ಬೆಂಗಳೂರು: ಮಗನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸುಳ್ಳು ಆರೋಪ ಹೊರಿಸಿ ಸಂಜಯನಗರ ಸಮೀಪದ ರಾಧಾಕೃಷ್ಣ ಪಬ್ಲಿಕ್ ಶಾಲಾ ಆಡಳಿತ ಮಂಡಳಿಯಿಂದ ಹಣ ವಸೂಲಿ ಮಾಡಲು ಯತ್ನಿಸಿದ ರಾಜೇಶ್ ಖಾರ್ವಿ (30) ಎಂಬಾತನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಕೊಡಿಗೇಹಳ್ಳಿ ರಾಮಮಂದಿರ ಮುಖ್ಯರಸ್ತೆಯ ರಾಜೇಶ್, ಮಾಸ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈಚೆಗೆ ಆ ಕೆಲಸ ಬಿಟ್ಟಿದ್ದ ಆತ ಜಾಹೀರಾತು ಸಂಸ್ಥೆಯೊಂದಕ್ಕೆ ಸೇರಿದ್ದ. ಆತನ ಮಗ ರಾಧಾಕೃಷ್ಣ ಪಬ್ಲಿಕ್ ಶಾಲೆಯಲ್ಲಿ ಎಲ್ಕೆಜಿ ಓದುತ್ತಿದ್ದಾನೆ.
ನ.19ರಂದು ಶಾಲೆಯಲ್ಲಿ ನನ್ನ ಮಗನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮುಖ್ಯಶಿಕ್ಷಕಿಗೆ ಕರೆ ಮಾಡಿದ್ದ. ಆದರೆ, ಯಾವುದೇ ದೂರು ನೀಡಿರಲಿಲ್ಲ. ಅಲ್ಲದೇ, ಪದೇ ಪದೇ ಕರೆ ಮಾಡಿ ಆ ವಿಷಯವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿ ಶಾಲೆಯ ಹೆಸರು ಕೆಡಿಸುತ್ತೇನೆ ಎಂದು ಬೆದರಿಸುತ್ತಿದ್ದ. ಇದರಿಂದ ಅನುಮಾನಗೊಂಡ ಮುಖ್ಯಶಿಕ್ಷಕಿ ಸಿಬ್ಬಂದಿಯನ್ನು ವಿಚಾರಿಸಿ ಪರಿಶೀಲಿಸಿದಾಗ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಗೊತ್ತಾಗಿದೆ. ಆ ನಂತರವೂ ಕರೆ ಮಾಡುವುದನ್ನು ಮುಂದುವರಿಸಿದ ಆರೋಪಿ ₨ 2 ಲಕ್ಷ ಕೊಡುವಂತೆ ಬೆದರಿಸುತ್ತಿದ್ದ. ಅದಕ್ಕೆ ಒಪ್ಪದಿದ್ದಾಗ ₨ 1.50 ಲಕ್ಷ ಕೊಡುವಂತೆ ಹೇಳಿದ್ದ. ಈ ಸಂಬಂಧ ಶಿಕ್ಷಕಿ ನೀಡಿದ ದೂರು ಆಧರಿಸಿ ಹಣ ಕೊಡುವ ನೆಪದಲ್ಲಿ ಆರೋಪಿಯನ್ನು ಸೋಮವಾರ ಶಾಲೆ ಬಳಿ ಕರೆಸಿ ಕೊಂಡು ಬಂಧಿಸಲಾಯಿತು. ರಾಜೇಶ್ ವಿರುದ್ಧ ದರೋಡೆ (ಐಪಿಸಿ 384) ಆರೋಪದಡಿ ಪ್ರಕರಣ ದಾಖಲಾಗಿದೆ.