ಕನ್ನಡ ವಾರ್ತೆಗಳು

ನ.27 : ದಿ| ವಿ.ಎಸ್. ಕುಡ್ವ – ಜೀವನ – ಸಾಧನೆ ಕೃತಿ ಬಿಡುಗಡೆ

Pinterest LinkedIn Tumblr

VS_kudva_Book_1
ಪತ್ರಿಕೋದ್ಯಮದ ಭೀಷ್ಮ, ಸಾರಿಗೆ ಸಂಚಾರ ಕೈಗಾರಿಕೋದ್ಯಮದ ರೂವಾರಿ – ಮಾಂತ್ರಿಕ

ಮಂಗಳೂರು: ನಗರದ ಕೆನರಾ ಪ್ರತಿಷ್ಠಾನ ಪ್ರಸ್ತುತ ಪಡಿಸುವ ಪತ್ರಿಕೋದ್ಯಮದ ಭೀಷ್ಮ (ನವಭಾರತ 1941-1967) ಮತ್ತು ಸಾರಿಗೆ ಸಂಚಾರ ಕೈಗಾರಿಕೋದ್ಯಮದ ಕ್ರಾಂತಿಕಾರ, ಸರದಾರ ವಿ.ಎಸ್. ಕುಡ್ವ- ಜೀವನ – ಸಾಧನೆ ಕೃತಿಯನ್ನು ತಾ| 27.11.14 ರಂದು ನಗರದ ಹೊಟೆಲ್ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಜರಗುವ ಸಮಾರಂಭದಲ್ಲಿ, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಎನ್. ವಿನಯ ಹೆಗ್ಡೆಯವರು ಕೃತಿಯ ಆಂಗ್ಲ ಮತ್ತು ಕನ್ನಡ ದ್ವಿ-ಭಾಷಾ ಆವೃತ್ತಿಯನ್ನು ಬಿಡುಗಡೆಗೊಳಿಸಲಿರುವರು. ಮಣಿಪಾಲದ ಸಿಂಡಿಕೇಟ್ ಬ್ಯಾಂಕ್‌ನ ಮಹಾ ಪ್ರಬಂಧಕರಾದ ಶ್ರೀ ಕೆ.ಟಿ. ರೈಯವರು ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿರುವರು. ರೋಟರಿ ಮಾಜಿ ಜಿಲ್ಲಾ ಗವರ್ನರ್ ರೊ| ಡಾ. ದೇವದಾಸ ರೈಯವರು ಅಭಿನಂದನಾ ಭಾಷಣ ಮಾಡಲಿರುವರು. ರೊ| ಎಂ.ವಿ. ಮಲ್ಯರು ಈ ಕೃತಿಯ ಲೇಖಕರಾಗಿದ್ದಾರೆ. ಈ ಕೃತಿಯು 16 ಪುಟಗಳ ವರ್ಣಮಯ ಛಾಯಾಚಿತ್ರದೊಂದಿಗೆ 200 ಪುಟಗಳನ್ನೊಳಗೊಂಡಿದೆ.

ದಿ| ವಾಮನ ಶ್ರೀನಿವಾಸ ಕುಡ್ವರು ಓರ್ವ ಶ್ರೇಷ್ಠ, ಧೀಮಂತ ಮಹಾನ್ ವ್ಯಕ್ತಿ. ಜಿಲ್ಲೆಯ ಶಿಕ್ಷಣ, ಕೈಗಾರಿಕೋದ್ಯಮ, ಪತ್ರಿಕೋದ್ಯಮ, ವಾಣಿಜ್ಯ ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆಗೈದು, ಸಮಾಜಕ್ಕೆ ಶ್ರೇಷ್ಠ ಕೊಡುಗೆಗಳನ್ನು ನೀಡಿ, ಹೆಸರು ಮತ್ತು ಖ್ಯಾತಿ ಪಡೆದ ಅನೇಕ ಮಹನೀಯರಲ್ಲಿ ಅವರು ಒಬ್ಬರು. ಕುಡ್ವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ-ಓರ್ವ ಸ್ವಾತಂತ್ರ್ಯ ಹೋರಾಟಗಾರ(1918), ಗೌರವ ಶಿಕ್ಷಕ(ಸರಕಾರಿ ಶಾಲೆ ಕಾರ್ಕಳ 1922), ಬ್ಯಾಂಕರ್ ಮತ್ತು ಸ್ಥಾಪಕ ನಿರ್ದೇಶಕ(ಸಿಂಡಿಕೇಟ್ ಬ್ಯಾಂಕ್, ಮಣಿಪಾಲ 1925), ಶಿಕ್ಷಣ ತಜ್ಞ(ಬೋರ್ಡು ಶಾಲೆ ಮುಲ್ಕಿ 1934, ವಿಜಯಾ ಕಾಲೇಜು ಮುಲ್ಕಿ 1963), ಯಶಸ್ವೀ ಕೈಗಾರಿಕೋದ್ಯಮಿ(ಸಿ.ಪಿ.ಸಿ. ಸಾರಿಗೆ ಸಂಸ್ಥೆ 1939-1967 ಮತ್ತು ಕೆನರಾ ವರ್ಕ್‌ಶಾಪ್ಸ್ 1943-1967), ಪತ್ರಿಕಾ ವ್ಯವಸ್ಥಾಪಕ ಸಂಪಾದಕ (ನವಭಾರತ 1941-1967), ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವಾಧ್ಯಕ್ಷ(1947-1950), ರೋಟರಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ(1950-1953), ತಾಂತ್ರಿಕ ಶಿಕ್ಷಣ ತರಬೇತುದಾರ(1940), ಸ್ಥಾಪಕ ಅಧ್ಯಕ್ಷ (ದ.ಕ. ಸಾರಿಗೆ ನಿರ್ವಾಹಕರ ಸಂಘ ಮತ್ತು ದ.ಕ. ಸಣ್ಣ ಪ್ರಮಾಣದ ಕೈಗಾರಿಕಾ ಸಂಸ್ಥೆ), ಸಮಾಜ ಸುಧಾರಕ, ಸಂಪಾದಕ ಮತ್ತು ಲೇಖಕ.

