ಕುಂದಾಪುರ: ಕ್ಷುಲ್ಲಕ ಕಾರಣಕ್ಕಾಗಿ ಎರಡು ಕೋಮುಗಳ ಯುವಕರ ತಂಡಗಳ ನಡುವೆ ನಡೆದ ಘರ್ಷಣೆ ನಡೆದು ಓರ್ವನ ಬಂಧನವಾದ ಬೆನ್ನಿಗೆ ಮತ್ತೆ ಗಂಗೊಳ್ಳಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಮಸೀದಿಯ ಆಡಳಿತಕ್ಕೊಳ್ಳಪಟ್ಟ ಒಂದಸ್ತಿನ ಕಟ್ಟಡವೊಂದು ಬೆಂಕಿಗಾಹುತಿಯಾಗಿದ್ದು ಸಂಪೂರ್ಣ ಭಸ್ಮವಾದ ಘಟನೆ ಶುಕ್ರವಾರ ತಡ ರಾತ್ರಿ ಅಂದರೆ ಶನಿವಾರ ಮುಂಜಾನೆ ಒಂದು ಗಂಟೆ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಇಡೀ ಕಾಂಪ್ಲೆಕ್ಸ್ ಸುಟ್ಟು ಹೋಗಿದೆ. ಗಂಗೊಳ್ಳಿ ಹೊರಠಾಣೆಯ ಸಮೀಪವೇ ಸುಮಾರು ನೂರು ಮೀಟರ್ ಅಂತರದೊಳಗೆ ಇರುವ ಕಾಂಪ್ಲೆಕ್ಸ್ ಎನ್ನುವ ಕಟ್ಟಡವೇ ಬೆಂಕಿಗಾಹುತಿಯಾಗಿದ್ದು, ಅಗ್ನಿ ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ.
ಶಾರ್ಟ್ ಸರ್ಕ್ಯೂಟ್ ಅಲ್ಲ : ಅಂಗಡಿ ಮಾಲೀಕರ ಪ್ರಕಾರ ದುರ್ಘಟನೆಗೆ ಕಾರಣವಲ್ಲ ಎನ್ನಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಪ್ರತೀ ದಿನವೂ ಅಂಗಡಿ ಮುಚ್ಚಿ ಹೋಗುವ ಮುನ್ನ ಮೈನ್ ಸ್ವಿಚ್ ಆಫ್ ಮಾಡಿಯೇ ಹೋಗಲಾಗುತ್ತಿತ್ತು. ಪ್ರತಿಯೊಂದು ಅಂಗಡಿಯವರೂ ಇದನ್ನು ಚಾಚೂ ತಪ್ಪದೇ ಮಾಡುತ್ತಿದ್ದು, ಶುಕ್ರವಾರ ರಾತ್ರಿಯೂ ಎಲ್ಲರೂ ನೆನಪಿನಲ್ಲಿ ಸ್ವಿಚ್ ಆಫ್ ಮಾಡಿ ಹೋಗಿದ್ದರು ಎನ್ನಲಾಗುತ್ತಿದೆ. ಅಲ್ಲದೇ ಆಕಸ್ಮಿಕ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಯಾವುದೇ ಬೆಂಕಿ ಹರಡುವ ವಸ್ತುಗಳು ಅಂಗಡಿಯೊಳಗಿರಲು ಸಾಧ್ಯವಿಲ್ಲ. ಹಾಗಾಗಿ ಆಕಸ್ಮಿಕ ಬೆಂಕಿ ಅನಾಹುತವಾಗಲೀ ಶಾರ್ಟ್ ಸರ್ಕ್ಯೂಟ್ ಆಗಲೀ ಘಟನೆಗೆ ಕಾರಣವಲ್ಲ ಎನ್ನಲಾಗುತ್ತಿದೆ.
