ಮಂಗಳೂರು,ನ. 25 : ಬಜಪೆ ಕಿಲಿಂಜಾರು ಸಮೀಪ ವರ್ಷದ ಹಿಂದೆ ನಡೆದಿದ್ದ ಬುದ್ಧಿಮಾಂದ್ಯ ಬಾಲಕಿ ಮೇಲಿನ ಅತ್ಯಾಚಾರ ಆರೋಪ ಸಬೀತಾಗಿದ್ದು, ನಗರದ ಪೋಕ್ಸೋ ವಿಶೇಷ ನ್ಯಾಯಾಲಯ ಸೋಮವಾರ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಕಲ್ಲಾಡಿ ಮನೆ ನಿವಾಸಿ ಸುಂದರ(51) ಪ್ರಕರಣದಲ್ಲಿ ಅಪರಾಧಿಯಾಗಿದ್ದು, ವಿಶೇಷ ನ್ಯಾಯಾಲಯದಲ್ಲಿ ಪ್ರಥಮವಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಶಿಕ್ಷೆ ಪ್ರಮಾಣ: ಪೋಕ್ಸೋ ಕಲಂ 6ರ ಪ್ರಕಾರ ಅಪರಾಧಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಲಾಗಿದ್ದು, ದಂಡ ತೆರೆಲು ತಪ್ಪಿದರೆ 12 ತಿಂಗಳ ಸಾದಾ ಸಜೆ ವಿಧಿಸಲಾಗಿದೆ.
ಬಾಲಕಿ ಮನೆಗೆ ಅಕ್ರಮ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 448 ಪ್ರಕಾರ ಒಂದು ವರ್ಷ ಕಠಿಣ ಸಜೆ, ಒಂದು ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ವಿಫಲವಾದರೆ ಒಂದು ತಿಂಗಳ ಸಜೆ ವಿಧಿಸಲಾಗಿದೆ.
ಅಪ್ರಾಪ್ತೆಯನ್ನು ಪುಸಲಾಯಿಸಿ ಲೈಂಗಿಕ ಕ್ರಿಯೆ ನಡೆಸಿದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 366 ಎ ಪ್ರಕಾರ ಐದು ವರ್ಷ ಕಠಿಣ ಶಿಕ್ಷೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದರೆ 3 ತಿಂಗಳ ಸಾದಾ ಶಿಕ್ಷೆ ವಿಧಿಸಲಾಗಿದೆ.
ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಕಟವಾದ ಎರಡನೇ ಪ್ರಕರಣ ಇದಾಗಿದ್ದು, ಕಡಬ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣದಲ್ಲಿ ಅಪರಾಧಿ ರಮೇಶ ಎಂಬಾತನಿಗೆ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿತ್ತು.
50 ಸಾವಿರ ರೂ. ಪರಿಹಾರ: ಬಾಲಕಿಗೆ ನೀಡಲಾಗುವ 50 ಸಾವಿರ ರೂ. ಪರಿಹಾರ ಮೊತ್ತವನ್ನು ಹೆತ್ತವರು ಪಡೆಯಲು ಜಿಲ್ಲಾ ಕಾನೂನು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ಘಟನೆ ವಿವರ: ಅಪರಾಧಿ ಸುಂದರ 2013ರ ಜು.11ರಿಂದ 16 ವರ್ಷ ಪ್ರಾಯದ ಬುದ್ಧಿಮಾಂದ್ಯ ಯುವತಿಯ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮನೆಯ ಶೌಚಗೃಹದಲ್ಲಿ ನಿರಂತರವಾಗಿ ಅತ್ಯಾಚಾರ ನಡೆಸಿದ್ದ. ಅಲ್ಲದೆ ಆ ಬಳಿಕ ಆಕೆಯನ್ನು ತನ್ನ ಮನೆಗೂ ಕರೆಸಿಕೊಂಡು ಅತ್ಯಾಚಾರ ನಡೆಸಿದ್ದ.
ಬಾಲಕಿಗೆ ನಶ್ಯ ಎಳೆಯುವ ಚಟ ಇದ್ದು, ಇದನ್ನೇ ಅಪರಾಧಿ ಸುಂದರ ದುರುಪಯೋಗಪಡಿಸಿಕೊಂಡು ಬಾಲಕಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದ. ಅಲ್ಲದೆ ಬಾಲಕಿಗೆ ನಶ್ಯ ಕೊಡಿಸುವ ನೆಪದಲ್ಲಿ ಆಕೆಯನ್ನು ಅತ್ಯಾಚಾರ ನಡೆಸಿದ್ದ. ಅಲ್ಲದೆ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಒಡ್ಡಿದ್ದ.
ಈ ಬಗ್ಗೆ ಮಾಹಿತಿ ಪಡೆದಿದ್ದ ಮಂಗಳೂರಿನ ಚೈಲ್ಡ್ಲೈನ್ ಸಂಘಟನೆ ಸದಸ್ಯರು ಪೊಲೀಸರ ನೆರವಿನಿಂದ ಪ್ರಕರಣವನ್ನು ಪತ್ತೆಹಚ್ಚಿದ್ದರು. ಅಲ್ಲದೆ 2013ರ ಆ.23ರಂದು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಂದಿನ ಇನ್ಸ್ಪೆಕ್ಟರ್ ದಿನಕರ ಶೆಟ್ಟಿ ಆರೋಪಿ ಸುಂದರನನ್ನು 2013ರ ಆ.24ರಂದು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಎಂ.ಜೆ.ಉಮಾ ಪ್ರಕರಣದಲ್ಲಿ 16 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದರು. ಮೊದಲು ಈ ಪ್ರಕರಣ ಜೆಎಂಎಫ್ಸಿ ಎರಡನೇ ನ್ಯಾಯಾಲಯದಲ್ಲಿ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಆ ನ್ಯಾಯಾಲಯದ ನ್ಯಾಯಾಧೀಶರಾದ ರೂಪಶ್ರೀ ರೈ ಅವರನ್ನೂ ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ಪ್ರಕರಣದಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಪುಷ್ಪರಾಜ ಕೆ. ಅಡ್ಯಂತಾಯ ವಾದ ಮಂಡಿಸಿದ್ದರು.