ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎಲ್. ಹನುಮಂತಯ್ಯ,ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿ ಎಸ್.ಜಿ.ನಂಜಯ್ಯನಮಠ ಸೇರಿದಂತೆ 92 ಜನರನ್ನು ರಾಜ್ಯ ಸರ್ಕಾರದ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಸೋಮವಾರ ನೇಮಕ ಮಾಡಲಾಗಿದೆ.
ಮಾಜಿ ಸಚಿವೆ ರಾಣಿ ಸತೀಶ್ (ಹಟ್ಟಿ ಚಿನ್ನದ ಗಣಿ), ಮಾಜಿ ಶಾಸಕಿ ಮಲ್ಲಾಜಮ್ಮ (ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ), ಬೆಂಗಳೂರಿನ ಮಾಜಿ ಮೇಯರ್ಗಳಾದ ಎಂ.ರಾಮಚಂದ್ರಪ್ಪ (ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ), ಪಿ.ಆರ್. ರಮೇಶ್ (ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ), ಚಿತ್ರನಟಿ ಭಾವನಾ ರಾಮಣ್ಣ (ಬಾಲಭವನ) ಸೇರಿ ಕಾಂಗ್ರೆಸ್ನ ಹಲವು ಪ್ರಮುಖರು, ಕಾರ್ಯಕರ್ತರಿಗೆ ನಿಗಮ, ಮಂಡಳಿಗಳ ಅಧ್ಯಕ್ಷರಾಗಿ ಅವಕಾಶ ಕಲ್ಪಿಸಲಾಗಿದೆ.
ಮೈಸೂರಿನ ಮಾಜಿ ಮೇಯರ್ಗಳಾದ ಅನಂತ್ (ಬಣ್ಣ ಮತ್ತು ಅರಗು ಕಾರ್ಖಾನೆ), ನಾರಾಯಣ (ಸಫಾಯಿ ಕರ್ಮಚಾರಿ ಆಯೋಗ), ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಅವರ ತಮ್ಮನ ಮಗ ಗುರುಚರಣ್ (ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್) ಕೂಡ ನೇಮಕಾತಿಯಲ್ಲಿ ಸ್ಥಾನ ಪಡೆದಿದ್ದಾರೆ.
ಯಾವುದೇ ಹಾಲಿ ಶಾಸಕರಿಗೆ ನಿಗಮ, ಮಂಡಳಿಯಲ್ಲಿ ಅವಕಾಶ ಕಲ್ಪಿಸಿಲ್ಲ. ಕಳೆದ ಚುನಾವಣೆಯಲ್ಲಿ ಸೋಲು ಕಂಡಿರುವ ಯಾವುದೇ
ಮಾಜಿ ಶಾಸಕರಿಗೂ ಅವಕಾಶ ನೀಡಿಲ್ಲ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿನ ಟಿಕೆಟ್ ವಂಚಿತರಿಗೆ ಆದ್ಯತೆ ನೀಡಲಾಗಿದೆ. ಪಕ್ಷದ ಪ್ರಮುಖ ನಾಯಕರ ಆಪ್ತ ಬೆಂಬಲಿಗರಿಗೂ ನೇಮಕಾತಿಯಲ್ಲಿ ಅವಕಾಶ ದೊರೆತಿದೆ.
10 ಸಾವಿರ ಅರ್ಜಿ: ನಿಗಮ, ಮಂಡಳಿಗಳ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡುವ ಕಸರತ್ತು ಆರು ತಿಂಗಳಿನಿಂದ ನಡೆಯುತ್ತಿತ್ತು. ಕೆಪಿಸಿಸಿ ಕಚೇರಿ ಮತ್ತು ಮುಖ್ಯಮಂತ್ರಿಯವರ ಕಚೇರಿಗೆ ಸಲ್ಲಿಕೆಯಾಗಿದ್ದ 10 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲಿಸಿ ಸಂಭವನೀಯರ ಪಟ್ಟಿ ಸಿದ್ಧಪಡಿಸಲಾಗಿತ್ತು. ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಶಿಫಾರಸು ಆಧರಿಸಿ ಅದನ್ನು ಪರಿಷ್ಕರಿಸಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಲವು ಬಾರಿ ದೆಹಲಿಗೆ ಹೋಗಿ ಬಂದಿದ್ದರು. ಇದೇ 20ರಂದು ದೆಹಲಿಗೆ ತೆರಳಿದ್ದ ಅವರು, ನೇಮಕಾತಿಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ದೆಹಲಿಯಿಂದ ವಾಪಸಾದ ಸಿದ್ದರಾಮಯ್ಯ ಅವರು, ಸಂಬಂಧಿಸಿದ ಇಲಾಖೆಗಳಿಗೆ ಪಟ್ಟಿಯನ್ನು ರವಾನಿಸಿ ನೇಮಕಾತಿ ಆದೇಶ ಹೊರಡಿಸುವಂತೆ ನಿರ್ದೇಶನ ನೀಡಿದ್ದರು. ಆಯಾ ಇಲಾಖೆಗಳ ಮಟ್ಟದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕಾತಿ ಆದೇಶ ಹೊರಡಿಸಲಾಗಿದೆ. ನಿಗಮ, ಮಂಡಳಿಗಳಿಗೆ ನೇಮಕ ಆಗಿರುವವರಿಗೆ ಸ್ಥಾನಮಾನ ನೀಡುವ ಸಂಬಂಧ ಇನ್ನಷ್ಟೆ ಆದೇಶ ಹೊರಬೀಳಬೇಕಿದೆ.
