ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ೭ ನೆ ಆವೃತ್ತಿಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಚಾಲನೆ ದೊರಕಿತು.
ಬೆಂಗಳೂರು ಐ ಟಿ, ಬಿ ಟಿ ಗೆ ಅಷ್ಟೇ ಅಲ್ಲದೆ ಚಲನಚಿತ್ರ ಸಂಸ್ಕೃತಿಗೂ ವಿಶ್ವದಾದ್ಯಂತ ಖ್ಯಾತಿ ಗಳಿಸಬೇಕು. ಈ ನಿಟ್ಟಿನಲ್ಲಿ ಸದಭಿರುಚಿಯ ಸಿನೆಮಾಗಳಿಗೆ ಪ್ರೋತ್ಸಾಹ ನೀಡುವ ಸರ್ಕಾರದ ನಿಲುವಿಗೆ ಈ ಚಲನಚಿತ್ರೋತ್ಸವ ಪೂರಕವಾಗಿದೆ. ಚಲನಚಿತ್ರೋದ್ಯಮದ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ನಟರು ಮತ್ತು ಇತರ ವಿಭಾಗದ ಎಲ್ಲರನ್ನೂ ಸಂಪರ್ಕಿಸಿ ಹೊಸ ಸಿನೆಮಾ ನೀತಿಯನ್ನು ಜಾರಿಗೆ ತರಲು ಸರ್ಕಾರ ಬದ್ಧವಿದೆ ಹಾಗೆಯೇ ಸಿನಿಮೋತ್ಸವಕ್ಕೆ ಒಂದು ಶಾಶ್ವತ ಜಾಗವನ್ನು ನೀಡಲು ಕೂಡ ಸರ್ಕಾರದ ಯೋಜನೆ ಜಾರಿಯಲ್ಲಿದೆ ಎಂದರು ಮುಖ್ಯಮಂತ್ರಿ ಸಿದ್ದರಾಮಯ್ಯ.
ಗೌರವ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ನಟಿ ಸುಹಾಸಿನಿ ಅವರು ಕನ್ನಡದದಲ್ಲೆ ಮಾತು ಆರಂಭಿಸಿ ನನಗೆ ಬೆಂಗಳೂರು ಮತ್ತು ಕರ್ನಾಟಕ ತವರಿದ್ದಂತೆ. ಚೆನ್ನೈ ನಲ್ಲಿ ನನಗೆ ಮನೆ ಇಲ್ಲ. ಆದರೆ ಬೆಂಗಳೂರಿನಲ್ಲಿದೆ. ನಾನು ತಮಿಳು ಚಲನಚಿತ್ರಗಳಿಗಿಂತ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದೇನೆ, ಹಾಗಾಗಿ ನಾನು ಕನ್ನಡದವಳೇ ಎಂದ ಸುಹಾಸಿನಿ, ನಾನು ೨೮೫ ಸಿನೆಮಾಗಳಲ್ಲಿ ನಟಿಸಿರುವ ಖ್ಯಾತ ನಟಿಯಾಗಿ ಇಲ್ಲಿಗೆ ಬಂದಿಲ್ಲ, ಬದಲಾಗಿ ಸಿನೆಮಾಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿರುವವಳಾಗಿ, ಸಿನೆಮಾದ ವಿದ್ಯಾರ್ಥಿಯಾಗಿ ಇಲ್ಲಿಗೆ ಬಂದಿದ್ದೇನೆ ಎಂದರು.