ಈ ಕಾಂಪ್ಲೆಕ್ಸ್ನಲ್ಲಿ ಒಟ್ಟು ಹತ್ತು ಅಂಗಡಿಗಳಿದ್ದು, ನಾಲ್ಕು ಹಾರ್ಡ್ವೇರ್ ಶಾಪ್ಗಳಿವೆ. ತಲಾ ಒಂದೊದಂದು ಟೈಲರಿಂಗ್, ಬಟ್ಟೆ ಅಂಗಡಿ, ಗಿಪ್ಟ್ ಸೆಂಟರ್, ಕಾಸ್ಮೆಟಿಕ್ಸ್ ಮತ್ತು ಮಕ್ಕಳ ಸಾಮಾಗ್ರಿಗಳು ಹಾಗೂ ಫರ್ನಿಚರ್ ಅಂಗಡಿಗಳಿದ್ದವು. ಬೆಂಕಿನಾಹುತದಲ್ಲಿ ಎಲ್ಲವೂ ಸಂಪೂರ್ಣ ಸುಟ್ಟು ಹೋಗಿದ್ದು, ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಬೆಂಕಿ ಹತ್ತಿಕೊಳ್ಳುತ್ತಿರುವುದನ್ನು ಗಮನಿಸಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಅಗ್ನಿಶಾಮಕದಳವನ್ನು ಸ್ಥಳಕ್ಕೆ ಕರೆಯಿಸಿದ್ದು ಮೂರ್ನಾಲ್ಕು ಅಗ್ನಿಶಾಮಕ ಯಂತ್ರಗಳು ಆಗಮಿಸಿ ಬೆಂಕಿ ನಂದಿಸಲೆತ್ನಿಸಿದರೂ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಗಂಗೊಳ್ಳಿ ಉದ್ವಿಗ್ನ: ಕೋಮು ಸೂಕ್ಷ್ಮ ಪ್ರದೇಶವೆಂದೇ ಬಿಂಬಿತವಾದ ಗಂಗೊಳ್ಳಿಯಲ್ಲಿ ಎರಡೂ ಕೋಮುಗಳ ನಡುವೆ ಬೇರೆ ಬೇರೆ ಕಾರಣಕ್ಕೆ ಸೃಷ್ಟಿಯಾಗಿದ್ದ ದ್ವೇಷ ಬೂದಿ ಮುಚ್ಚಿದ ಕೆಂಡದಂತಿತ್ತು. ಯಾವುದೋ ಕ್ಷುಲ್ಲಕ ಕಾರಣಕ್ಕೆ ಗುರುವಾರ ರಾತ್ರಿ ಸುಮಾರು ೧೦ ಗಂಟೆಗೆ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿತ್ತು. ಇದೀಗ ಘರ್ಷಣೆಯ ಮಾರನೇ ದಿನ ರಾತ್ರಿ ಸಂಭವಿಸಿದ ಬೆಂಕಿ ಅನಾಹುತಕ್ಕೂ ಏನಾದರೂ ಸಂಬಂಧವಿದೆಯೇ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದ್ದು ತನಿಖೆ ನಡೆಸುತ್ತಿದ್ದಾರೆ. ಮೂಲವೊಂದರ ಪ್ರಕಾರ ಈವರೆಗೂ ಘಟನೆಗೆ ಸಂಬಂಧಪಟ್ಟಂತೆ ಮೂವರನ್ನು ವಶಪಡಿಸಿಕೊಂಡಿರುವ ಹಾಗೆಯೇ ಹಲವರನನು ವಿಚಾರಣೆ ನಡೆಸಿರುವ ಬಗ್ಗೆಯೂ ಮಾಹಿತಿಯಿದೆ.
ಘಟನ ಸ್ಥಳಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿ ವಾಸ್ತವ ಸ್ಥಿತಿಗತಿಗಳನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮದ ಭರವಸೆ ನೀಡಿದರು.
ಹಳೆಯ ಘಟನೆ: ಇನ್ನು ಗುರುವಾರ ರಾತ್ರಿ ನಡೆದ ಘರ್ಷಣೆಗೆ ಸಂಬಂಧಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆರೋಪಿ ಹನೀಫ್ ಎಂಬಾತನನ್ನು ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಬರುತ್ತಿದ್ದ ವೇಳೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಡಿ.೧೨ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾನೂನಿನಡಿಯಲ್ಲಿ ಯಾರೇ ತಪ್ಪು ಮಾಡಿದರೂ ಕಟ್ಟುನಿಟ್ಟಿನ ಕ್ರಮಕ್ಕೆ ಒಳಗಾಗುತ್ತಾರೆ. ಇದರಲ್ಲಿ ಅನುಮಾನ ಬೇಡ ಎಂದು ಕೋಮು ಸೂಕ್ಷ್ಮ ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಗುರುವಾರ ತಡ ರಾತ್ರಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿದ ಸಂದರ್ಭ ಪಶ್ಚಿಮ ವಲಯ ಐಜಿಪಿ ಡಾ. ಅಮೃತ್ಪಾಲ್ ಹೇಳಿದ್ದಾರೆ. ಆದರೆ ಪಶ್ಚಿಮ ವಲಯ ಐಜಿಪಿ ಹಾಗೂ ಜಿಲ್ಲಾ ಎಸ್ಪಿ ಗಂಗೊಳ್ಳಿ ಭೇಟಿ ನೀಡಿ ಕಟ್ಟೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ೨೪ ಗಂಟೆಗಳೊಳಗೆ ಶುಕ್ರವಾರ ರಾತ್ರಿ ಮತ್ತೆ ಅಗ್ನಿ ಅನಾಹುತ ಸಂಭವಿಸಿದ್ದು, ಅದೂ ಪೊಲೀಸ್ ಹೊರಠಾಣೆಗೆ ಕೇವಲ ಕೂಗಳತೆಯ ದೂರದಲ್ಲಿ ಘಟನೆ ನಡೆದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.