ಮಂಗಳೂರು,ನ.29: ಕಂಬಳ ನಿಷೇಧ ವಿರೋಧಿಸಿ ದ.ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿರುವ ಕಂಬಳ ಸಮಿತಿ ಆಶ್ರಯದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತ್ತು.
ನಗರದ ಶಾಂತಿನಿಲಯದ ಬಳಿಯಿಂದ ಬೆಳಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಗೆ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಜತೆ ಕಂಬಳಕ್ಕೆ ಬಳಸುವ ಕೋಣಗಳನ್ನು ಶೃಂಗರಿಸಿ ಕರೆತರಲಾಗಿತ್ತು. 10 ಸಾವಿರಕ್ಕೂ ಅಧಿಕ ಮಂದಿ ಮೆರವಣಿಗೆಯ ಮೂಲಕ ಬಲ್ಮಠ, ಹಂಪನಕಟ್ಟೆ , ಎ.ಬಿ.ಶೆಟ್ಟಿ ವೃತ್ತ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಭೆ ಸೇರಿದರು. ನಾಸಿಕ್ ಬ್ಯಾಂಡ್‌ನ ಹೊಡೆತಕ್ಕೆ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ಕಂಬಳ ಪ್ರೇಮಿಗಳು `ಕಂಬಳ ಬೇಕು’ ಎಂದು ಘೋಷಣೆ ಕೂಗೂತ್ತಿರುವುದು ಕಂಡು ಬಂತು.
ಮುಂಜಾನೆಯಿಂದ ಜನರ ಗದ್ದಲ, ಕಂಬಳದ ಕೋಣಗಳು ರಸ್ತೆಯಲ್ಲೇ ತಾಲೀಮು ನಡೆಸುತ್ತಿದ್ದರೆ ಸಾವಿರಾರು ಮಂದಿ ಕಂಬಳ ಪ್ರೇಮಿಗಳು ಒಂದೆಡೆ ಸೇರಿ ಅಕ್ಷರಶ: ಕಂಬಳದ ವಾತಾವರಣ ನಿರ್ಮಾಣಗೊಂಡಿತ್ತು. ರಸ್ತೆಯಲ್ಲಿ ಗದ್ದಲ, ಶೃಂಗಾರಗೊಂಡ ಕೋಣಗಳು ಸಾಲು, ರಸ್ತೆಯ ತುಂಬಾ ಕಂಬಳದ ಕೋಣಗಳು ಸಂಚಾರ, ರಸ್ತೆಯಲ್ಲಿಯೇ ತಾಲೀಮು ಕಂಬಳ ನಡೆಸುತ್ತಾರೆನೋ? ಎನ್ನುವ ರೀತಿಯಲ್ಲಿ ಸೇರಿದ್ದರು. ತುಳುನಾಡಿನ ಐತಿಹಾಸಿಕ ಕಂಬಳ ಕ್ರೀಡೆಯನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕಂಬಳ ಪ್ರೇಮಿಗಳು ಮತ್ತು ಕಂಬಳದ ಕೋಣಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದಾಗ ಕಂಡುಬಂದ ದೃಶ್ಯವಿದು.
ಪ್ರಾಣಿ ಹಿಂಸೆ ಎಂಬ ಕಾರಣಕ್ಕೆ ಕಂಬಳವನ್ನು ಸುಪ್ರೀಂ ಕೋರ್ಟ್ ನಿಷೇಧಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕಂಬಳ ಪ್ರೇಮಿಗಳು ಖಂಡಿಸಿದ್ದರು. ಕಂಬಳ ನಿಷೇಧದ ಹಿನ್ನೆಲೆಯಲ್ಲಿ ಶಿರ್ವದಲ್ಲಿ ನಡೆಯಬೇಕಿದ್ದ ಕಂಬಳವನ್ನು ನಿಲ್ಲಿಸಲಾಗಿತ್ತು.ರಾಜ್ಯ ಸರಕಾರ ಈ ಬಗ್ಗೆ ಇನ್ನೂ ಕೂಡ ನಿರ್ದಿಷ್ಟ ತೀರ್ಮಾನಕ್ಕೆ ಬರದ ಹಿನ್ನೆಲೆಯಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ.
