ಸುರತ್ಕಲ್, ನ.23: ಬಸ್ಸಿನ ಹಿಂಬದಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ವಿದ್ಯಾರ್ಥಿ ಮೃತಪಟ್ಟ ಘಟನೆ ತಡಂಬೈಲ್ ಎಂಬಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಸಂಭವಿಸಿದೆ.ಘಟನೆಯಲ್ಲಿ ಚಾಲಕ ಸಹಿತ ಐವರು ಗಾಯಗೊಂಡಿದ್ದಾರೆ. ಕುದ್ರೋಳಿ ನಿವಾಸಿ ಆಶಿಲ್ (17) ಮೃತ ಬಾಲಕ.
ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಕಾರು ಬಸ್ಸಿಗೆ ಢಿಕ್ಕಿ ಹೊಡೆದಿತ್ತು ಎಂದು ಪ್ರತ್ಯಕ್ಷದರ್ಶಿ ಯೊಬ್ಬರು ತಿಳಿಸಿದ್ದಾರೆ. ಕಾರಿನ ಎಡಭಾಗ ಸಂಪೂರ್ಣವಾಗಿ ಬಸ್‌ನ ಅಡಿಯಲ್ಲಿ ನುಗ್ಗಿದ್ದರಿಂದ ಎಡದಲ್ಲಿ ಕುಳಿತಿದ್ದ ಆಶಿಲ್ ಗಂಭೀರವಾಗಿ ಗಾಯಗೊಂಡಿದ್ದು, ಬಸ್ಸಿನ ಅಡಿಯಲ್ಲಿ ಸಿಲುಕಿದ್ದ ಕಾರನ್ನು ಹೊರ ತೆಗೆಯುವುದೇ ಸಾಹಸವಾಗಿತ್ತು.
ಸಾರ್ವಜನಿಕರು ಕಾರನ್ನು ಹೊರ ತೆಗೆದು ಗಂಭೀರವಾಗಿ ಗಾಯಗೊಂಡಿದ್ದ ಆಶಿಲ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರಾದರೂ ದಾರಿ ಮಧ್ಯೆ ಆಶಿಲ್ ಕೊನೆಯುಸಿರೆಳೆದಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮುಹಮ್ಮದ್ ರಿಝ್ವಾನ್ ಎಂಬಾತ ಕಾರು ಚಾಲಕನಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಳಿದಂತೆ ಕಾರಿನಲ್ಲಿದ್ದ ಅಫ್ರಿದಿ (17), ನಿಹಾಲ್ (16), ಸೈಯದ್ ನಝೀರ್ (16) ಎಂಬವರು ಗಾಯಗೊಂಡಿದ್ದಾರೆ. ಇವರೆಲ್ಲರೂ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಬೆಳಗ್ಗೆ ಕಾಲೇಜಿಗೆ ಹೋಗಿದ್ದ: ಕುದ್ರೋಳಿ ಜುಮಾ ಮಸೀದಿ ಬಳಿಯ ನಿವಾಸಿ ಇಬ್ರಾಹೀಂ ಎಂಬವರ ನಾಲ್ವರು ಪುತ್ರರಲ್ಲಿ ಕಿರಿಯವನಾದ ಆಶಿಲ್ ಇಂದು ಮುಂಜಾನೆ ಮನೆಯಿಂದ ಕಾಲೇಜಿಗೆಂದು ಹೋಗಿದ್ದ. ಅಲ್ಲಿಂದ ಸುರತ್ಕಲ್‌ಗೆ ಯಾಕೆ ಹೋದ ಎಂಬುದು ತಿಳಿದುಬಂದಿಲ್ಲ. ಅಪಘಾತಕ್ಕೀಡಾದ ಕಾರು ಅವರ ಸಂಬಂಧಿಕರದ್ದೆಂದು ಹೇಳಲಾಗಿದೆ.