ಉಡುಪಿ: ಮಣಿಪಾಲದ ಸಿಂಡಿಕೇಟ್ ಬ್ಯಾಂಕಿನಲ್ಲಿ ಎಫ್ಸಿಎನ್‌ಆರ್ ಖಾತೆಯನ್ನು (ಅನಿವಾಸಿಗರ ವಿದೇಶಿ ಕರೆನ್ಸಿ ಖಾತೆ) ಹೊಂದಿದ್ದ ಲೂವಿಸ್ ಡಿ’ಸೋಜಾ ಅವರ ಈ-ಮೇಲ್ ಐಡಿಯನ್ನು ಹ್ಯಾಕ್ ಮಾಡಿ ಅವರ ಖಾತೆಯಿಂದ 1.13 ಕೋ.ರೂ. ಹಣ ಲಪಾಟಾಯಿಸಿರುವ ಬಗ್ಗೆ ದೂರು ದಾಖಲಾಗಿದೆ.
ನಡೇದಿದ್ದೇನು?: ಮಣಿಪಾಲ ಸಿಂಡ್ ಬ್ಯಾಂಕಿನಲ್ಲಿ ಖಾತೆ ಇದ್ದ ಲೂವಿಸ್ ಡಿ’ಸೋಜಾ ಅವರು ಕೆನಡಾ ದೇಶದಲ್ಲಿ ವಾಸ್ತವ್ಯವಿದ್ದರು. ಅವರ ಖಾತೆಗೆ ಕಟಪಾಡಿ ಕೆನರಾ ಬ್ಯಾಂಕಿನಿಂದ ಹಾಗೂ ಐಸಿಐಸಿಐ ಬ್ಯಾಂಕಿನಿಂದ ಒಟ್ಟು 223830.20 ಡಾಲರ್ ಹಣ ವರ್ಗಾವಣೆ ಆಗಿತ್ತು. ಅಂದು ಅವರ ಜಿಮೇಲ್ ಅಕೌಂಟ್‌ನ ಮೂಲಕ ಬಂದ ಸಂದೇಶ ಪತ್ರದಂತೆ ಲೂವಿಸರ ಖಾತೆಯಿಂದ 2014ರ ಜ. 15ರಂದು 1,15,000 ಯುಎಸ್ ಡಾಲರ್ ಅನ್ನು ದುಬೈ ನ್ಯಾಶನಲ್ ಬ್ಯಾಂಕಿನ ಖಾತೆಗೆ ಹಾಗೂ ಅ. 27ರಂದು ಅಬುಧಾಬಿಯ ಇಸ್ಲಾಮಿಕ್ ಬ್ಯಾಂಕ್‌ನ ಖಾತೆಗೆ 70,000 ಯುಎಸ್ ಡಾಲರ್ ಅನ್ನು ವರ್ಗಾವಣೆ ಮಾಡಲಾಗಿರುತ್ತದೆ. ನ. 13ರಂದು ಲೂವಿಸ್‌ರವರ ಖಾತೆಗೆ ಕಾರ್ಪೋರೇಷನ್ ಬ್ಯಾಂಕಿನ ಕುರ್ಕಾಲು ಶಾಖೆಯಿಂದ ಯುಎಸ್ ಡಾಲರ್ 61000 ಮತ್ತು ಸಿಎಡಿ 9100 ವರ್ಗಾವಣೆಯಾಗಿರುತ್ತದೆ. ಈ ಹಣವನ್ನು ಹಾಂಕಾಂಗ್‌ನ ಬ್ಯಾಂಕ್ ಆಫ್ ಚೈನಾಗೆ ವರ್ಗಾವಣೆ ಮಾಡಲು ಈ-ಮೇಲ್ ಮೂಲಕ ಸೂಚನೆ ಬಂದಿರುತ್ತದೆ. ಈ ವೇಳೆ ಸಂಶಯಗೊಂಡ ಮಣಿಪಾಲ ಸಿಂಡಿಕೇಟ್ ಬ್ಯಾಂಕಿನ ಕೇಂದ್ರ ಶಾಖೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಮೇಶ್ ನಾಯಕ್ ಅವರು ಲೂವಿಸ್ ಡಿ’ಸೋಜಾ ಅವರನ್ನು ಸಂಪರ್ಕ ಮಾಡಿದ್ದರು. ಆಗ ಅವರು ತಾನು ಯಾವುದೇ ಈ-ಮೇಲ್ ಸಂದೇಶ ಕಳುಹಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಇದರಿಂದಾಗಿ ಇನ್ನಷ್ಟು ಹಣ ವಂಚನೆಗೆ ಒಳಗಾಗುವುದು ತಪ್ಪಿದಂತಾಗಿತ್ತು.
ಯಾರೋ ಅಪರಿಚಿತ ವ್ಯಕ್ತಿಗಳು ಲೂವಿಸ್ ಡಿ’ಸೋಜಾ ಅವರ ಈ-ಮೇಲ್ ಐಡಿಯನ್ನು ಹ್ಯಾಕ್ ಮಾಡಿ ಹಾಗೂ ಅವರ ಸಹಿಯನ್ನು ನಕಲಿ ಮಾಡಿ ಸುಳ್ಳು ಮಾಹಿತಿ ಪತ್ರವನ್ನು ಈ-ಮೇಲ್ ಸಂದೇಶದ ಮೂಲಕ ಬ್ಯಾಂಕಿಗೆ ಕಳುಹಿಸಿ ಬ್ಯಾಂಕಿನ ಖಾತೆಯಿಂದ ಒಟ್ಟು 1,13,42,937 ಹಣವನ್ನು ಮೋಸದಿಂದ ಬೇರೆ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ ವಂಚಿಸಿದ್ದಾಗಿರುತ್ತದೆ ಎಂದು ಸಿಂಡಿಕೇಟ್ ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ನೀಡಿದ ದೂರಿನಂತೆ ಮಣಿಪಾಲ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.