**********************************************************************************
ಕಂಬಳ ನಿಷೇಧ ಹಿಂಪಡೆಯದಿದ್ದರೆ ಉಗ್ರ ಹೋರಾಟ : ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಭಾಸ್ಕರ್ ಸುಬ್ರಾಯ ಕೋಟ್ಯಾನ್
ಮಂಗಳೂರು: ಜಾತಿ-ಧರ್ಮ, ಮೇಲು-ಕೀಳು ಭಾವನೆಯನ್ನು ಮೀರಿ ನಿಂತ ಸಂಪದ್ಭರರಿತ ಜಾನಪದ ಕ್ರೀಡೆ ತುಳುನಾಡಿನ ಕಂಬಳ. ಇದು ಕರಾವಳಿಯ ವೈಭವವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಕ್ರೀಡೆಯೂ ಹೌದು. ಆದರೆ ಪ್ರಾಣಿ ದಯಾ ಸಂಘದ ತಪ್ಪು ಮಾಹಿತಿಯಿಂದಾಗಿ ನಿಷೇಧಕ್ಕೊಳಗಾಗಿರುವುದು ಖೇದಕರ. ಅಹಿಂಸಾತ್ಮಕ ಕಂಬಳ ಇಲ್ಲಿ ನಡೆಯುತ್ತಿದ್ದು, ಇದಕ್ಕೆ ಇನ್ನು ಮುಂದಿನ ದಿನಗಳಲ್ಲೂ ಬದ್ಧವಾಗಿದ್ದೇವೆ. ಆದುದರಿಂದ ತಕ್ಷಣ ಕಂಬಳ ನಿಷೇಧ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟಕ್ಕೂ ಸಿದ್ಧ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಭಾಸ್ಕರ್ ಸುಬ್ರಾಯ ಕೋಟ್ಯಾನ್ ಹೇಳಿದರು.
ಇದು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಕಂಬಳ ಸಮಿತಿಯ ವತಿಯಿಂದ ಕಂಬಳ ನಿಷೇಧವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಜ್ಯೋತಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಶಾಂತಿಯುತ ಪ್ರತಿಭಟನಾ ಜಾಥಾದ ಬಳಿಕ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಂಬಳದಲ್ಲಿ ಹಿಂಸೆ ನಡೆಯುತ್ತಿಲ್ಲ. ನಾವು ಯಾವ ರೀತಿ ಅಹಿಂಸಾತ್ಮಕವಾಗಿ ನಾವು ಕಂಬಳ ನಡೆಸುತ್ತಿದ್ದೇವೆ ಎಂಬುದನ್ನು ಪ್ರಾಣಿ ದಯಾ ಸಂಘದವರು ಬಂದು ನೋಡಲಿ. ಕೆಲವೊಮ್ಮೆ ತಾಯಿ ಮಗುವಿಗೆ ಬುದ್ಧಿಗಾಗಿ ಎರಡು ಪೆಟ್ಟು ಕೊಡಬಹುದು, ಅದು ಹಿಂಸೆಯಾಗುವುದಿಲ್ಲ. ಅದರಂತೆ ಕೋಣದ ಮಾಲಿಕ ವರ್ಷವಿಡೀ ಮಗುವಿನಂತೆ ಪ್ರೀತಿಯಿಂದ ಸಾಕುತ್ತಾನೆ. ಅದರ ಬುದ್ಧಿಗಾಗಿ ಎರಡು ಪೆಟ್ಟು ಕೊಟ್ಟರೆ ತಪ್ಪೇ ಎಂದು ಹೇಳಿದರು.
