ಕಲಬುರ್ಗಿ: ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳ ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆ ಬಯಲು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರ ಗೊಳಿಸಿರುವ ಜಿಲ್ಲಾ ಪೊಲೀಸರು ಪ್ರೌಢಶಾಲೆಯ ಇಬ್ಬರು ಶಿಕ್ಷಕರನ್ನು ಬುಧವಾರ ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಆಲಮೇಲ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಅಶೋಕ ವೆಂಕಪ್ಪ ಒಡೆಯರ್ ಹಾಗೂ ಆಳಂದ ತಾಲ್ಲೂಕು ನೆಲ್ಲೂರ ಸರ್ಕಾರಿ ಪ್ರೌಢಶಾಲೆಯ ಬಸವರಾಜ ಕೋಷ್ಠಿ ಬಂಧಿತರು. ಈ ಪೈಕಿ ಅಶೋಕ ಅವರಿಂದ ₨ 4 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಿಸಿ, ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಡಿ. 11ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ನಾಗರಿಕ ಮತ್ತು ಮಹಿಳಾ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳ ಭರ್ತಿಗಾಗಿ ಅ. 16 ರಂದು ರಾಜ್ಯದಾದ್ಯಂತ ಲಿಖಿತ ಪರೀಕ್ಷೆ ನಡೆದಿತ್ತು. ಉತ್ತರ ಪತ್ರಿಕೆ ಬಯಲು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ. 18 ರಂದು ಮೂವರು ಹಾಗೂ ನ. 23 ರಂದು ಎಂಟು ಆರೋಪಿಗಳನ್ನು ಬಂಧಿಸ ಲಾಗಿತ್ತು. ಇದುವರೆಗೆ ಒಟ್ಟು 13 ಮಂದಿಯನ್ನು ಬಂಧಿಸಿದಂತಾಗಿದೆ.