ಯಾವುದೇ ಸಿನಿಮೋತ್ಸವದ ಗೆಲುವು ಇರುವುದು ಸಿನೆಮಾಗಳ ಆಯ್ಕೆಯಲ್ಲಿ. ಈ ಸಿನೆಮೋತ್ಸವದ ಆಯ್ಕೆ ಅದ್ಭುತವಾಗಿ. ಇದಕ್ಕಾಗಿ ಸಿನೆಮೋತ್ಸವದ ಸೃಜನಾತ್ಮಕ ನಿರ್ದೇಶಕರನ್ನು ಅಭಿನಂದಿಸಿದ ನಟಿ ಸುಹಾಸಿನಿ, ನಾವು ತಮಿಳಿನಲ್ಲಿ ಮಸಾಲೆ ಮತ್ತು ಜನಪ್ರಿಯ ಸಿನೆಮಾಗಳನ್ನು ಮಾಡುತ್ತಿದ್ದಾಗ, ಅಂತಹ ಸಂಪ್ರದಾಯ ಮುರಿದ ಖ್ಯಾತಿ ಕನ್ನಡ ಚಿತ್ರರಂಗದ್ದು. ಜಿ ವಿ ಅಯ್ಯರ್, ಪುಟ್ಟಣ್ಣ ಕಣಾಗಲ್, ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ ಇಂತಹವರು ಮಾಡಿದ ಪ್ಯಾರಲಲ್ ಸಿನೆಮಾಗಳಿಂದ ನಾವು ಬಹಳಷ್ಟು ಕಲಿತಿದ್ದೇವೆ. ಕಾಡು, ಚೋಮನ ದುಡಿ ಇಂತಹ ಸಿನೆಮಾಗಳಿಂದ ಬಹಳ ಪ್ರಭಾವಿತಳಾಗಿದ್ದೇನೆ ಎಂದರು.
ನಾನು ಇಷ್ಟು ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದರೂ ಇಲ್ಲಿಯವರೆಗೂ ಯಾವುದೇ ಕನ್ನಡ ನಿರ್ದೇಶಕ ನನಗೆ ಕಲಾತ್ಮಕ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿಲ್ಲ. ಅಂತಹ ಅವಕಾಶ ಬಂದರೆ ನಟಿಸಲು ಉತ್ಸುಕಳಾಗಿದ್ದೇನೆ ಎಂದ ನಟಿ ಸಮಾಜದ ಈವಿಲ್ ನಿವಾರಿಸುವ ಒಂದೇ ಉಪಾಯ ಕಲೆ. ಸಿನೆಮಾ ಅಂತಹದರಲ್ಲೊಂದು. ನನಗೆ ಸಿನೆಮಾನೆ ದೇವಾಲಯ. ನಾನು ಅಲ್ಲೇ ಪ್ರಾರ್ಥನೆ ಮಾಡುವುದು ಮತ್ತು ಧ್ಯಾನ ಮಾಡುವುದು ಎಂದರು.
ಇದಕ್ಕೂ ಮೊದಲು ಪ್ರಾಸ್ತಾವಿಕ ಭಾಷಣ ಮಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಅವರು ೧೮೯೬ ರಲ್ಲಿ “ಅರೈವಲ್ ಆಫ್ ಟ್ರೈನ್” ಎಂಬ ಮೊದಲ ಸಿನೆಮಾವನ್ನು ಜನ ನೋಡಿದಾಗ ಆತಂಕದಿಂದ ಪ್ರತಿಕ್ರಿಯಿಸಿದ್ದರು. ಆದರೆ ಇಂದು ಸಿನೆಮಾ ಎಲ್ಲರ ಪ್ರೀತಿ ಪಾತ್ರವಾಗಿದೆ. ಇನ್ನುಳಿದ ಎಲ್ಲ ಮಾಧ್ಯಮಗಳನ್ನು ಮೀರಿ ಮುಂದೆ ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ವಾರ್ತಾ ಸಂಪರ್ಕ ಸಚಿವ ರೋಷನ್ ಬೇಗ್ ಮಾತನಾಡಿ, ಕನ್ನಡದಲ್ಲಿ ಕಲಾತ್ಮಕ ಚಿತ್ರಗಳು ಬರುತ್ತಿರುವುದೇ ಕಡಿಮೆ. ಡಬಲ್ ಮೀನಿಂಗ್ ಇರುವ ಸಿನೆಮಾಗಳು ೧೦೦ ದಿನ ಓಡುತ್ತವೆ. ವಿಶ್ವ ಬೆರಗಾಗುವಂತ ಪ್ಯಾರಲಲ್ ಸಿನೆಮಾಗಳು ಕನ್ನಡದಲ್ಲಿ ಹೆಚ್ಚೆಚ್ಚು ಬರಬೇಕೆಂದರು.
