ಅಹ್ಮದಾಬಾದ್, ನ.23: ಅಂತಿಮ ಓವರ್‌ನಲ್ಲಿ ಅಭಿಮನ್ಯು ಮಿಥುನ್ ಸಂಘಟಿಸಿದ ಅಮೋಘ ಬೌಲಿಂಗ್ ಹಾಗೂ ಸ್ಟುವರ್ಟ್‌ಬಿನ್ನಿ ಸರ್ವಾಂಗೀಣ ಪ್ರದರ್ಶನದ ನೆರವಿನಿಂದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಬಂಗಾಳ ತಂಡವನ್ನು 6 ರನ್‌ನಿಂದ ರೋಚಕವಾಗಿ ಮಣಿಸಿ ವಿಜಯ್ ಹಝಾರೆ ಟ್ರೋಫಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮಂಗಳವಾರ ಇಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ಪಂಜಾಬ್ ತಂಡವನ್ನು ಎದುರಿಸಲಿದೆ. ಬಂಗಾಳದಿಂದ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಕರ್ನಾಟಕ ತಂಡ ಬಿನ್ನಿ (50ರನ್), ಕರುಣ್ ನಾಯರ್(41), ನಾಯಕ ವಿನಯ್‌ಕುಮಾರ್(ಅಜೇಯ 39) ಹಾಗೂ ಮನೀಷ್ ಪಾಂಡೆ(32) ಕಾಣಿಕೆಯ ನೆರವಿನಿಂದ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 268 ರನ್ ಗಳಿಸಿತು. ಗೆಲ್ಲಲು ಕಠಿಣ ಸವಾಲು ಪಡೆದ ಬಂಗಾಳ ತಂಡ ಸುದೀಪ್ ಚಟರ್ಜಿ (67), ಮನೋಜ್ ತಿವಾರಿ (56) ಹೋರಾಟದ ಹೊರತಾಗಿಯೂ ಅಭಿಮನ್ಯು ಮಿಥುನ್(3-40), ಸ್ಟುವರ್ಟ್ ಬಿನ್ನಿ(2-48) ಬೌಲಿಂಗ್‌ಗೆ ತತ್ತರಿಸಿ 49.5 ಓವರ್‌ಗಳಲ್ಲಿ 262 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಬಂಗಾಳಕ್ಕೆ ಅಂತಿಮ 2 ಓವರ್‌ಗಳಲ್ಲಿ ಗೆಲ್ಲಲು 13 ರನ್ ಅಗತ್ಯವಿತ್ತು. ಬಂಗಾಳ ಆರು ರನ್ ಸೇರಿಸುವಷ್ಟರಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಸಾಯನ್ ಮಂಡಲ್ ಹಾಗೂ ಅಶೋಕ್ ದಿಂಡಾ ಬೇಜವಾಬ್ದಾರಿತನ ಪ್ರದರ್ಶಿಸಿದರು. ಬಂಗಾಳಕ್ಕೆ ಅಂತಿಮ ಓವರ್‌ನಲ್ಲಿ 9 ರನ್ ಅಗತ್ಯವಿದ್ದಾಗ ದಿಂಡಾ ಹಾಗೂ ಲಾಹಿರಿ ಅವರನ್ನು ಔಟ್ ಮಾಡಿದ ಮಿಥುನ್ ಕರ್ನಾಟಕಕ್ಕೆ ರೋಚಕ ಗೆಲುವು ತಂದುಕೊಟ್ಟರು. ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕದ ಆರಂಭ ಉತ್ತಮವಾಗಿರಲಿಲ್ಲ. 12 ರನ್‌ಗೆ ಮಯಾಂಕ್ ಅಗರ್‌ವಾಲ್ ಪೆವಿಲಿಯನ್ ಸೇರಿದ್ದರು. ರಾಬಿನ್ ಉತ್ತಪ್ಪ (36) ಹಾಗೂ ಮನೀಷ್ ಪಾಂಡೆ 3ನೆ ವಿಕೆಟ್‌ಗೆ 47 ರನ್ ಸೇರಿಸಿ ತಂಡವನ್ನು ಆಧರಿಸಿದರು. ಈ ಇಬ್ಬರು ಔಟಾದ ನಂತರ ಬಿನ್ನಿ ಹಾಗೂ ಕರುಣ್ ನಾಯರ್ 5ನೆ ವಿಕೆಟ್‌ಗೆ ಉಪಯುಕ್ತ 56 ರನ್ ಜೊತೆಯಾಟ ನಡೆಸಿದರು. 10ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 46 ರನ್ ಸೇರಿಸಿದ ವಿನಯ್ ಕುಮಾರ್ ಹಾಗೂ ಮಿಥುನ್(7) ತಂಡ ಸ್ಪರ್ಧಾತ್ಮಕ 268 ರನ್ ಗಳಿಸಲು ನೆರವಾದರು. ಗೆಲ್ಲಲು 269 ರನ್ ಗುರಿ ಪಡೆದಿದ್ದ ಬಂಗಾಳಕ್ಕೆ ಗೋಸ್ವಾಮಿ(45) ಹಾಗೂ ಅರಿಂದಮ್ ದಾಸ್(23) 52 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭವನ್ನೇ ನೀಡಿದ್ದರು. ಮೂರನೆ ವಿಕೆಟ್‌ಗೆ 86 ರನ್ ಸೇರಿಸಿದ ಮನೋಜ್ ತಿವಾರಿ ಹಾಗೂ ಚಟರ್ಜಿ ಕರ್ನಾಟಕ ಕೈಯಿಂದ ಗೆಲುವನ್ನು ಕಸಿದುಕೊಳ್ಳುವ ಭೀತಿ ಹುಟ್ಟಿಸಿದ್ದರು. ಆದರೆ, ಅತ್ಯುತ್ತಮ ಬೌಲಿಂಗ್ ಸಂಘಟಿಸಿದ ಮಿಥುನ್ ಹಾಗೂ ಬಿನ್ನಿ ಬಂಗಾಳದ ವಿರುದ್ಧ ಕರ್ನಾಟಕಕ್ಕೆ 6 ರನ್‌ನಿಂದ ರೋಚಕ ಗೆಲುವು ತಂದುಕೊಡುವಲ್ಲಿ ಮಹತ್ವದ ಪಾತ್ರವಹಿಸಿದರು.
http://vbnewsonline.com