VS_kudva_Book_2

ಮುಲ್ಕಿ ವಿಜಯಾ ಕಾಲೇಜು ಕಟ್ಟಡಕ್ಕೆ ಜಮೀನು ದಾನ, ವಿದ್ಯಾರ್ಥಿನಿ ನಿಲಯಕ್ಕೆ ತಮ್ಮ ನಿವಾಸದ ನಿವೇಶನ ದಾನ, ಸುರತ್ಕಲ್ಲಿನ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಯೋಗದಾನ, ಉಡುಪಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ತಮ್ಮ ಮಾಲೀಕತ್ವದ ಕೈಗಾರಿಕಾ ಪ್ರದೇಶದ ಜಮೀನು ದಾನ, ಜಿಲ್ಲೆಗೊಂದು ವಿಮಾನ ನಿಲ್ದಾಣ, ಸರ್ವ‌ಋತು ಬಂದರು, ರೈಲ್ವೇ ಮಾರ್ಗಗಳು, ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು, ಸೇತುವೆಗಳ ನಿರ್ಮಾಣಕ್ಕಾಗಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ, ಮಾಜಿ ಸಂಸದ ದಿ| ಶ್ರೀನಿವಾಸ ಮಲ್ಯರ ಸಹಕಾರದಿಂದ ಅವುಗಳನ್ನು ಅನುಷ್ಠಾನಗೊಳಿಸಿದವರು.

ವಿ.ಎಸ್. ಕುಡ್ವರು ಸಿ.ಪಿ.ಸಿ. ಸಂಸ್ಥೆಯಲ್ಲಿ ಇಂಜಿನಿಯರರಾಗಿ ನಿಯುಕ್ತಿಗೊಂಡು, ನಿರಂತರ ಅಪಾರ ನಷ್ಟ ಅನುಭವಿಸುತ್ತಿದ್ದ ಸಂಸ್ಥೆಯನ್ನು ಲಾಭ ಗಳಿಸುವ ಸಂಸ್ಥೆಯನ್ನಾಗಿ ಕ್ರಾಂತಿಕಾರಿಯಾಗಿ ಪರಿವರ್ತಿಸಿ, ಸಂಸ್ಥೆಯ ಅತೀ ಉನ್ನತ ಹುದ್ದೆಯಾದ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರ ಸ್ಥಾನವನ್ನು ಅಲಂಕರಿಸಿದ್ದು, ಅವರ ಜೀವಮಾನದ ಒಂದು ಶ್ರೇಷ್ಠ ಸಾಧನೆ ಮತ್ತು ಉನ್ನತ ಸಾಹಸವೇ ಸರಿ.