ಮತ್ತೊಬ್ಬ ಗೌರವ ಅತಿಥಿ ಖ್ಯಾತ ಸಿನೆಮಾಟೋಗ್ರಾಫರ್ ಮತ್ತು ನಿರ್ದೇಶಕ ಗೋವಿಂದ ನಿಲಾಹನಿ ಮಾತನಾಡಿ ತಾವು ಬೆಂಗಳುರಿನ ಎಸ್ ಜೆ ಪಾಲಿಟೆಕ್ನಿಕ್ ನಲ್ಲಿ ಸಿನೆಮಾಟೊಗ್ರಾಫಿ ಕಲಿತಿದ್ದನ್ನು ನೆನಪಿಸಿಕೊಂಡು, ತಮ್ಮ ಗುರುಗಳಾದ ಖ್ಯಾತ ಸಿನೆಮಾಟೊಗ್ರಾಫರ್ ವಿ ಕೆ ಮೂರ್ತಿ ಅವರ ಸ್ಥಳ ಬೆಂಗಳೂರು. ಹೀಗಾಗಿ ಈ ನಗರಕ್ಕೂ ನನಗೂ ನಿಕಟ ಸಂಬಂಧವಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಟ ಯಶ್ ಮಾತನಾಡಿ, ಸಿನೆಮಾ ಬದುಕಿಗೆ ಸ್ಪೂರ್ಥಿ ಕೊಡುತ್ತದೆ. ಎರಡು ವರೆ ಘಂಟೆ ಸಿನೆಮಾ ತಿಂಗಳುಗಟ್ಟಲೆ ಕನಸು ಕಾಣುವ ಶಕ್ತಿ ಕೊಡುತ್ತದೆ. ಧನಾತ್ಮಕ ಶಕ್ತಿ ತುಂಬುತ್ತದೆ ಎಂದರು.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕನ್ನಡ ಸಂಸ್ಕೃತಿ ಸಚಿವೆ ಉಮಾಶ್ರೀ, ಸಿನೆಮೋತ್ಸವದ ಸೃಜನಾತ್ಮಕ ನಿರ್ದೇಶಕ ವಿದ್ಯಾಶಂಕರ್ ಉಪಸ್ಥಿತರಿದ್ದರು.
………………………………………
ಸಿನಿಮೋತ್ಸವದಲ್ಲಿ ನೋಡಲೆಬೇಕಾದ 5 ಚಿತ್ರಗಳು
ಬೆಂಗಳೂರು: ಡಿಸೆಂಬರ್ ೪ ರಿಂದ ಡಿಸೆಂಬರ್ ೧೧ ರವರೆಗೆ ನಡೆಯುವ ೭ನೆ ಬೆಂಗಳೂರು ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ, ನೀವು ಮಿಸ್ ಮಾಡಬಾರದ ಐದು ಸಿನೆಮಾಗಳ ಪಟ್ಟಿ ಇಲ್ಲಿದೆ.
ಸ್ವಪಾನಂ ( The Voiding Soul / ಭಾರತ/ ಮಲಯಾಳಂ/ ೧೫೦ ನಿಮಿಷ)
ಶಾಜಿ ಎನ್ ಕರುಣ್ ಅವರ ಆರನೆಯ ಚಲನಚಿತ್ರ ಇದು. ಈ ಚಲನಚಿತ್ರ, ಜೀವನ ಮತ್ತು ಕಲೆಯನ್ನು ಅಕ್ಕಪಕ್ಕದಲ್ಲಿಟ್ಟು, ಒಬ್ಬನ ಪ್ಯಾಶನ್ ಅರಳುವುದಕ್ಕೆ ಸೋತಾಗ ಉಂಟಾಗುವ ಭಾವನೆಗಳನ್ನು ಸೆರೆ ಹಿಡಿಯುತ್ತದೆ. ಈ ಸಿನೆಮಾದ ನಟರಲ್ಲೊಬ್ಬರಾದ ಜಯರಾಂ ತಮ್ಮ ಜೇವನದ ಅದ್ಭುತ ನಟನೆ ನೀಡಿದ್ದಾರೆ. ಕಾದಂಬರಿ, ಲಕ್ಷ್ಮಿ ಗೋಪಾಲ ಸ್ವಾಮಿ, ಸಿದ್ದಿಕ್ ಮತ್ತು ವಿನೀತ್ ಇತರ ನಟರು.
