ಬೆಳಗಾವಿ: 13 ವರ್ಷದ ಬಾಲಕಿ ಮೇಲೆ ಕಿರಾತಕನೋರ್ವ ನಿರಂತರವಾಗಿ ಅತ್ಯಾಚಾರ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಉಗಾರ್ಖುರ್ದ್ ಎಂಬ ಗ್ರಾಮದಲ್ಲಿ ಘಟನೆ ನಡೆದಿದ್ದು, ಅದೇ ಗ್ರಾಮದ ಸದಾಶಿವ ಬಂಡೊಳೆ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
9 ತಿಂಗಳ ಹಿಂದೆ ಉಗಾರ್ಖುರ್ದ್ ಗ್ರಾಮದ 13 ವರ್ಷದ ಬಾಲಕಿಯನ್ನು ಅಪಹರಿಸಿದ್ದ ಸದಾಶಿವ ಬಂಡೊಳೆ, ಬಾಲಕಿಯನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರ ಮನೆಯೊಂದಕ್ಕೆ ಹೊತ್ತೊಯ್ದಿದ್ದ. ಬಳಿಕ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾಲಕಿ ನಾಪತ್ತೆ ಕುರಿತು 9 ತಿಂಗಳ ಹಿಂದೆಯೇ ಪೋಷಕರು ಕಾಗವಾಡ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರಾದರೂ, ಪೊಲೀಸ್ ತನಿಖೆಯಲ್ಲಿ ಯಾವುದೇ ಸಂಶಯಾಸ್ಪದ ಮಾಹಿತಿಗಳು ದೊರೆತಿರಲಿಲ್ಲ. ಆದರೆ ಕಳೆದ ವಾರದ ವಿಚಾರಣೆ ವೇಳೆ ಪೊಲೀಸರಿಗೆ ದೊರೆತ ಸಣ್ಣ ಮಾಹಿತಿಯಿಂದಾಗಿ ಪೊಲೀಸರು ಸದಾಶಿವ ಬಂಡೊಳೆಯನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಸ್ತುತ ಬಾಲಕಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಲಕಿ ಕೂಡ ವಿಚಾರಣೆ ವೇಳೆ ಸದಾಶಿವ ಬಂಡೊಳೆ ನಿರಂತರ ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಿದ್ದಾಳೆ. ಹೀಗಾಗಿ ಬಾಲಕಿಯ ಪೋಷಕರು ನೀಡಿದ್ದ 363ರ ಅಡಿಯಲ್ಲಿನ ಅಪಹರಣ ದೂರನ್ನು 376ರ ಅಡಿಯಲ್ಲಿ ಅತ್ಯಾಚಾರ ಪ್ರಕರಣವೆಂದು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಆರೋಪಿ ಸದಾಶಿವ ಬಂಡೊಳೆ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿಯೂ ದೂರು ದಾಖಲಿಸಿಕೊಂಡಿದ್ದಾರೆ.