18 ತಿಂಗಳ ಅವಧಿ: ಈಗ ನೇಮಕಾತಿ ಹೊಂದಿರುವ ಬಹುತೇಕರಿಗೆ 18 ತಿಂಗಳ ಅವಧಿ ನಿಗದಿ ಮಾಡಲಾಗಿದೆ. 2016ರ ಏಪ್ರಿಲ್ 23ರವರೆಗೆ ಅವರು ಈ ಹುದ್ದೆಯಲ್ಲಿರುತ್ತಾರೆ ಎಂದು ಸ್ಪಷ್ಟವಾಗಿ ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕೆಲವರಿಗೆ ಮಾತ್ರ ಅವರ ಅವಧಿಯ ಕುರಿತು ಆದೇಶದಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಬದಲಿಗೆ ‘ಮುಂದಿನ ಆದೇಶದವರೆಗೆ’ ಎಂದು ಉಲ್ಲೇಖಿಸಲಾಗಿದೆ.
18 ತಿಂಗಳ ಬಳಿಕ ಎರಡನೇ ಸುತ್ತಿನಲ್ಲಿ ಮತ್ತಷ್ಟು ಮಂದಿಗೆ ನಿಗಮ, ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆ ನೀಡಲು ನಿರ್ಧರಿಸಲಾಗಿದೆ. ನಾಮಕರಣ ಪ್ರಕ್ರಿಯೆಯಲ್ಲಿ ಅವಕಾಶ ಪಡೆಯಲು ಕಾಂಗ್ರೆಸ್ ಕಾರ್ಯಕರ್ತರಲ್ಲಿ ತೀವ್ರ ಪೈಪೋಟಿ ಇರುವ ಕಾರಣದಿಂದ ಅವಕಾಶ ವಂಚಿತರನ್ನು ಸಮಾಧಾನಿಸಲು ಈ ಸೂತ್ರ ರೂಪಿಸಲಾಗಿದೆ.
ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ನಿಗಮ, ಮಂಡಳಿಗಳ ಸದಸ್ಯರ ಸ್ಥಾನಗಳಿಗೆ ಇನ್ನೂ ನೇಮಕಾತಿ ಮಾಡಿಲ್ಲ. ವಿಧಾನಮಂಡಲದ ಬೆಳಗಾವಿ ಅಧಿವೇಶನದ ಬಳಿಕ ಈ ಸ್ಥಾನಗಳಿಗೆ ನೇಮಕಾತಿ ಆದೇಶ ಪ್ರಕಟಿಸುವ ಸಾಧ್ಯತೆ ಇದೆ.
ಮುನಿಸು, ಅಸಮಾಧಾನ
ನಿಗಮ, ಮಂಡಳಿಗಳ ವಿವಿಧ ಸ್ಥಾನಗಳಿಗೆ ನೇಮಕಾತಿ ಆದೇಶ ಪ್ರಕಟವಾದ ಬೆನ್ನಲ್ಲೇ ಅಸಮಾಧಾನವೂ ಹೊರಬಿದ್ದಿದೆ. ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ ಎಂದು ಆರೋಪಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ತಮ್ಮ ಬೆಂಬಲಿಗರಿಗೆ ನಿಗಮ, ಮಂಡಳಿಗಳಲ್ಲಿ ಅವಕಾಶ ದೊರೆತಿಲ್ಲ ಎಂದು ಕೆಲವು ಸಚಿವರು ಮುನಿಸಿಕೊಂಡಿದ್ದಾರೆ. ಸಚಿವರಾದ ಆರ್.ವಿ.ದೇಶಪಾಂಡೆ ಮತ್ತು ಎಂ.ಎಚ್.ಅಂಬರೀಷ್ ಅವರು ಪಕ್ಷದ ಮುಖಂಡರನ್ನು ಸಂಪರ್ಕಿಸಿ ನೇಮಕದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಸುದ್ದಿ…
*ದಾಹ ತೀರಿಸದ ನಿಗಮ–ಮಂಡಳಿ ನೇಮಕಾತಿ