ಬೆಂಗಳೂರು, ನ.29: ನೇತ್ರದಾನದ ಮೂಲಕ ಡಾ.ರಾಜ್‌ಕುಮಾರ್ ಅಮೋಘವಾದ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಅನುಸರಿಸಿ ತಾವುಕೂಡ ನೇತ್ರದಾನ ಮಾಡುವುದಾಗಿ ಘೋಷಿಸಿದರು.
ಕಂಠೀರವ ಸ್ಟುಡಿಯೋದಲ್ಲಿಂದು ನಡೆದ ಡಾ.ರಾಜ್‌ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಟ ಸಾರ್ವಭೌಮರನ್ನು ಆದರ್ಶನೀಯ ವ್ಯಕ್ತಿ ಎಂದು ಹೊಗಳಿದ್ದಲ್ಲದೆ ಅವರ ಹಾದಿಯಲ್ಲಿ ನಡೆಯುವಂತೆ ಕರೆ ನೀಡಿದರು. ಕೋಟ್ಯಾಂತರ ಜನ ಅಂಧತ್ವದಿಂದ ಬಳಲುತ್ತಿದ್ದಾರೆ. ನೇತ್ರದಾನ ಅವರ ಬದುಕಿಗೆ ಬೆಳಕು ನೀಡಲಿದೆ ಎಂಬ ಅಮೂಲ್ಯವಾದ ಸಂದೇಶವನ್ನು ರಾಜ್ ಸಾರಿದ್ದರು.
ತಮ್ಮ ಜೀವನದ ನಂತರ ಕಣ್ಣುದಾನ ಮಾಡಿದ್ದರು ಎಂದರು. ತಾವೂ ಕೂಡ ನೇತ್ರದಾನ ಮಾಡುವುದಾಗಿ ಹೇಳಿ ಸ್ಥಳದಲ್ಲೇ ಪ್ರಮಾಣಪತ್ರಕ್ಕೆ ಸಹಿಹಾಕಿದರು. ರಾಜ್‌ಕುಮಾರ್ ಮೇರುನಟ ಎಂಬುದರ ಜತೆಗೆ ನಮ್ಮ ಜಿಲ್ಲೆಯವರು ಎಂಬ ಹೆಮ್ಮೆ ನಮಗಿದೆ. ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿದ್ದ ಅವರು ಅದ್ವಿತೀಯ ಕಲಾವಿದ. ಗೋಕಾಕ್ ಚಳವಳಿಗೆ ಹೆಚ್ಚು ಶಕ್ತಿ ತಂದುಕೊಟ್ಟ ಮಹಾನ್ ನಾಯಕ ಎಂದು ಬಣ್ಣಿಸಿದರು.
ಬೇಡರಕಣ್ಣಪ್ಪ ಚಿತ್ರದಿಂದ ಆರಂಭವಾದ ಅವರ ಸಿನಿಮಾಯಾನ 206 ಚಿತ್ರಗಳ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಹಾಗೂ ಬಾಂಡ್ ಶೈಲಿಯ ಚಿತ್ರಗಳಲ್ಲಿ ನಟಿಸಿರುವ ರಾಜ್ ಅವರ ಕಲೆ ಆಡುಮುಟ್ಟದ ಸೊಪ್ಪಿಲ್ಲದಂತೆ ಆಗಿದೆ. ರಾಜ್ ಅಭಿನಯಿಸದ ಪಾತ್ರಗಳಿಲ್ಲ ಎಂಬ ಮಾತಿಗೆ ಅವರು ಅನ್ವರ್ಥವಾಗಿದ್ದರು. ಯಾವುದೇ ಪಾತ್ರವಾದರೂ ಜೀವ ತುಂಬುತ್ತಿದ್ದರು, ರಾಜ್ ಅವರಿಗೆ ರಾಜ್ ಅವರೇ ಸಾಟಿ. ಅವರ ಸರಳ ಸಜ್ಜನಿಕೆ ವಿನಯ ವಂತಿಕೆ ನಾಡಿನ ಜನರಲ್ಲಿನ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಸಿದ್ದರಾಮಯ್ಯ ಕೊಂಡಾಡಿದರು. ಬೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲವಾದರೂ, ಎಲ್ಲಾ ಕಾಲಕ್ಕೂ ಎಲ್ಲ ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿರುವ ಮೂಲಕ ಜೀವಂತವಾಗಿದ್ದಾರೆ ಎಂದು ಅಭಿಪ್ರಾಯಪ್ಟರು. ತಮಗೆ ಸಂದ ಗೌರವ, ಸನ್ಮಾನವನ್ನು ನಾಡಿನ ಜನತೆಗೆ ಸಮರ್ಪಿಸಿದ್ದ ಅವರು ಅಭಿಮಾನಿಗಳನ್ನು ದೇವರೆಂದು ಹೇಳಿಕೊಳ್ಳುತ್ತಿದ್ದ ಮೇರು ವ್ಯಕ್ತಿತ್ವ ಹೊಂದಿದ್ದರು ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲಯ್ಯ ಮಾತನಾಡಿ, ರಾಜ್ ಹೆಸರಿನಲ್ಲಿ ಕನ್ನಡ ಅಧ್ಯಯನ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿದರು. ತಮ್ಮ ಕ್ಷೇತ್ರದಲ್ಲಿ ರಾಜ್‌ಕುಮಾರ್ ಅವರ ಆತ್ಮವಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ನೆರವು ನೀಡುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ, ಸೂಪರ್‌ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ರೆಬೆಲ್ ಸ್ಟಾರ್ ಹಾಗೂ ಸಚಿವ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಹಿರಿಯ ನಟಿ ಬಿ.ಸರೋಜದೇವಿ, ರಾಜ್‌ಪತ್ನಿ ಪಾರ್ವತಮ್ಮ ರಾಜ್‌ಕುಮಾರ್, ಪುತ್ರರಾದ ಶಿವರಾಜ್‌ಕುಮಾರ್, ರಾಘವೇಂದ್ರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರ್, ಸಚಿವರಾದ ಉಮಾಶ್ರೀ, ರೋಷನ್ ಬೇಗ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟರಾದ ರಮೇಶ್, ಜಗ್ಗೇಶ್, ತಾರಾ, ಜಯಮಾಲ ಸೇರಿದಂತೆ ನಾಡಿನ ಗಣ್ಯತಿಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.