ಕಳೆದ ದುಬೈ ಚಲನಚಿತ್ರೋತ್ಸವದಲ್ಲಿ ಈ ಸಿನೆಮಾ ಪ್ರದರ್ಶನ ಕಂಡಿತ್ತು. ಗೋವಾದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಸಿನೆಮಾಗಳ ವಿಭಾಗದಲ್ಲಿ ಪ್ರದರ್ಶನ ಕಂಡಿದ್ದು, ಬಿಫ್ಸ್ ನಲ್ಲಿ ಏಶಿಯಾ ಸಿನೆಮಾ ಸ್ಪರ್ಧಾ ವಿಭಾಗದಲ್ಲಿ ಸ್ಥಾನ ಪಡೆದಿದೆ.
ಟು ಡೇಸ್, ಒನ್ ನೈಟ್ (ಬೆಲ್ಜಿಯಮ್/ಇಟಲಿ/ಫ್ರಾನ್ಸ್/೯೫ ನಿಮಿಷ)
ಸದ್ಯಕ್ಕೆ ಯೂರೋಪಿಯನ್ ದೇಶಗಳು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಬಿಂಬಿಸಿರುವ ಟು ಡೇಸ್, ಒನ್ ನೈಟ್ ಸಿನೆಮಾದ ನಿರ್ದೇಶಕರು ಡಾರ್ಡೆನ್ನೆ ಸಹೋದರರು. ಆಸ್ಕರ್ ಪ್ರಶಸ್ತಿ ವಿಜೇತೆ ಮಾರಿಯೋನ್ ಕಾಟಿಲ್ಲಾರ್ಡ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ, ತನ್ನ ಕೆಲಸ ಉಳಿಸಿಕೊಳ್ಳಲು ಒಬ್ಬ ಮಹಿಳೆ ತನ್ನ ಗಂಡ ಜೊತೆ, ತನ್ನ ಸಹೋದ್ಯೋಗಿಗಳು ತಮ್ಮ ಬೋನಸ್ ಅನ್ನು ತ್ಯಜಿಸುವಂತೆ ಒಪ್ಪಿಸುವ ಕಥಾ ಹಂದರವಿದೆ. ಈ ಸಿನೆಮಾ ವಿಶ್ವ ಸಿನೆಮಾಗಳ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ.
ಮಿಷನ್ ರೇಪ್, ಎ ಟೂಲ್ ಆಫ್ ವಾರ್ (ಡೆನ್ಮಾರ್ಕ್/ ೫೮ ನಿಮಿಷ)
ಅನೆತ್ತೆ ಮಾರಿ ಒಸ್ಲೇನ್ ಮತ್ತು ಕಾಟಿಯಾ ಫೋರ್ಬೆಟ್ ಪೀಟರ್ಸನ್ ನಿರ್ದೇಶಿಸಿರುವ ಈ ಚಲನಚಿತ್ರ ಆಧುನಿಕ ಯುದ್ಧದ ತಂತ್ರವಾಗಿ ರೇಪ್ ಉಪಯೋಗಿಸಿಕೊಳ್ಳುವುದರ ಕಥಾ ಹಂದರವಿದೆ.
೧೯೯೨-೯೫ ರ ಬಾಲ್ಕನ್ ಯುದ್ಧದ ವೇಳೆಯಲ್ಲಿ ಗುಂಪಾಗಿ ರೇಪ್ ಮಾಡಿದ್ದಕ್ಕೆ ಸುಮಾರು ೪೦ ರಿಂದ ೪೫ ಸಾವಿರ ಮಹಿಳೆಯರು ಬಲಿಪಶುಗಳಾಗಿದ್ದರು. ಇಪ್ಪತ್ತು ವರ್ಷಗಳ ನಂತರ ಕೆಲವೇ ಕೆಲವು ಜನ ಈ ಲೈಂಗಿಕ ಹಿಂಸೆಯ ಯುದ್ಧ ಅಪರಾಧಗಳು ತನಿಖೆಯಾಗಿ ಕೆಲವರಿಗಷ್ಟೇ ಶಿಕ್ಷೆಯಾಗಿದೆ. ತಾವು ಘನತೆಯಿಂದ ಬದುಕಲು ಈ ಕಾನೂನು ನ್ಯಾಯವಷ್ಟೇ ಸಹಕಾರಿ ಅವರಿಗೆ.
