ಮಂಗಳೂರು,ನ.29: ಕಿನ್ನಿಗೋಳಿಯಿಂದ -ಮಂಗಳೂರು ರೂಟ್‌ನಲ್ಲಿ ಸಂಚರಿಸುವ `ರಾಜಶ್ರೀ’ ಹೆಸರಿನ ಖಾಸಗಿ ಬಸ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕುಡುಪು ನಿವಾಸಿ ಕಿರಣ್ ಕೋಟ್ಯಾನ್(42) ಎಂಬವರು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ಮಧ್ಯಾಹ್ನ 2:45ರ ಸುಮಾರಿಗೆ ನಗರದ ಲಾಲ್ ಬಾಗ್ ವೃತ್ತದ ಬಳಿ ನಡೆದಿದೆ.
ಬಜ್ಪೆ ಮಾರ್ಗವಾಗಿ ಬರುತ್ತಿದ್ದ ಬಸ್ ಲಾಲ್‍ಬಾಗ್ ಸಾಯಿಬೀನ್ ಕಾಂಪ್ಲೆಕ್ಸ್ ಸಮೀಪ ಸ್ಟೇಟ್‍ಬ್ಯಾಂಕ್ ತಿರುವು ಪಡೆಯುವಲ್ಲಿ ಘಟನೆ ಸಂಭವಿಸಿದೆ. ಕಿರಣ್ ಕೋಟ್ಯಾನ್ ಅವರು ಸಿಗ್ನಲ್ ಗಾಗಿ ಬೈಕನ್ನು ನಿಲ್ಲಿಸಿದ್ದು, ಸಿಗ್ನಲ್ ಕ್ಲಿಯರ್ ಆಗಿ ಮುಂದಕ್ಕೆ ಚಲಾಯಿಸಬೇಕು ಎನ್ನುವಷ್ಟರಲ್ಲಿ ಪಾದಚಾರಿಯೊಬ್ಬರು ರಸ್ತೆಯನ್ನು ಕ್ರಾಸ್ ಆಗಿದ್ದು, ಈ ವೇಳೆ ಬ್ರೇಕ್ ಹಾಕಿದ್ದಾರೆ. ಆಗ ಹಿಂಬದಿಯಿಂದ ಯಮದೂತನಂತೆ ಸಾಗಿಬಂದ `ರಾಜಶ್ರೀ’ ಹೆಸರಿನ ಖಾಸಗಿ ಬಸ್ ತಿರುವು ಪಡೆಯುವಲ್ಲಿ ಬೈಕ್ ಸಮೇತ ಕಿರಣ್ ರನ್ನು ಅಡಿಗೆ ಹಾಕಿ ಮುನ್ನುಗ್ಗಿದೆ.
ಬೈಕ್ ಬಸ್ಸಿನಡಿಗೆ ಬಿದ್ದು ನಜ್ಜುಗುಜ್ಜಾಗಿದ್ದು, ಕಿರಣ್ ಎದೆ, ಸೊಂಟ, ಕಾಲಿನ ಭಾಗಕ್ಕೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೂಡಲೇ ಕದ್ರಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿ ಮೃತದೇಹವನ್ನು ಎ.ಜೆ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