ಕಂಬಳದ ಉಳಿವಿಗೆ ಸರಕಾರ ಬದ್ಧ- ಐವನ್: ಜಾಥಾ ಹೊರಡುವ ಮುನ್ನ ಬಲ್ಮಠದಲ್ಲಿ ಕಂಬಳಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಂಬಳ ಜಾನಪದ ಕ್ರೀಡೆಯಾಗಿದ್ದು, ಇದು ಕರಾವಳಿ ಜನರ ಅಭಿಮಾನದ ಪ್ರತೀಕ. ಇದನ್ನು ಉಳಿಸಲು ಸರಕಾರ ಬದ್ಧವಾಗಿದೆ. ಸರಕಾರ ಈತನಕ ಕಂಬಳವನ್ನು ಪ್ರೋತ್ಸಾಹಿಸುತ್ತಲೇ ಬಂದಿದೆ. ಕಂಬಳಕ್ಕಾಗಿ ರಾಜ್ಯ ಪ್ರಶಸ್ತಿ ನೀಡಿದೆ, ಅನುದಾನ ನೀಡಿದೆ. ಭತ್ತದ ಬೆಳೆ ಪ್ರೋತ್ಸಾಹಕ್ಕೆ ಕಂಬಳವೂ ಸಹಕಾರಿ. ಈ ಕ್ರೀಡೆ ಉಳಿಯಬೇಕು, ಮುಂದೆ ನಡೆಯಲೇ ಬೇಕು. ಈ ಬಗ್ಗೆ ಸರಕಾರದ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲೇ ಕಂಬಳ ನಿಷೇಧ ಹಿಂತೆಗೆಯಲು ಶ್ರಮಿಸುವೆ. ಮುಂದಿನ ದಿನಗಳಲ್ಲಿ ಕೋಣ ಓಡಿಸುವವನಿಗೂ ಏಕಲವ್ಯ ಪ್ರಶಸ್ತಿ ನೀಡಬೇಕು ಎಂಬ ಅಭಿಲಾಷೆ ನನ್ನದ್ದು ಎಂದು ಅವರು ಹೇಳಿದರು.
ಪ್ರತಿಭಟನೆ ಸಭೆಯ ಬಳಿಕ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮೂಲಕ ಕಂಬಳ ನಿಷೇಧ ಹಿಂತೆಗೆಯಲು ರಾಜ್ಯಪಾಲ ವಜುಬಾ ರೂಢಬಾಯಿ ವಾಲರಿಗೆ ಮನವಿ ಮಾಡಲಾಯಿತು. ಈ ಸಂದರ್ಭ ಕಂಬಳ ಸಮಿತಿಯ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಉಪಾಧ್ಯಕ್ಷರಾದ ತಿರುವೈಲುಗುತ್ತು ನವೀನ್ ಚಂದ್ರ ಆಳ್ವ, ಕೂಳೂರು ಪೊಯ್ಯೆಲು ಪಿ.ಆರ್. ಶೆಟ್ಟಿ, ನಂದಳಿಕೆ ಶ್ರೀಕಾಂತ್ ಭಟ್, ಮಾಂಕಾಳಿಬೆಟ್ಟು ಸೀತಾರಾಮ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಬಾರಾಡಿ ಬೀಡು ಜೀವಂಧರ್ ಬಲ್ಲಾಳ್, ಪ್ರಮುಖರಾದ ಅಶೋಕ್ ಕುಮಾರ್ ರೈ, ಪಯ್ಯೋಟ್ಟು ಸದಾಶಿವ ಸಾಲ್ಯಾನ್, ಕಂಬಳ ಸಂರಕ್ಷಣೆ ಮತ್ತು ತರಬೇತಿ ಅಕಾಡೆಮಿ ಅಧ್ಯಕ್ಷ ಗುಣಪಾಲ ಕಡಂಬ, ಕಂಬಳ ಸಮಿತಿ ತೀರ್ಪುಗಾರರ ಸಂಚಾಲಕರಾದ ರಾಜೀವ ಶೆಟ್ಟಿ ಎಡ್ತೂರು, ಹಿರಿಯ ತೀರ್ಪುಗಾರ ನಿರಂಜನ ರೈ ಮಠಂತಬೆಟ್ಟು ಹಾಗೂ ನಾನಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.