ದ ಕಾನ್ಸ್ಟಾಂಟ್ ಫ್ಯಾಕ್ಟರ್ (ಪೋಲೆಂಡ್/೧೯೮೦)
ಹಿನ್ನೋಟ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ಚಲನಚಿತ್ರದ ನಿರ್ದೇಶಕ ಕ್ರಿಸ್ಟಾಫ್ ಜಾನುಸ್ಸಿ. ವಿಜ್ಞಾನದ ಬಗ್ಗೆ ಆಸಕ್ತಿಯಿರುವ ವಿಥೋಲ್ದ್ ಎಂಬ ಯುವಕ ತನ್ನ ವೈಯಕ್ತಿಕ ನೆಮ್ಮದಿಗೆ ಹೋರಾಡುವ ಕಥೆ ಇದು. ತಾನು ೧೨ ವರ್ಷದ ಬಾಲಕನಿರುವಾಗ ಹಿಮಾಲಯ ಏರಲು ಹೋಗಿ ಮೃತಪಟ್ಟ ತನ್ನ ತಂದೆಯ ನೆನಪಿನಲ್ಲಿ ಆ ಪರ್ವತ ಶ್ರೇಣಿಯನ್ನು ಏರಲು ಢೃಢ ಸಂಕಲ್ಪ ಮಾಡುತ್ತಾನೆ. ತನ್ನ ಮಿಲಿಟರಿ ಸೇವೆಯ ನಂತರ ಗಣಿತಶಾಸ್ತ್ರವನ್ನು ಓದಿ ಎಲೆಕ್ಟ್ರಿಕ್ ಎಂಜಿನಿಯರ್ ಆಗಿ, ದುಡ್ಡು ಉಳಿತಾಯ ಮಾಡಿ ವಿದೇಶ ಪ್ರವಾಸ ಮಾಡಬೇಕು ಎಂದುಕೊಂಡಿರುತ್ತಾನೆ.
ಆದರೆ ತನ್ನ ಸಂಸ್ಥೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರವನ್ನು ಕಂಡು ಹಿಡಿದ ನಂತರ ತನ್ನ ಆಸೆಗಳನ್ನೆಲ್ಲಾ ತೊರೆದು ಅದರ ವಿರುದ್ಧ ಹೋರಾಟಕ್ಕೆ ನಿಲ್ಲುತ್ತಾನೆ. ಆದರೆ ಇದೇ ಅವನ್ನು ಮೂಲೆಗುಂಪಾಗಿಸಿ, ತನ್ನ ಕೆಲಸವನ್ನೇ ಕಳೆದುಕೊಳ್ಳಬೇಕಾಗುತ್ತದೆ.
ಇಡಾ (ಪೋಲೆಂಡ್/ ೮೨ ನಿಮಿಷ)
ಪೋಲೆಂಡ್ ನ ಯುದ್ಧಾ ನಂತರದ ೬೦ರ ದಶಕದಲ್ಲಿ ನಡೆಯುವ ಈ ಸಿನೆಮಾ, ಯುವ ನನ್ ಒಬ್ಬಳ ಕಥೆ ಹೇಳುತ್ತದೆ.
ಈ ಸಿನೆಮಾದ ನಟರ ಅದ್ಭುತ ನಟನೆ ಮತ್ತು ಅತ್ಯುತ್ತಮ ಚಿತ್ರೀಕರಣಕ್ಕೆ ಈ ಸಿನೆಮಾ ನೋಡಲೇಬೇಕು. ಇದು ಬಿಫ್ಸ್ ನಲ್ಲಿ ವಿಮರ್ಶಕರ ಮೆಚ್ಚುಗೆ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿದೆ.
-ಶ್ಯಾಮಾ ಕೃಷ್ಣ