಿಂದ ಪೂರ್ವಕ್ಕೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಸಾಕಷ್ಟು ವಿಶಾಲವಾದ ಹೊರಪ್ರಾಕಾರ, ಮಹಾದ್ವಾರಕ್ಕೆ ಎದುರಾಗಿ ಬಲಿಪೀಠ, ಒಳ ಪ್ರಾಕಾರದಲ್ಲಿ ಒಂದು ನಂದಿ ಮಂಟಪ ಮತ್ತು ಪ್ರದಕ್ಷಿಣಾಪಥದ ಸುತ್ತಲೂ ಚಂದ್ರಶಾಲೆ ( ಒಳಪೌಳಿ ), ಒಳ ಪ್ರಾಕಾರದ ನಡುವೆ ಗರ್ಭಗೃಹ.
ಕಗ್ಗಲ್ಲಿನಲ್ಲಿ ಸದೃಢವಾಗಿ ನಿರ್ಮಿಸಿರುವ ವೇದಿಕೆ. ಅದರ ಮೇಲೆ ಒಂದೇ ಕೋಣೆಯ ಗರ್ಭಗೃಹ. ಚಚ್ಚೌಕದ ಈ ಗರ್ಭಗುಡಿಯ ಸುತ್ತ ಒಂದು ಕಿರಿದಾದ ಪ್ರದಕ್ಷಿಣಾ ಪಥ. ಸಾಧಾರಣ ರೀತಿಯಲ್ಲಿ ಮಾಡಿದ ಕಣಶಿಲೆಯ ಬಾಗಿಲುವಾಡ. ಕಲ್ಲು ಮತ್ತು ಮುರಕಲ್ಲುಗಳಿಂದ ಕೂಡಿದ ಗೋಡೆ.
ಗರ್ಭಗೃಹದ ಕೇಂದ್ರ ಭಾಗದಲ್ಲಿ ಸರಳ ರೀತಿಯಲ್ಲಿ ಕೆತ್ತಲ್ಪಟ್ಟ ಕಲ್ಲಿನ ದೊಡ್ಡ ಪಾಣಿಪೀಠ. ತೀರ್ಥ ಹರಿದು ಹೋಗಲು ಇರುವ ಸೋಮಸೂತ್ರದ ಭಾಗವೂ ಸರಳವಾಗಿದ್ದು ನೇರವಾಗಿ ಕತ್ತರಿಸಲ್ಪಟ್ಟ ಮೂತಿಯನ್ನು ಹೊಂದಿದೆ. ಪಾಣಿಪೀಠದಲ್ಲಿ ಶ್ರೀ ಕುಂದೇಶ್ವರನ ಪ್ರತಿಷ್ಠೆ. ಈ ಶಿವಲಿಂಗವನ್ನು ರುದ್ರಾಕ್ಷ ಶಿಲೆಯಿಂದ ಮಾಡಿದ್ದು, ಇದರ ಹೊರಮೈ ತುಂಬಾ ದೊರಕಾಗಿದೆ. ಇದರ ಶಿರೋಭಾಗ ಅಡ್ಡಕ್ಕೆ ತುಂಡರಿಸಲ್ಪಟ್ಟ ಕಂಬದಂತೆ ಚಪ್ಪಟೆಯಾಗಿದೆ. ಹಾಗಾಗಿ ಇದೊಂದು ಅಪೂರ್ವ ಶಿವಲಿಂಗ.
ಗರ್ಭಗುಡಿ ಎದುರಿಗೆ ಪ್ರತ್ಯೇಕವಾದ ನಂದಿ ಮಂಟಪ, ಜಗುಲಿ, ಇದರ ಮೇಲೆ ನಾಲ್ಕು ಕಂಬಗಳು. ಇವುಗಳ ಮೇಲೆ ಮಂಟಪದ ಮಾಡು. ಕರಿಶಿಲೆಯಲ್ಲಿ ಕಡಿದಿರುವ ನಂದಿ ಚಿಕ್ಕದಾದರೂ ಸುಂದರವಾಗಿದೆ. ಹಿತ- ಮಿತವಾದ ಆಭರಣ. ಕೊರಳು ಮತ್ತು ಬೆನ್ನ ಮೇಲೆ ಗೆಜ್ಜೆ ಮತ್ತು ಗಂಟಿ ಹಾರಗಳು. ನಡುವಿನಲ್ಲಿ ದೇಹ ಸುತ್ತಿ ಬಳಸಿರುವ ಒಂದು ವಸ್ತ್ರದ ಪಟ್ಟಿ. ಈ ಮಂಟಪಕ್ಕೀಗ ಹೊಸ ರೂಪ ಬಂದಿದೆ.
ಇತ್ತೀಚಿನ ವರ್ಷಗಳಲ್ಲಿ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಇದೀ ದೇವಸ್ಥಾನ ಕಂಗೊಳಿಸುತ್ತಿದೆ. ಗರ್ಭಗುಡಿ, ಗಣಪತಿ- ಅಮ್ಮನವರು- ನಾಗದೇವರು- ಅಯ್ಯಪ್ಪ ಸ್ವಾಮೀಯ ಗುಡಿಗಳು, ಒಳಪೌಳಿ ಮತ್ತು ಚಂದ್ರಶಾಲೆಗಳು, ನೈವೇದ್ಯದ ಮನೆ, ನಂದಿಮಂಟಪ, ಬಲಿ ಶಿಲೆಗಳು, ಪ್ರದಕ್ಷಿಣಾ ಪಥ. ಹೊರಭಾಗದಲ್ಲಿ ಅಷ್ಟ ದಿಕ್ಪಾಲಕ ವಿಗ್ರಹಗಳಿಂದ ಕಂಗೊಳಿಸುವ ಮತ್ತು ಕಿರುಗೋಪುರಗಳಿಂದ ಶೋಭಿಸುವ ಹೆಬ್ಬಾಗಿಲು, ಶಿಲೆಯ ಬಾಗಿಲುದಾರಂದ, ದ್ವಾರಪಾಲರ ವಿಗ್ರಹಗಳು ಹೊಸ ರೂಪ ಪಡೆದಿದೆ.