ಸಂಸ್ಥೆಯ ನೌಕರರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣ ಪ್ರೋತ್ಸಾಹಕ್ಕಾಗಿ ಉಚಿತ ವಿದ್ಯಾರ್ಥಿ ವೇತನ ವಿತರಿಸಿದವರು. ಕುಡ್ವರ ಆಡಳಿತ ಅಧಿಕಾರಾವಧಿಯಲ್ಲಿ ಸಿ.ಪಿ.ಸಿ. ಸಂಸ್ಥೆಯ ನೌಕರರಿಗೆ ಲಾಭಾಂಶ, ಭವಿಷ್ಯ ನಿಧಿ, ಉಪದಾನ ಮತ್ತು ಪಿಂಚಣಿ ನೀಡಿದ್ದು ರಾಜ್ಯದಲ್ಲೇ ಒಂದು ಪ್ರಥಮ ಮಾದರೀ ಸಂಸ್ಥೆಯಾಗಿ ದಾಖಲಾಗಿದೆ. ಅವರ ಹೆಸರಾಂತ ಕೈಗಾರಿಕೋತ್ಪನ್ನ ‘ಕೆನರಾ ಸ್ಪ್ರಿಂಗ್ಸ್’ ದೇಶ-ವಿದೇಶದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ಮೈಸೂರು ರಾಜ್ಯದಲ್ಲೇ ಪ್ರಥಮ ಟೈರು ಪುನರ್ನವೀಕರಣ ಘಟಕ, ಏಷ್ಯಾ ಖಂಡದಲ್ಲೇ ಪ್ರಥಮ ಉಕ್ಕು ಉತ್ಪಾದನಾ ಸ್ಥಾವರ, ದ.ಕ. ಜಿಲ್ಲೆಯ ಪ್ರಥಮ ತಾಂತ್ರಿಕ ಶಿಕ್ಷಣ ತರಬೇತಿ ಕೇಂದ್ರ ಮೊದಲಾದ ಸಂಸ್ಥೆಗಳನ್ನು ಸ್ಥಾಪಿಸಿದ ಕೀರ್ತಿ ಕುಡ್ವರದು. ಅವರು ರಚಿಸಿದ ಕೃತಿ ‘ಮೋಟಾರು ಯಂತ್ರ ವಿಜ್ಞಾನ’ವನ್ನು ಮದರಾಸು ವಿಶ್ವವಿದ್ಯಾನಿಲಯವು ಶ್ರೇಷ್ಠವೆಂದು ಪರಿಗಣಿಸಿ, ಕುಡ್ವರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.

ಅವರ ಆದರ್ಶ ಜೀವನ, ಯುವಕರಿಗೆ ಒಂದು ಸ್ಫೂರ್ತಿ, ಮಾದರಿ ಮತ್ತು ಮಾರ್ಗದರ್ಶಕವಾಗಿವೆ. ಅವರ ಸಾರ್ಥಕ, ನಿಸ್ವಾರ್ಥ ಮತ್ತು ಪ್ರಾಮಾಣಿಕ ಬದುಕೊಂದು ರೋಚಕ ಹೋರಾಟದ ಕಥನ. ಅವರು ಪರೋಪಕಾರಿ ಸೇವಾ ಮನೋಭಾವದ ಪ್ರವೃತ್ತಿಯಿಂದ ಜನಮನ್ನಣೆ ಗಳಿಸಿದವರು. ಯಾವುದೇ ಉತ್ತಮ ಕಾರ್ಯ, ಸಾಧನೆ, ದಾನ ಧರ್ಮಗಳನ್ನು ಮಾಡಿದಾಗ, ತಮ್ಮದೇ ಮಾಲಕತ್ವದ ‘ನವಭಾರತ’ ದೈನಿಕ ವಾರ್ತಾ ಪತ್ರಿಕೆಯಲ್ಲೂ ಪ್ರಚಾರ ಅಪೇಕ್ಷಿಸದ ಶ್ರೇಷ್ಠ ವ್ಯಕ್ತಿ. ಸುಮಾರು ನಾಲ್ಕು ದಶಕಗಳ ಕಾಲ ಅವಿಭಜಿತ ದ.ಕ. ಜಿಲ್ಲೆಯ ಸರ್ವಾಂಗೀಣ ಆರ್ಥಿಕ, ವಾಣಿಜ್ಯ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಕುಡ್ವರು 30 ಜೂನ್ 1967 ರಲ್ಲಿ ನಮ್ಮನ್ನಗಲಿದರು. ‘ಇಂದಿನ ದಿನವೇ ಸುದಿನ, ನಾಳೆಗೆಂದರೆ ಅದು ಕಠಿಣ’. ನಾಳೆ ಎಂದು ಸತ್ಕಾರ್ಯವನ್ನು ಮುಂದೂಡಬೇಡಿ. ನಿಮ್ಮ ಪಾಲಿಗೆ ನಾಳೆ ಎಂಬುದು ಬಾರದಿರಬಹುದು ಎಂಬುದು ಅವರ ಅಂತಿಮ ಸಂದೇಶವಾಗಿತ್ತು.

ಅವರ ನಾಯಕತ್ವದಲ್ಲಿ ಬೆಳೆದ ‘ಸಿ.ಪಿ.ಸಿ. ಸಾರಿಗೆ ಸಂಚಾರ ಸಂಸ್ಥೆ’ಯು ಈ ವರ್ಷದಲ್ಲಿ ಶತಮಾನೋತ್ಸವವನ್ನು ಆಚರಿಸಲಿದ್ದು, ಅವರು ಸಂಸ್ಥಾಪಿಸಿ, ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಸಂಸ್ಥೆಯಾದ ‘ಕೆನರಾ ವರ್ಕ್‌ಶಾಪ್ಸ್ ನಿಯಮಿತ’ ಸಂಸ್ಥೆಯು ಅಮೃತ ಮಹೋತ್ಸವದ ಸಂಭ್ರಮದ ಆಚರಣೆಯ ಸಿದ್ಧತೆಯಲ್ಲಿದೆ.

Write A Comment