ಕಲಬುರ್ಗಿ: ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆ ಬಯಲು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಯನ್ನು ಗುರುವಾರ ಬಂಧಿಸಿರುವ ಪೊಲೀಸರು, ಆತನಿಂದ ₨ 73 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹಂಚನಾಳ ಗ್ರಾಮದ ಸಿದ್ದಣ್ಣ ಹಣಮಂತರಾಯ ದೇವದುರ್ಗ ಬಂಧಿತ. ಈತ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಾದಗೊಂಡನಹಳ್ಳಿಯ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ಈತನಿಂದ ಒಟ್ಟು ₨ 73,03,500 ನಗದು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಣ್ಣನನ್ನು ಗುರುವಾರ ಬಂಧಿಸಲಾಗಿದೆ. ಇನ್ನೂ ಹಲವು ಆರೋಪಿಗಳ ಕೈವಾಡ ಇರುವ ಶಂಕೆ ಇದೆ. ಬೆಂಗಳೂರು ಮೂಲದ ಇಬ್ಬರು ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳನ್ನು ಕೊಟ್ಟಿದ್ದು, ತಾನು ಬೇರೆಯವರಿಗೆ ಅವುಗಳನ್ನು ಮಾರಾಟ ಮಾಡಿರುವುದಾಗಿ ಸಿದ್ದಣ್ಣ ಒಪ್ಪಿ ಕೊಂಡಿದ್ದಾನೆ’ ಎಂದು ತಿಳಿಸಿದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಬ್ಬಿನ ಹೊಲದಲ್ಲಿ ಕಂತೆ ಕಂತೆ ಹಣ!: ‘ಹಂಚನಾಳ ಗ್ರಾಮದ ಕಬ್ಬಿನ ಹೊಲದಲ್ಲಿ ಈತ ಹಣವನ್ನು ಬಚ್ಚಿ ಟ್ಟಿದ್ದ. ಒಂದು ಸಾಲಿನಲ್ಲಿ ₨ 2 ಲಕ್ಷ, ಮತ್ತೊಂದು ಸಾಲಿನಲ್ಲಿ ₨ 5 ಲಕ್ಷ, ಇನ್ನೊಂದೆಡೆ ₨ 10 ಲಕ್ಷ,ಹೀಗೆ ಬೇರೆ ಬೇರೆ ಜಾಗದಲ್ಲಿ ಬರೋಬ್ಬರಿ ₨ 73,03,500 ಇರಿಸಿದ್ದ.