ಗುವಾಹಟಿ: ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ತೊಲಗಿಸಲು ನಾವೆಲ್ಲರು ಪಣತೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಅಸ್ಸಾಂನಲ್ಲಿ ಹಮ್ಮಿಕೊಂಡಿದ್ದ 49ನೇ ಡಿಜಿಪಿ ಹಾಗೂ ಐಜಿಪಿ ಸಮಾರಂಭವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಬಳಿಕ ಸಭೆಯನ್ನುದ್ದೇಶಿ ಮಾತನಾಡಿದ ಮೋದಿ, ಪೊಲೀಸರ ಕರ್ತವ್ಯ, ತ್ಯಾಗ, ಬಲಿದಾನಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ದೇಶದಲ್ಲಿ ಗುಪ್ತಚರ ಇಲಾಖೆಯ ಪಾತ್ರ ಅತ್ಯಮೂಲ್ಯವಾದದ್ದು, ಗುಪ್ತಚರ ಇಲಾಖೆ ಸಶಕ್ತವಾಗಿದ್ದಲ್ಲಿ, ಆಯುಧಗಳ ಅಗತ್ಯವಿಲ್ಲ ಎಂದರು.
ಚಾಣಾಕ್ಯನ ಹೇಳಿಕೆಯಂತೆ ಸಶಕ್ತ ರಾಷ್ಟ್ರಕ್ಕೆ ಗುಪ್ತಚರ ತಂತ್ರ ಅತಿಮುಖ್ಯ. ಸೂಕ್ತ ಆಯುಧಗಳು, ಸೂಕ್ತ ವ್ಯಕ್ತಿಗಳ ಬಳಿ ಇರಬೇಕು. ದೇಶ ಸ್ವಾತಂತ್ರ್ಯವಾದ ಬಳಿಕ ಇಲ್ಲಿಯವರೆಗೆ 33 ಸಾವಿರ ಪೊಲೀಸ್ ಸಿಬ್ಬಂದಿ ಪ್ರಾಣ ತ್ಯಾಗ ಮಾಡಿದ್ದಾರೆ. ದೇಶದ ಆಂತರಿಕ ಭದ್ರತೆಯಲ್ಲಿ ನಿಮ್ಮ ಕೊಡುಗೆ ಇದೆ. ಪೊಲೀಸರ ಬಲಿದಾನವನ್ನು ಎಂದಿಗೂ ಮರೆಯಬಾರದು, ಆದರೆ ಇಂದಿನ ಸಮಾಜ ಅವರ ಬಲಿದಾನವನ್ನು ಮರೆಯುತ್ತಿದೆ.
ದೇಶಕ್ಕಾಗಿ ಪ್ರಾಣ ತ್ಯಜಿಸಿದ ಪೊಲೀಸರನ್ನು ಗುರುತಿಸಬೇಕು. ಮುಂಬರುವ ಹೊಸ ಸಿಬ್ಬಂದಿಗೆ ಅವರ ಕರ್ತವ್ಯನಿಷ್ಠೆ, ಬಲಿದಾನಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು.ಅಲ್ಲದೆ ಕರ್ತವ್ಯದಲ್ಲಿ ಮಡಿದ ಪೊಲೀಸರ ಕುರಿತು ಶಾಲೆಗಳಲ್ಲಿ ಪಾಠ ಮಾಡಬೇಕು. ಪ್ರಾಣತ್ಯಾಗದ ಅಂಶಗಳು ಯುವ ಜನಾಂಕಕ್ಕೆ ಸ್ಪೂರ್ತಿಯಾಗಬೇಕು.ಪೊಲೀಸ್ ಅಕಾಡೆಮಿಯಲ್ಲಿ ಪೊಲೀಸರ ಬಲಿದಾನಗಳು ದಾಖಲಾಗಬೇಕು.ದೇಶದಲ್ಲಿನ ಮತ್ತೊಂದು ಜಠಿಲ ಸಮಸ್ಯೆ ಎಂದರೆ ಭ್ರಷ್ಟಾಚಾರ. ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ತೊಲಗಿಸಲು ನಾವೆಲ್ಲರು ಒಂದಾಗಬೇಕು.
ಭಯೋತ್ವಾದನೆ ವಿರೋಧಿ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಪೊಲೀಸ್ ಬಲಿದಾನಗಳ ಕುರಿತು ಈ ಬುಕ್ ತೆರೆಯಬೇಕು. ಅಲ್ಲದೆ ದೇಶದ ಎಲ್ಲ ರಾಜ್ಯಗಳಲ್ಲೂ ಈ ಬುಕ್ ಸೇವೆ ಸಿಗಬೇಕು. ಸಮಾಜದ ಭದ್ರತೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದು. ಅಂತೆಯೇ ಪೊಲೀಸರ ಕುಟುಂಬಗಳಿಗೆ ಸೂಕ್ತ ಭದ್ರತೆ ಸಿಗಬೇಕು. ಪ್ರತಿಯೊಬ್ಬ ಪೊಲೀಸನಿಗೂ ತನ್ನ ಕುಟುಂಬದ ಭದ್ರತೆಯ ಬಗ್ಗೆ ಕಾಳಜಿ ಇರುತ್ತದೆ. ಅವರ ಇಂಗಿತ ಅರಿತು ನಾವೆಲ್ಲ ಕೆಲಸ ಮಾಡಬೇಕು.
ಪೊಲೀಸರ ಭದ್ರತೆಗಾಗಿ ಹೊಸ ಕಾನೂನು ರಚಿಸುವುದು ಅತ್ಯಗತ್ಯ. ಪೊಲೀಸರ ಬಗ್ಗೆ ಜನರು ಹಲವು ದೂರುಗಳನ್ನು ಹೇಳುತ್ತಾರೆ. ಆದರೆ ಪೊಲೀಸರ ಬಗ್ಗೆ ಜನರು ಸಹಾ ಯೋಚನೆ ಮಾಡಬೇಕು. ಅವರು ಯಾರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನಾವೇಲ್ಲರು ಅರಿಯಬೇಕು. ಪ್ರತಿ ಪೊಲೀಸ್ ಠಾಣೆಗೂ ಅದರದ್ದೇ ವೇಬ್ಸೈಟ್ ತೆರಯಬೇಕು. ಈ ಮೂಲಕ ಜನತೆಗೆ ಪೊಲೀಸರ ಕತ್ಯರ್ವದ ಕುರಿತು ಮನವರಿಕೆಯಾಗುತ್ತದೆ. ಅಲ್ಲದೆ ತಮ್ಮ ಸಮಸ್ಯೆಗಳನ್ನು ನಿರ್ಭೀತಿಯಿಂದ ದಾಖಲು ಮಾಡಲು ಸಾಧ್ಯವಾಗುತ್ತದೆ.ಪೊಲೀಸರ ಬಗ್ಗೆ ಜನತೆಗೆ ಇರುವ ತಪ್ಪು ಭಾವನೆಯನ್ನು ತೊಲಗಿಸಬೇಕು. ಇಂತಹ ಸಭೆಗಳು ನಡೆಸುವುದಿರಿಂದ ಪೊಲೀಸರಿಗೆ ಮತ್ತಷ್ಟು ಉತ್ತೇಜನ ದೊರೆಯಲಿ.