ಪುಷ್ಕರಿಣಿ– ಧ್ಯಾನಸ್ಥ ಶಿವ: ದೇವಳದ ಹೊರಭಾಗದಲ್ಲಿ ಎಲ್ಲರನ್ನೂ ಆಕರ್ಷಿಸುವುದು ಶ್ರೀ ಕುಂದೇಶ್ವರ ಪುಷ್ಕರಣಿ ಮತ್ತು ಧ್ಯಾನಸ್ಥ ಶಿವನ ವಿಗ್ರಹ. ಈ ಪುಷ್ಕರಣಿಗೆ ಪ್ರದಕ್ಷಿಣೆ ಬರಲು ಮತ್ತು ಕೆರೆಯಲ್ಲಿ ನಡೆಯುವ ತೆಪ್ಪೋತ್ಸವ ಮತ್ತಿತರ ಉತ್ಸವಗಳನ್ನು ವೀಕ್ಷಿಸಲು ನಾಲ್ಕೂ ದಿಕ್ಕಿನ ಪ್ರದಕ್ಷಿಣ ಥವಿದೆ. ಹೃಷಿಕೇಶ ಮಾದರಿಯ ಧ್ಯಾನಸ್ಥ ಶಿವನ ಗಂಗಾವತರಣ ವಿಗ್ರಹ ಇಲ್ಲಿನ ಆಕರ್ಷಣೆಯಾಗಿದೆ.
ಎಲ್ಲಿದೆ ದೇವಸ್ಥಾನ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿದೆ. ಈ ಕುಂದೇಶ್ವರ ದೇವಸ್ಥಾನ. ಕುಂದಾಪುರ ಶಾಸ್ತ್ರೀ ವೃತ್ತದಿಂದ ಕೊಂಚ ಮುಂದೆ ಸಾಗಿದಾಗ ಎಡಬದಿಯಲ್ಲಿಯೇ ಈ ದೇವಸ್ಥಾನ ರಾರಾಜಿಸುತ್ತಿದೆ.
ಇಂದು ದೀಪೋತ್ಸವ: ಕುಂದೇಶ್ವರ ದೇವಳದಲ್ಲಿ ಧ್ವಜಸ್ಥಂಭವಿಲ್ಲ, ಅದಕ್ಕಾಗಿಯೇ ಇಲ್ಲಿ ರಥೋತ್ಸವದ ಬದಲಿಗೆ ‘ದೀಪೋತ್ಸವ’ವನ್ನು ನಡೆಸಲಾಗುತ್ತದೆ. ಕಾರ್ತಿಕ ಬಹುಳ ಅಮವಾಸ್ಯೆಯಂದು ಶುಕ್ರವಾರ ನಡೆಯುವ ದೀಪಾರಾಧನೆ ಸಂಭ್ರಮ ಹಾಗೂ ಸಡಗರದಿಂದ ನಡೆಯುತ್ತದೆ. ಈ ಸಂಭ್ರಮಕ್ಕೆ ಊರ ಹಾಗೂ ತಾಲೂಕಿನ ೮ ಸಾವಿರಕ್ಕೂ ಅಧಿಕ ಜನರು ಪಾಲ್ಘೊಂಡು ತಮ ಭಕ್ತಿ ಪ್ರದರ್ಶಿಸುತ್ತಾರೆ.
ಇಂದು (ಶುಕ್ರವಾರ) ಬೆಳಿಗ್ಗೆ ಶತರುಧ್ರಾಭಿಷೇಕ, ಮಹಾಮಂಗಳಾರತಿ, ಮಹಾಪುಜೆ ಪ್ರಸಾದ ವಿತರಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆಯಲಿದ್ದು ಸಂಜೆ ವಿವಿಧ ಕಲಾತಂಡಗಳು, ಭಜನಾ ತಂಡಗಳಿಂದ ಸಾಂಸ್ಕೃತಿಕ ಹಾಗೂ ದೇವ ನಾಮ ಸಂಕೀರ್ತನೆಯಂತಹ ಕಾರ್ಯಕ್ರಮಗಳು ನಡೆಯಲಿದೆ.
ರಾತ್ರಿ ೮.೩೦ ರಿಂದ ದೇವಳದಲ್ಲಿ ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಲಕ್ಷ ದೀಪೋತ್ಸವ, ನೂತನ ಪುಷ್ಪಕ ರಥದಲ್ಲಿ ಶ್ರೀ ದೇವರ ಪುರಮೆರವಣಿಗೆ ನಡೆಯಲಿದೆ. ಮಾರನೇ ದಿನ ಬೆಳಿಗ್ಗೆನ ಜಾವದವರೆಗೂ ಕಟ್ಟೆಪೂಜೆ ನಡೆಯಲಿದ್ದು ೧೬ ಕೇಂದ್ರಗಳಲ್ಲಿ ಕುಂದೇಶ್ವರನಿಗೆ ಕಟ್ಟೆ ಪೂಜೆಯ ವೈಭವವಿರುತ್ತದೆ. ಬಳಿಕ ಬೆಳಿಗ್ಗೆನ ಜಾವ (ನ.೨೨) ತೆಪ್ಪೋತ್ಸವ ಹಾಗೂ ಕೆರೆದೀಪ ಕಾರ್ಯಕ್ರಮ ನಡೆಯುತ್ತದೆ.
1 Comment
kudukanige devavolide..kundeshwara