ಕರ್ನಾಟಕ

ವಿದ್ಯೆಯೊಂದಿಗೆ ಸಂಸ್ಕಾರ ಪಡೆಯಿರಿ: ರಾಜ್ಯಪಾಲ ವಜುಭಾಯ್ ವಾಲಾ

Pinterest LinkedIn Tumblr

pvec25nov14-BGS-UTSAV-03

ಬೆಂಗಳೂರು: ‘ಸಂಸ್ಕಾರವಿಲ್ಲದ ಶಿಕ್ಷಣ ವ್ಯರ್ಥ. ಆದ್ದರಿಂದ, ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯೆ­ಯೊಂದಿಗೆ ಉತ್ತಮ ಸಂಸ್ಕಾರವನ್ನು ಪಡೆಯಬೇಕು’ ಎಂದು ರಾಜ್ಯಪಾಲ ವಜುಭಾಯ್ ವಾಲಾ ಅವರು ಪ್ರತಿಪಾದಿಸಿದರು. ಬಿ.ಜಿ.ಎಸ್‌ ಸಮೂಹ ಶಿಕ್ಷಣ ಸಂಸ್ಥೆ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಂಸ್ಥಾಪಕರ ದಿನಾಚ­ರಣೆ ಮತ್ತು ಬಿ.ಜಿ.ಎಸ್‌ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿ ಜೀವನ ಅತ್ಯುತ್ತಮವಾದದ್ದು. ಒಮ್ಮೆ ಕಳೆದುಕೊಂಡರೆ ಅದು ಮತ್ತೆಂದಿಗೂ ತಿರುಗಿ ಬಾರದು. ಆದ್ದರಿಂದ ಪ್ಯಾಂಟ್‌, ಶರ್ಟ್‌, ತುಟಿಯ ರಂಗು… ಇತ್ಯಾದಿ ಬಾಹ್ಯ ಸೌಂದರ್ಯ ಹೆಚ್ಚಿಸುವ ವಿಚಾರಗಳಿಗಾಗಿ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಬೇಡಿ. ಸುಂದರವಾಗಿ ಕಾಣಿಸಿ­ಕೊ­ಳ್ಳಲು ಪ್ರಯತ್ನಿಸುವುದಕ್ಕಿಂತಲೂ ಉತ್ತಮ­ರಾಗಿ ತೋರಿಸಿ­ಕೊಳ್ಳಲು ಯತ್ನಿಸಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ನಿಮ್ಮ ಗುರಿ ಸ್ಪಷ್ಟವಾಗಿರಲಿ. ಮನಸ್ಸು ದೃಢವಾಗಿರಲಿ. ಆಲಸ್ಯ ಬಿಟ್ಟು ಜಾಗೃತರಾಗಿ. ನಾಳೆ ಮಾಡುವ ಕೆಲವನ್ನು ಇಂದು, ಇಂದು ಮಾಡಬೇಕೆನ್ನುವುದನ್ನು ಈಗಲೇ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಿ. ಶಾಲೆ, ಕಾಲೇಜುಗಳಿಂದ ಅಂಕಪತ್ರದೊಂದಿಗೆ ಒಳ್ಳೆಯ ಸಂಸ್ಕಾರಗಳನ್ನು ಪಡೆದುಕೊಂಡು ಹೋಗಿ’ ಎಂದು ತಿಳಿಸಿದರು.

ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಮಾತನಾಡಿ, ‘ಪ್ರಸ್ತುತ ಶಾಲಾ ಕಾಲೇಜುಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಕಾರ್ಯ ನಡೆಯಬೇಕಿದೆ. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಪಠ್ಯೇತರವಾಗಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದ­ನಾಥ ಸ್ವಾಮೀಜಿ ಮಾತನಾಡಿ, ‘ಪ್ರತಿಯೊಬ್ಬರಲ್ಲಿ ಒಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಪ್ರಕಟಿಸುವ ಆಧಾರದ ಮೇಲೆ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳು ಒಳ್ಳೆಯ ನಡವಳಿಕೆ ಮತ್ತು ಗುರು ಹಿರಿಯರನ್ನು ಗೌರವಿಸುವಂತಹ ಉತ್ತಮ ಸಂಸ್ಕಾರ­ಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದರು. ವಾಸ್ತುವಿಜ್ಞಾನ ಪರಿಷತ್ತಿನ ಅಧ್ಯಕ್ಷ ಪ್ರೊ.ಉದಯ ಸಿ. ಗಡ್ಕರಿ,  ಶಾಸಕ ಎಸ್‌.ಟಿ.ಸೋಮಶೇಖರ್‌ ಉಪಸ್ಥಿತರಿದ್ದರು.

Write A Comment