ಉಡುಪಿ : ತಂದೆ ತಾಯಿ ದೂರದಲ್ಲಿರುವ ಕಾರಣ ಒಬ್ಬೊಂಟಿತನ, ಧಾರಾವಾಹಿ ನಟನ ಬಗ್ಗೆ ಇದ್ದ ಅಪಾರ ಮೋಹ, ನಟನೆಯ ಪ್ರೀತಿಯಿಂದಗಿ ಮನನೊಂದು ಉಡುಪಿಯ ವಸತಿ ಶಾಲೆಯೊಂದರ 8ನೇ ತರಗತಿ ವಿದ್ಯಾರ್ಥಿನಿ 13ರ ಹರೆಯದ ಇಶಿಕಾ ಎಸ್. ಶೆಟ್ಟಿ ಹಾಸ್ಟೆಲ್ನಿಂದ ನಾಪತ್ತೆಯಾಗಿದ್ದು, ಇಶಿಕಾ ಬರೆಯುತ್ತಿದ್ದ ಡೈರಿಯನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಉಡುಪಿ ಪೊಲೀಸ್ ತಂಡಗಳು ಮುಂಬಯಿ, ಕಿನ್ನಿಗೋಳಿ, ಮಂಗಳೂರಿಗೆ ಹೋಗಿವೆ. 5-6 ದಿನಗಳೂ ಕಳೆದರೂ ಬಾಲಕಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ.
ಇನ್ಸ್ಪೆಕ್ಟರ್ ಶ್ರೀಕಾಂತ್, ಎಸ್ಐಗಳಾದ ಮಧು ಟಿ.ಎಸ್., ಮೀನಾಕ್ಷಿ ಮತ್ತು ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ. ವಿವಿಧ ಮಜಲುಗಳನ್ನು ಮುಂದಿಟ್ಟುಕೊಂಡು ಚುರುಕಾಗಿ ಈ ತನಿಖೆ ನಡಯುತ್ತಿದೆ. ಈ ನಡುವೆ ಬಾಲಕಿ ಫೈಜಲ್ ಮನೆಗೆ ತೆರಳಿರಬಹುದೇ ಎಂಬ ಅನುಮಾನದಲ್ಲಿ ಪೊಲೀಸ್ ತಂಡ ಮತ್ತೆ ಮುಂಬೈಗೆ ಹೋಗಿದೆ. ಅದರ ಜತೆಗೆ ಕಿನ್ನಿಗೋಳಿಯ ಏಳಿಂಜೆ, ಮಂಗಳೂರು, ಉಡುಪಿಯಲ್ಲೂ ವಿಚಾರಣೆ ಮುಂದುವರಿದಿದೆ. ಒಂದು ತಂಡ ಬೆಂಗಳೂರಿನತ್ತವೂ ಸಾಗಿದೆ ಎನ್ನಲಾಗಿದೆ.
ಡೆತ್ ನೋಟ್ ರಹಸ್ಯ: ಯುವತಿಯ ಡೈರಿಯಲ್ಲಿ ಸಿಕ್ಕ ಪತ್ರದಲ್ಲಿ ನನಗೆ ಹೆತ್ತವರ ಪ್ರೀತಿ ಸರಿಯಾಗಿ ಸಿಗುತ್ತಿಲ್ಲ. ನಾನು ಏಕಾಂಗಿಯಾಗಿರುವೆ. ಡ್ಯಾನ್ಸ್ ಸ್ಟಾರ್ ಖ್ಯಾತಿಯ ಹಾಗೂ ಹಿಂದಿ ಧಾರಾವಾಹಿಯ ನಟ ಫೈಜಲ್ ಖಾನ್ನನ್ನು ತುಂಬಾ ಮೆಚ್ಚಿಕೊಂಡಿದ್ದೇನೆ. ನಾನು ಅವನನ್ನು ನೋಡಲು ಹೋಗುತ್ತಿದ್ದೇನೆ. ಅವನು ಸಿಗದಿದ್ದರೆ ನಾನು ಸಾಯುತ್ತೇವೆ. ನಾನು ಸತ್ತರೆ ಫೈಜಲ್ಗೆ ವಿಷಯ ತಿಳಿಸ ಎಂಬುದಾಗಿ ಬರೆದಿದ್ದು ಮಾತ್ರವಲ್ಲದೇ ತಾಯಿ ಬಗ್ಗೆಯೂ ಅಸಮಾಧಾನದ ಮಾತುಗಳು ವ್ಯಕ್ತವಾಗಿತ್ತು. ಅಲ್ಲದೇ ಡೈರಿಯ ಇನ್ನೊಂದು ಪುಟದಲ್ಲಿ ಮನಕಲಕುವ ರೀತಿಯ ಕೆಲವೊಂದು ರೇಖಾಚಿತ್ರಗಳನ್ನು ತನ್ನ ಕುಟುಂಬಕ್ಕೆ ಹೋಲಿಸಿ ಆಕೆ ಬಿಡಿಸಿದ್ದು, ಆಕೆಯ ಮನಸ್ಥಿತಿ ತೀರ ಬೇಸರಗೊಂಡಿದ್ದು, ಕುಟುಂಬಿಕವಾಗಿ ಆಕೆ ಬಹಳಷ್ಟು ಕುಗ್ಗಿದ್ದಳು, ಏಕಾಂಗಿತನ ಅವಳನ್ನು ಕಾಡುತ್ತಿದ್ದ ಬಗ್ಗೆ ತಿಳಿಸುತ್ತದೆ.
ಯಾರಿವಳು ಇಶಿಕಾ: ಮೂಲ್ಕಿ ಕಿನ್ನಿಗೋಳಿ ಏಳಿಂಜೆಯ ಯಶೋಧಾ ಯಾನೆ ಪ್ರಿಯಾ ಶೆಟ್ಟಿ ಅವರ ಮಗಳಾಗಿರುವ ಇಶಿಕಾ ಉಡುಪಿಯ ಶಾರದಾ ವಸತಿ ಶಾಲೆಯಲ್ಲಿ 8ನೇ ತರಗತಿ ಕಲಿಯುತ್ತಿದ್ದಳು. ಈಕೆ ನ. 15ರ ಸಂಜೆಯವರೆಗೆ ಹಾಸ್ಟೆಲ್ನಲ್ಲಿದ್ದು, ರಾತ್ರಿಂದ ನಾಪತ್ತೆಯಾಗಿದ್ದಾಳೆ. ಶಾಲೆಯವರಿಗೆ ಈ ವಿಷಯ ತಿಳಿಯುತ್ತಲೆ ತೀವ್ರ ಹುಡುಕಾಟ ನಡೆಸಿದ್ದರು. ಆದರೂ ಆಕೆಯ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಂದು ರಾತ್ರಿಯೇ ಉಡುಪಿ ನಗರ ಠಾಣೆಯ ಪೊಲೀಸರಿಗೆ ದೂರನ್ನು ನೀಡಿದ್ದರು. ಬಾಲಕಿಯ ಹೆತ್ತವರುಮಸ್ಕತ್ತಿನಲ್ಲಿದ್ದು, ನ.೧೯ ರಂದು ಬಾಲಕಿ ತಾಯಿ ಹಾಗೂ ಸಂಬಂಧಿಕರು ಶಾಲೆಗೆ ಮುತ್ತಿಗೆ ಹಾಕಿದ್ದರು.